ಆಪ್ತ ನ್ಯೂಸ್ ಶ್ರೀಮನ್ನೆಲೆಮಾವಿನ ಮಠ:
ಚಾತುರ್ಮಾಸ ವ್ರತದಲ್ಲಿರುವ ಸಿದ್ದಾಪುರ ತಾಲೂಕಿನ ಶ್ರೀಮನ್ನೆಲೆಮಾವಿನ ಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಮಾಧವಾನಂದ ಭಾರತೀ ಮಹಾಸ್ವಾಮಿಗಳು ಶನಿವಾರ ಧಾರ್ಮಿಕ ಸಂಪ್ರದಾಯದಂತೆ ಸೀಮೋಲ್ಲಂಘನ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನೆರವೇರಿಸಿದರು.
ಶ್ರೀಮಠದ ಸಮೀಪ ಹರಿಯುವ ಪವಿತ್ರ ಸುರನದಿಗೆ ವಿಶೇಷ ಪೂಜೆ ಸಲ್ಲಿಸಿದ ಮಹಾಸ್ವಾಮಿಗಳು, ನದಿ ತೀರದಲ್ಲಿ ವೇದಮಂತ್ರಗಳ ಮಧ್ಯೆ ಸೀಮೋಲ್ಲಂಘನ ವಿಧಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು.
ನಂತರ ಮಹಾಸ್ವಾಮಿಗಳು ಹೇರೂರಿನ ಶ್ರೀ ಸಿದ್ಧಿವಿನಾಯಕ ದೇವಾಲಯ, ಡೊಂಬೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಹಾಗೂ ಸರಕುಳಿಯ ಮಹಿಷಾಸುರ ಮರ್ಧಿನಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನೆರೆದಿದ್ದ ಭಕ್ತರಿಗೆ ಆಶೀರ್ಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿದರು.
ಮಹಾಸ್ವಾಮಿಗಳ ದರ್ಶನ ಮತ್ತು ಆಶೀರ್ವಾದ ಪಡೆಯಲು ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸಂತಸ ವ್ಯಕ್ತಪಡಿಸಿದರು. ಧಾರ್ಮಿಕ ಸಂಪ್ರದಾಯ, ಭಕ್ತಿ ಹಾಗೂ ಆಧ್ಯಾತ್ಮಿಕತೆಯ ಸಮ್ಮಿಲನವಾಗಿದ್ದ ಈ ಕಾರ್ಯಕ್ರಮವು ಭಕ್ತರಲ್ಲಿ ವಿಶೇಷ ಭಾವನೆಯನ್ನು ಮೂಡಿಸಿತು.