ಬಸ್ ಡಿಪೋ ಮ್ಯಾನೇಜರ್ ಅಲಕ್ಷ್ಯ: ಜೋಯಿಡಾ ಗ್ರಾಮಗಳಿಗಿಲ್ಲ ಬಸ್ ಸೌಕರ್ಯ

Oct 31, 2025 - 10:25
 0  46
ಬಸ್ ಡಿಪೋ ಮ್ಯಾನೇಜರ್ ಅಲಕ್ಷ್ಯ: ಜೋಯಿಡಾ ಗ್ರಾಮಗಳಿಗಿಲ್ಲ ಬಸ್ ಸೌಕರ್ಯ
ಸಾಂದರ್ಭಿಕ ಚಿತ್ರ

ಆಪ್ತ ನ್ಯೂಸ್ ಜೋಯಿಡಾ:

ತಾಲೂಕಿನಲ್ಲಿ ಬಸ್ ಡಿಪೋ ಇಲ್ಲದೇ ಇರುವ ಕಾರಣ ಜೋಯಿಡಾ ತಾಲೂಕಿನ ಜನತೆ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ದಾಂಡೇಲಿಯ ಡಿಪೋ ಮ್ಯಾನೇಜರ್ ಅವರ ಅಲಕ್ಷವೇ ಕಾರಣ ಎಂದು ತಾಲೂಕಿನ ಜನರು ಆಪಾದಿಸಿದ್ದು ಕೂಡಲೇ ಕೆಲಸ ಮಾಡುವ ಡಿಪೋ ಮ್ಯಾನೇಜರ್ ನನ್ನು ಕೊಡಿ ಇಲ್ಲವೇ ಜೋಯಿಡಾಕ್ಕೆ ಬಸ್ ಡಿಪೋ ಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನ ವಿದ್ಯಾರ್ಥಿಗಳು, ಕ್ಯಾಸಲ್ ರಾಕ್, ಗುಂದ, ಡಿಗ್ಗಿ ಜನರು ಹೀಗೆ ಪ್ರತಿಯೊಂದು ಪಂಚಾಯತದವರು ತಮ್ಮ ಗ್ರಾಮಗಳಿಗೆ, ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ ಸಂಪರ್ಕ ಮಾಡಿಕೊಡಿ ಎಂದು ಹಲವಾರು ವರ್ಷಗಳಿಂದ ಕೇಳುತ್ತಾಲೇ ಇದ್ದಾರೆ.
ಈ ಹಿಂದೆ ಇದ್ದ ದಾಂಡೇಲಿ ಡಿಪೋ ವ್ಯವಸ್ಥಾಪಕರುಗಳು ಜನರ ಕಷ್ಟಕ್ಕೆ ಸ್ಪಂದಿಸುವ ಮೂಲಕ ಸೇವೆ ನೀಡುತ್ತಿದ್ದರು. ಆದರೆ ಈಗ ಕಳೆದ 3ವರ್ಷ ಗಳಿಂದ ಇರುವವರು ಜೋಯಿಡಾ ತಮಗೆ ಸಂಬಂದಿಸಿದ್ದಲ್ಲ   ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಜನರು ದೂರಿದ್ದಾರೆ. ನಡುರಾತ್ರಿ ರಸ್ತೆಯಲ್ಲಿ ವಿದ್ಯಾರ್ಥಿಗಳು ಬಸ್ ಬಾರದೇ ಪರದಾಡುವದು ತಾಲೂಕಿನಲ್ಲಿ ಹಲವಾರು ಬಾರಿ ನಡೆದಿದೆ. 
ವಿದ್ಯಾರ್ಥಿಗಳಿಗೆ ಬಿಡುವ ಬಸ್ ವೇಳೆಗೆ ಸರಿಯಾಗಿ ಬಿಡುವದು, ಪ್ರತಿ ದಿನ ಎಲ್ಲ ರೂಟ್ ಗಳ ಬಸ್ ಹೋಗಿದೆಯೇ ಎಂದು ಗಮನಿಸಬೇಕಾದವರೇ ನಿಷ್ಕಾಳಜಿ ಮಾಡಿದರೆ ಹೇಗೆ, ತಾಲೂಕಾ ಕೇಂದ್ರದಲ್ಲಿ ಬಸ್ ಪಾಸ್ ಕೌಂಟರ್ ಆರಂಭಿಸಿ ಎಂದು ವರ್ಷದ ಹಿಂದೆ ಕೆ ಡಿ ಪಿ ಸಭೆಯಲ್ಲಿ ಶಾಸಕ ಆರ್. ವಿ. ದೇಶಪಾಂಡೆಯವರು ಹೇಳಿದ್ದರು. ಆದರೆ ಇದುವರೆಗೂ ವಿದ್ಯಾರ್ಥಿಗಳಿಗೆ ಆಗಲಿ ಅಥವಾ ವಯಸ್ಸು ಆದವರಿಗೆ ಆಗಲಿ ಬಸ್ ಪಾಸ್ ನ ಕೌಂಟರ್ ಜೋಯಿಡಾದಲ್ಲಿ ಪ್ರಾರಂಬಿಸಿಲ್ಲ. ವೇಳೆಗೆ ಸರಿಯಾಗಿ ಬಸ್ ಬರುವುದಿಲ್ಲ. ಹಲವು ಬಸ್ ಗಳು ಬಾರದೇ ಇರುವುದರಿಂದ ಮಹಿಳೆಯರು ಸರಕಾರದ ಭಾಗ್ಯದಿಂದ ವಂಚಿತರಾಗುತ್ತಿದ್ದಾರೆ. ಜೋಯಿಡಾದಲ್ಲಿ ಬಸ್ ಡಿಪೋ ಇದ್ದರೆ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು ಎಂದು ಜನ ದೂರಿದ್ದಾರೆ.
ಧಾರವಾಡಕ್ಕೆ ಐದು ನಿಮಿಷಕ್ಕೆ ಒಂದು ಬಸ್ ಬಿಡುವವರು, ರಾಜ್ಯದ ಅತಿ ದೊಡ್ಡ ತಾಲೂಕು ಜೋಯಿಡಾಕ್ಕೆ ಬೆರಳೆಣಿಕೆಯಷ್ಟು ಬಸ್ ಗಳಿಂದ ಸೇವೆ ನೀಡುತ್ತಿರುವುದು ಮುಗ್ದ ಜನತೆಗೆ ಮಾಡುವ ಅನ್ಯಾಯ ಎಂದು ಸಾರ್ವಜನಿಕರು ಈ ಮೂಲಕ ಆಪಾಧಿಸಿದ್ದಾರೆ.
ನಂದಿಗದ್ದೆ ಗ್ರಾಮ ಪಂಚಾಯತದ ಎಂಟು ಗ್ರಾಮಗಳು ಮತ್ತು ಉಳವಿ ಗ್ರಾಮ ಪಂಚಾಯತದ ಕೆಲವು ಗ್ರಾಮಗಳ ಜನರು ಕಳೆದ  ಜೂನ್ ತಿಂಗಳಿನಿಂದ ಬಸ್ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ದಾಂಡೇಲಿ ವ್ಯಾಪ್ತಿಯಲ್ಲಿ ಬಂದರೂ ಜನತೆಗೆ ಸರಿಯಾಗಿ ಬಸ್ ಕಲ್ಪಿಸುವ ಕೆಲಸವನ್ನು ಮಾಡಿಲ್ಲ. ಹಾಗಾಗಿ ಜೋಯಿಡಾಕ್ಕೆ ಬಸ್ ಡಿಪೋ ಬೇಕೆಂದು ತಾಲೂಕಾ ಆಡಳಿತ ಕೂಡಲೇ ಸರಕಾರಕ್ಕೆ ಬೇಡಿಕೆ ಸಲ್ಲಿಸಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0