ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಣುಕು ಶವ ದಹನ

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಹಮ್ಮಿಕೊಂಡಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಣುಕು ಶವವನ್ನು ನಗರಸಭೆ ರಂಗಮಂದಿರದ ಎಡಭಾಗದಲ್ಲಿ ಬುಧವಾರ ವಿಧಿವಿಧಾನಗಳ ಮೂಲಕ ದಹಿಸಿ ಯೋಜನೆ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ವಿನೂತನವಾಗಿ ಒತ್ತಾಯಿಸಲಾಯಿತು.

Oct 15, 2025 - 18:53
 0  34
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಣುಕು ಶವ ದಹನ

ಆಪ್ತ ನ್ಯೂಸ್ ಸಾಗರ:

ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ಹಮ್ಮಿಕೊಂಡಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅಣುಕು ಶವವನ್ನು ನಗರಸಭೆ ರಂಗಮಂದಿರದ ಎಡಭಾಗದಲ್ಲಿ ಬುಧವಾರ ವಿಧಿವಿಧಾನಗಳ ಮೂಲಕ ದಹಿಸಿ ಯೋಜನೆ ಕೈಬಿಡುವಂತೆ ರಾಜ್ಯ ಸರ್ಕಾರವನ್ನು ವಿನೂತನವಾಗಿ ಒತ್ತಾಯಿಸಲಾಯಿತು.
ಕಳೆದ 12 ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ಶರಾವತಿ ಪಂಪ್ಡ್ ಸ್ಟೋರೇಜ್ ಶವವನ್ನು ಎದುರು ಇರಿಸಿಕೊಂಡು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಬುಧವಾರ ಪ್ರತಿಭಟನಾ ಸ್ಥಳಕ್ಕೆ ಆನಂದಪುರ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಆಗಮಿಸಿ ಸಹಿ ಮಾಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದರು. 
ನಂತರ ಅಣುಕು ಶವಕ್ಕೆ ಮಾಜಿ ಸಚಿವ ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಹಾಗೂ ರೈತ ಸಂಘದ ಪ್ರಮುಖರು ಹೆಗಲು ಕೊಟ್ಟರು. ನಗರದ ಪ್ರಮುಖ ಬೀದಿಗಳಲ್ಲಿ ಅಣಕು ಶವಯಾತ್ರೆ ನಡೆದು, ಅಂತಿಮವಾಗಿ ನಗರಸಭೆ ಆವರಣದಲ್ಲಿ ದಹನ ಮಾಡಲಾಯಿತು.
ಪರಿಸರ ವಿರೋಧಿ ಯೋಜನೆ ಕೈಬಿಡಿ:
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಪಂಪ್ಡ್ ಸ್ಟೋರೇಜ್ ದುಬಾರಿ ಮತ್ತು ಲಾಭದಾಯಕ ಅಲ್ಲದ ಯೋಜನೆಯಾಗಿದೆ. ಎರಡೂವರೆ ಸಾವಿರ ಮೆ.ವ್ಯಾ. ವಿನಿಯೋಗಿಸಿ, ಎರಡು ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆ ಮಾಡುವ ಅತ್ಯಂತ ಅವೈಜ್ಞಾನಿಕ ಯೋಜನೆಯಾಗಿದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಪರಿಸರ ನಾಶವಾಗುವ ಜೊತೆಗೆ ಕಾಡುಪ್ರಾಣಿ, ಜೀವವೈವಿಧ್ಯ, ಅರಣ್ಯ, ಪರಿಸರ ನಾಶವಾಗುತ್ತದೆ. ಹಿಂದೆ ಯೋಜನೆ ಕೈಗೆತ್ತಿಕೊಂಡಿದ್ದಾಗ ನಾವೆಲ್ಲಾ ಮಠಾಧೀಶರು ವಿರೋಧ ಮಾಡಿದ್ದೇವೆ. ಇದೀಗ ಮತ್ತೆ ಯೋಜನೆ ಪ್ರಸ್ತಾಪವಾಗುತ್ತಿರುವುದು ದುರದೃಷ್ಟಕರ. ರಾಜ್ಯ ಸರ್ಕಾರ ಇಂತಹ ಪರಿಸರ ವಿರೋಧಿ ಯೋಜನೆ ತಕ್ಷಣ ಕೈಬಿಡಬೇಕು. ಯೋಜನೆ ವಿರುದ್ದದ ಹೋರಾಟಕ್ಕೆ ತಮ್ಮ ಎಲ್ಲಾ ರೀತಿ ಬೆಂಬಲ ಇದೆ ಎಂದರು.

ನಾಲ್ಕು ಸಾವಿರ ಎಕರೆ ಅರಣ್ಯ ನಾಶ:
ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ ನಾನು ಶಾಸಕನಾಗಿದ್ದಾಗ ಯೋಜನೆ ಪ್ರಸ್ತಾಪವಾಗಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ, ವನ್ಯಸಂಪತ್ತು ನಾಶವಾಗುವ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಿ ಯೋಜನೆ ಕೈಬಿಡುವಂತೆ ಮಾಡಿದ್ದೇನೆ. ಈಗಿನ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಯೋಜನೆ ಪರ ಮಾತನಾಡಿದ್ದಾರೆ. ಯೋಜನೆ ಅನುಷ್ಟಾನಕ್ಕೆ ಮುಂದಾದರೆ ಸುಮಾರು ನಾಲ್ಕು ಸಾವಿರ ಎಕರೆ ಅರಣ್ಯ ನಾಶವಾಗುತ್ತದೆ. ಕೆಪಿಟಿಸಿಎಲ್ ಅಧಿಕಾರಿಗಳು ವಾಸ್ತವಾಂಶ ಮುಚ್ಚಿಟ್ಟು ಯೋಜನೆ ಅನುಷ್ಟಾನಕ್ಕೆ ಮುಂದಾಗಿದ್ದಾರೆ. ಗುಡ್ಡವನ್ನು ಕೊರೆದು ಸುರಂಗ ಮಾರ್ಗ ನಿರ್ಮಿಸುವ ಉದ್ದೇಶ ಯೋಜನೆ ಹೊಂದಿದ್ದು ಇದರಿಂದ ಭವಿಷ್ಯದಲ್ಲಿ ಅಲ್ಲಿನ ಪರಿಸರದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಟಾನಕ್ಕೆ ಬರಬಾರದು. ಸಂದರ್ಭ ಬಂದರೆ ಹಸಿರುಪೀಠದ ಎದುರು ಕಾನೂನು ಹೋರಾಟ ನಡೆಸೋಣ ಎಂದು ತಿಳಿಸಿದರು.
ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಮಾತನಾಡಿ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡದೆ ಹೋದರೆ ನೇಪಾಳ ಮಾದರಿ ಹೋರಾಟ ಅನಿವಾರ್ಯವಾಗುತ್ತದೆ. ಹನ್ನೆರಡು ದಿನಗಳ ನಂತರ ಹೋರಾಟ ನಿಲ್ಲಿಸಿದ್ದೇವೆ ಎಂದು ಸರ್ಕಾರ ನಿಟ್ಟುಸಿರು ಬಿಡುವುದು ಬೇಡ. ತಕ್ಷಣ ಯೋಜನೆ ಕೈಬಿಟ್ಟಿದ್ದೇವೆ ಎಂದು ಗೆಜೆಟ್‌ನಲ್ಲಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು, ವಿಧಾನಸೌಧದೆದುರು ಅಥವಾ ದೆಹಲಿಯ ಜಂತರ್ ಮಂಥರ್‌ನಲ್ಲಿ ಸಹ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. 
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ ಶಿರವಾಳ, ಪ್ರಮುಖರಾದ ಬಿ. ಸ್ವಾಮಿರಾವ್, ಅಖಿಲೇಶ್ ಚಿಪ್ಪಳಿ, ಚೂನಪ್ಪ ಪೂಜಾರಿ, ಶಿವಾನಂದ ಬೆಳಗಾವಿ, ತೇಜಸ್ವಿ ಪಟೇಲ್, ಶಶಿಕಾಂತ್ ಗುರೂಜಿ, ಶಿವಾನಂದ ಕುಗ್ವೆ, ರಮೇಶ್ ಕೆಳದಿ, ಡಾ. ರಾಮಚಂದ್ರಪ್ಪ, ಟಿ.ಡಿ.ಮೇಘರಾಜ್, ರತ್ನಾಕರ ಹೊನಗೋಡು, ಗಣೇಶ್ ಪ್ರಸಾದ್, ಮಲ್ಲಿಕಾರ್ಜುನ ಹಕ್ರೆ, ಕೊಟ್ರಪ್ಪ ನೇದರವಳ್ಳಿ ಇನ್ನಿತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0