ರಜತ ಸಂಭ್ರಮದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ : ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸ್ವತ್ತು : ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ
ಸಾಹಿತ್ಯ ಸಮ್ಮೇಳನದಲ್ಲಿ ೨೫ ಕೃತಿಗಳ ಬಿಡುಗಡೆ
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ೨೫ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆಯವರು ಕನ್ನಡದ ಕಾರ್ಯಕ್ರಮಗಳನ್ನು ಕನ್ನಡದ ಕೆಲಸಗಳನ್ನು ಯಾರೇ ಮಾಡಿದರೂ ಕನ್ನಡಿಗರಾದ ನಾವು ಅದನ್ನು ಹೆಮ್ಮೆಯಿಂದ ಸ್ವಾಗತಿಸಬೇಕು ಮತ್ತು ಗೌರವಿಸಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ವಿಕಾಸದಲ್ಲಿ ಸಾಹಿತ್ಯ ಸಮ್ಮೇಳನಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇವುಗಳು ಇಂದಿನ ಪೀಳಿಗೆಯಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ, ಅರಿವು ಬೆಳೆಸುವ ಶಕ್ತಿಯುತ ವೇದಿಕೆಗಳಾಗಿವೆ. ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂತಕರು ಮತ್ತು ಸಾಹಿತಿಗಳ ವಿಚಾರ ವಿನಿಮಯದ ಮೂಲಕ ಈ ಸಮ್ಮೇಳನವು ಸಾರ್ಥಕತೆಯನ್ನು ಪಡೆದು ಯಶಸ್ವಿಯಾಗಲಿ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ವೈವಿಧ್ಯಮಯ ಸಂಸ್ಕೃತಿ, ಪ್ರತಿಭೆ ಮತ್ತು ಸೃಜನಶೀಲತೆಯನ್ನು ದೇಶಾದ್ಯಂತ ಪರಿಚಯಿಸುವ ಮಹತ್ವದ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.
ಬಿ.ಎನ.ವಾಸರೆಯವರ ಆಶಯ ನುಡಿ
ಆಶಯ ನುಡಿಗಳನ್ನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎನ್.ವಾಸರೆ ಅವರು ಈ ಬಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಡೆಯಬೇಕೆಂದು ಸಾಕಷ್ಟು ಅಡೆಯನ್ನು ತಂದು, ಸಮ್ಮೇಳನದ ಕೊನೆಯ ಎರಡು ದಿನ ನ್ಯಾಯಾಲಯದಲ್ಲೇ ದಿನ ಕಳೆಯುವಂತಹ ಸಂದಿಗ್ಧ ಪರಿಸ್ಥಿತಿಯನ್ನು ತರಲಾಯ್ತದಾದರೂ, ಅಂತಿಮವಾಗಿ ಕನ್ನಡ ಗೆದ್ದಿತು. ಈ ಗೆಲುವು ನನ್ನ ಗೆಲುವಲ್ಲ. ಇದು ಜಿಲ್ಲೆಯ ಕನ್ನಡಿಗರ ಗೆಲುವು, ಇದು ಕನ್ನಡದ ಗೆಲುವು. ಸಾಹಿತ್ಯ ಸಮ್ಮೇಳನವನ್ನು ನಡೆಸಲು ಅನುವು ಮಾಡಿಕೊಟ್ಟ ಘನ ನ್ಯಾಯಾಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲೆಯ ಜನತೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವೆ ಎಂದ ಅವರು ಕನ್ನಡದ ಕೆಲಸ, ಕನ್ನಡದ ಕಾರ್ಯಕ್ರಮ ಯಾರೇ ಮಾಡಿದರೂ ಅದನ್ನು ಗೌರವಿಸಬೇಕು, ಅದಕ್ಕೆ ಸ್ಪಂದಿಸಬೇಕು. ಅದು ಬಿಟ್ಟು ವೈಯಕ್ತಿಕ ದ್ವೇಷ ಸಾಧನೆಗಾಗಿ ಕನ್ನಡದ ಕೆಲಸಕ್ಕೆ ಯಾರೇ ಅಡ್ಡಿ ಮಾಡಿದರೂ ಅದನ್ನು ಸಮಾಜ ಗೌರವಿಸುವುದಿಲ್ಲ. ವಿಚಾರಣೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರ ಕುಟಿಲ ಬುದ್ದಿಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದರು. ತಮ್ಮ ಮಾತಿನ ಸಂದರ್ಭದಲ್ಲಿ ಗದ್ಗತಿತರಾದ ವಾಸರೆಯವರು ಇಡೀ ಸಭೆಯನ್ನು ತನ್ನತ್ತ ಸೆಳೆದುಕೊಂಡರು. ಈ ಕ್ಷೇತ್ರ ಸತ್ಪುರುಷ ದಾಂಡೇಲಪ್ಪನ ಕ್ಷೇತ್ರ. ಶ್ರೀ ದಾಂಡೇಲಪ್ಪನ ಅನುಗ್ರಹದಿಂದ ಹಾಗೂ ಜಿಲ್ಲೆಯ ಸಮಸ್ತ ಕನ್ನಡಿಗರ ಸಹಕಾರದಿಂದ ನಿರೀಕ್ಷೆಗೂ ಮೀರಿ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



