ಥೈಲ್ಯಾಂಡ್ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಸಂಜಯ ನಾಯ್ಕ್‌ಗೆ ಸನ್ಮಾನ

ಯುವಕರಿಗೆ ಸಂಜಯ ಸಾಧನೆ ಮಾದರಿಯಾಗಲಿ: ಅನಂತಮೂರ್ತಿ ಹೆಗಡೆ

Sep 8, 2026 - 21:11
 0  114
ಥೈಲ್ಯಾಂಡ್ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಸಂಜಯ ನಾಯ್ಕ್‌ಗೆ ಸನ್ಮಾನ

ಆಪ್ತ ನ್ಯೂಸ್ ಶಿರಸಿ:

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿ, ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವ ಎಸಳೆ ಗ್ರಾಮದ ಯೋಗಪಟು ಸಂಜಯ ಜಗದೀಶ ನಾಯ್ಕ್ ಅವರನ್ನು ಬಿಜೆಪಿ ಗ್ರಾಮೀಣ ಮಂಡಳದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಯೋಗ ಎನ್ನುವುದು ಭಗವಂತನ ವರದಾನವಾಗಿದ್ದು, ಪ್ರತಿನಿತ್ಯ ಯೋಗ, ಧ್ಯಾನ ಹಾಗೂ ಪೂಜೆ-ಪುನಸ್ಕಾರಗಳಲ್ಲಿ ತೊಡಗಿಸಿಕೊಂಡವರು ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದರು.

ಸಂಜಯ ನಾಯ್ಕ್ ಅವರ ಸಾಧನೆ ಗ್ರಾಮೀಣ ಭಾಗದ ಯುವಕರಿಗೆ ಪ್ರೇರಣೆಯಾಗಬೇಕು. ಅವರ ಸಾಧನೆಯ ಹಿಂದೆ ತಂದೆ-ತಾಯಿಯ ಪರಿಶ್ರಮವೂ ಸಾಕಷ್ಟಿದೆ. ಯುವಕರು ಸಂಜಯ್ ಅವರ ಸಾಧನೆಯಿಂದ ಪ್ರೇರಣೆ ಪಡೆದು ಉತ್ತಮ ಹಾದಿಯಲ್ಲಿ ಸಾಗಬೇಕು. ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಗುರುತಿಸಿ ಪ್ರೋತ್ಸಾಹಿಸುವುದು, ತಪ್ಪು ಮಾಡಿದಾಗ ತಿಳಿಹೇಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.

ಸಂಜಯ್ ಅವರು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆ ಮಾಡಿ ಊರು ಹಾಗೂ ನಾಡಿಗೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ ಅವರು, ಅವರ ಮುಂದಿನ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಗತ್ಯ ಸಹಾಯ ನೀಡುವ ಭರವಸೆ ನೀಡಿದರು.

ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತೆರಳುತ್ತಿರುವ ಸಂಜಯ್ ಅವರಿಗೆ ಅಭಿನಂದನೆ ಸಲ್ಲಿಸಿದರು. ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಇನ್ನಷ್ಟು ಸಾಧನೆ ಮಾಡಲು ಹುಮ್ಮಸ್ಸು ಪಡೆಯುತ್ತಾರೆ. ಇದೇ ಉದ್ದೇಶದಿಂದ ಸಂಜಯ್ ಅವರನ್ನು ಸನ್ಮಾನಿಸಲಾಗಿದೆ ಎಂದರು.

ಕ್ರೀಡಾಪಟುಗಳಿಗೆ ಜನರ ಹಾಗೂ ಸಮಾಜದ ಸಹಕಾರ ಅಗತ್ಯವಾಗಿದ್ದು, ಸಂಜಯ್ ಅವರ ಸಾಧನೆಯ ಪಯಣದಲ್ಲಿ ನಾವೆಲ್ಲರೂ ಬೆಂಬಲವಾಗಿ ನಿಲ್ಲುತ್ತೇವೆ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಗಪಟು ಸಂಜಯ್ ನಾಯ್ಕ್, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಅವರಲ್ಲಿ ಇನ್ನಷ್ಟು ಸಾಧಿಸುವ ಆತ್ಮವಿಶ್ವಾಸ ಮೂಡುತ್ತದೆ ಎಂದರು. ತಾವು 7ನೇ ತರಗತಿಯಿಂದ ಯೋಗಾಭ್ಯಾಸ ಮಾಡುತ್ತಿದ್ದು, ಈಗಾಗಲೇ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದಾಗಿ ತಿಳಿಸಿದರು.

ತುಮಕೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ, ಥೈಲ್ಯಾಂಡ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ತಮ್ಮ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಿದ ಬಿಜೆಪಿ ಗ್ರಾಮೀಣ ಮಂಡಳದವರು, ಅನಂತಮೂರ್ತಿ ಹೆಗಡೆ ಹಾಗೂ ಊರಿನ ಗಣ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆ ಭಾಗದ ಮುಖಂಡ ಸುಧೀರ್ ದೇವಾಡಿಗ ಹಾಗೂ ಎಸಳೆ ಗ್ರಾಮಸ್ಥರ ವತಿಯಿಂದಲೂ ಸಂಜಯ್ ಅವರಿಗೆ ನಾಗರಿಕ ಸನ್ಮಾನ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ನಾಗಪ್ಪ ದೇವಾಡಿಗ, ರತ್ನಾ ಶೆಟ್ಟಿ, ಶಿವರಾಮ ಶೆಟ್ಟಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0