ಶರಾವತಿ ಪಂಪ್ಡ್ ಸ್ಟೋರೇಜ್ ಸಾರ್ವಜನಿಕ ಅಹವಾಲು ಸಭೆ ಅನುಮಾನಕ್ಕೆ ಕಾರಣ : ತೀ. ನ. ಶ್ರೀನಿವಾಸ್

ಆಪ್ತ ನ್ಯೂಸ್ ಸಾಗರ:
ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಸಿಂಗ್ ಯಾಧವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ವನ್ಯಜೀವಿ ವಿಭಾಗವು ಶರಾವತಿ ಪಂಪ್ಡ್ ಸ್ಟೋರೇಜ್‌ಗೆ ಅನುಮತಿ ನೀಡಿದೆ. ಯೋಜನೆಗೆ ಒಪ್ಪಿಗೆ ಪಡೆದ ತಿಂಗಳ ನಂತರ ಸಾರ್ವಜನಿಕ ಅಹವಾಲು ಸಭೆ ಕರೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಮಲೆನಾಡು ರೈತ ಸಂಘದ ಜಿಲ್ಲಾ ಸಂಚಾಲಕ ತೀ. ನ. ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯೋಜನೆಗೆ ೧೨ಸಾವಿರ ಮರ ಕಡಿಯಲು ಅನುಮೋದನೆ ದೊರೆತಿದೆ. ೧೨ ಕಿ.ಮೀ. ಸುರಂಗ ಮಾರ್ಗ, ರಸ್ತೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. ಇದೆಲ್ಲದಕ್ಕೂ ವೃಕ್ಷಲಕ್ಷ ಆಂದೋಲನದ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಬಿಜೆಪಿ ಕೆಲವು ಪ್ರಮುಖರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಯೋಜನೆಗೆ ಅನುಮೋದನೆ ನೀಡಿರುವುದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ತಿಳಿದಿಲ್ಲವೆ? ಅಥವಾ ಅದು ಗೊತ್ತಿದ್ದೇ ಪ್ರತಿಭಟನೆ ಮಾಡಿದ್ದಾರೆ ಎಂದು ಕುಹುಕವಾಡಿದರು.
ಶರಾವತಿ ಮುಳುಗಡೆ ಸಂತ್ರಸ್ತರು ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನು ಕಳೆದುಕೊಂಡು ಭೂಮಿಹಕ್ಕಿಗಾಗಿ ಹೋರಾಟ ಮಾಡಿದರೆ ಕೇಂದ್ರ ಮೌನವಾಗಿರುತ್ತದೆ. ಆದರೆ ಇಂತಹ ಭ್ರಷ್ಟ ಅವೈಜ್ಞಾನಿಕ ಪರಿಸರ ವಿರೋಧಿ ಯೋಜನೆಗೆ ಮಾತ್ರ ತಕ್ಷಣ ಅನುಮೋದನೆ ಯಾವ ಆಧಾರದಲ್ಲಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲೂ ಅರಣ್ಯ ಸಂರಕ್ಷಣೆಗೆ ಗಮನ ಹರಿಸುತ್ತಿಲ್ಲ. ವನ್ಯಜೀವಿ ವಲಯ ಕೈಬಿಡಲು ಅವಕಾಶವೇ ಇಲ್ಲದಿದ್ದರೂ, ಮುಖ್ಯಮಂತ್ರಿಗಳು ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾಗಿದ್ದು ಶೆಟ್ಟಿಹಳ್ಳಿ ಅಭಯಾರಣ್ಯದಿಂದ ೩ಸಾವಿರ ಎಕರೆ ಅರಣ್ಯವನ್ನು ಕೈಬಿಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ. ರಾಜ್ಯ ಸರ್ಕಾರಕ್ಕೆ ರೈತರು, ಪರಿಸರ, ವನ್ಯಜೀವಿ ಮೇಲೆ ಕಿಂಚಿತ್ ಕಾಳಜಿ ಇಲ್ಲ. ೨೦೦೬ರಲ್ಲಿ ಅರಣ್ಯಹಕ್ಕು ಕಾಯ್ದೆ ಜಾರಿಗೆ ಬಂದಿದ್ದರೂ ಈತನಕ ಅರಣ್ಯವಾಸಿಗಳಿಗೆ ಹಕ್ಕುಪತ್ರ ನೀಡಲು ಪರಿಣಾಮಕಾರಿ ಪ್ರಯತ್ನ ನಡೆದಿಲ್ಲ. ಮಲೆನಾಡಿನ ಪರಿಸರ ಲೂಟಿ ಮಾಡುವ ಯೋಜನೆ ಬಗ್ಗೆ ಹೋರಾಟ ನಿರಂತರವಾಗಿರಲಿದೆ ಎಂದರು.
ಗೋಷ್ಟಿಯಲ್ಲಿ ಮಂಜುನಾಥ್, ಮಂಜಪ್ಪ, ಬಿ.ಆರ್. ಅಶೋಕ್, ವೀರೇಂದ್ರ, ಕೃಷ್ಣಪ್ಪ, ರವಿಚಂದ್ರ ಇನ್ನಿತರರು ಹಾಜರಿದ್ದರು.
What's Your Reaction?






