ಆಪ್ತ ನ್ಯೂಸ್ ಯಲ್ಲಾಪುರ:
ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ವ್ಯಕ್ತಿಗೆ ಯಲ್ಲಾಪುರದ ಜೆ.ಎಂ.ಎಫ್.ಸಿ ನ್ಯಾಯಾಲಯ ಒಂದು ವರ್ಷದವರೆಗೆ ಪರಿವೀಕ್ಷಣಾಧಿಕಾರಿಯ ಮೇಲ್ವಿಚಾರಣೆಯಲ್ಲಿರುವಂತೆ ಆದೇಶಿಸಿ, 2 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಕಳೆದ 2023 ರ ಸೆಪ್ಟೆಂಬರ್ 28 ರಂದು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಸಿಮ್ರಾನ್ ತಂಬೋಲಿ ಎಂಬಾತ ಹಿಡಿದು, ತಿರುಗಿಸುತ್ತಿದ್ದ ಬಾವುಟ ಈ ವಿವಾದಕ್ಕೆ ಕಾರಣವಾಗಿತ್ತು.
ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟದಲ್ಲಿ ಅಶೋಕ ಚಕ್ರದ ಬದಲು ಹಳದಿ ಬಣ್ಣದ ಅರ್ಧ ಚಂದ್ರಾಕೃತಿ ಹಾಗೂ ಚಂದ್ರಾಕೃತಿಯ ಮೂರು ನಕ್ಷತ್ರಗಳನ್ನು ಆ ಬಾವುಟ ಹೊಂದಿತ್ತು. ರಾಷ್ಟ್ರಧ್ವಜವನ್ನು ಹೋಲುವ ಬಾವುಟವನ್ನು ಈ ರೀತಿ ವಿರೂಪಗೊಳಿಸಿ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಕಾರಣಕ್ಕಾಗಿ ಸಿಮ್ರಾನ್ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ನಡೆಸಿದ ಇಲ್ಲಿಯ ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರಿ.ಎಸ್ ಅವರು, ಆರೋಪಿಯನ್ನು ದೋಷಿ ಎಂದು ನಿರ್ಣಯಿಸಿ, ಆತ ಒಂದು ವರ್ಷದವರೆಗೆ ಪರಿವೀಕ್ಷಣಾಧಿಕಾರಿಯ ಮೇಲ್ವಿಚಾರಣೆಯಲ್ಲಿ ಇರುವಂತೆ ಆದೇಶಿಸಿ, 2 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತನಿಖಾಧಿಕಾರಿಯಾಗಿದ್ದ ಅಂದಿನ ಸಿಪಿಐ ರಂಗನಾಥ ನೀಲಮ್ಮನವರ್ ತನಿಖೆ ನಡೆಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಝೀನತ್ ಬಾನು ವಾದ ಮಂಡಿಸಿದ್ದರು.