ಶಿರಸಿಯಲ್ಲಿ ಗಾಂಜಾ ಪೆಡ್ಲರ್ ಬಂಧನ: ₹1 ಲಕ್ಷ ಮೌಲ್ಯದ ಕಾರು, 253 ಗ್ರಾಂ ಗಾಂಜಾ ವಶ!
ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯ ಮಾದಕವಸ್ತು ವಿರೋಧಿ ಕಾರ್ಯಾಚರಣೆಯಲ್ಲಿ ಮತ್ತೊಂದು ಮಹತ್ವದ ಯಶಸ್ಸು ದೊರೆತಿದೆ. ಗಾಂಜಾ ಸಾಗಾಟ ಮಾಡಿಕೊಂಡು ಬಂದು ಮಾರಾಟ ಮಾಡುತ್ತಿದ್ದ ಪೆಡ್ಲರ್‌ನನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 253 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 14ರಂದು ಸಂಜೆ ಸುಮಾರು 7.30ರ ವೇಳೆಗೆ, ಶಿರಸಿ ನಗರದ ಬನವಾಸಿ ರಸ್ತೆಯ ಹಾರ್ಟಿಕಲ್ಚರ್ ಕಾಲೇಜು ಸಮೀಪ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಇಮ್ರಾನ್ ಅಹ್ಮದ್ ತಂದೆ ಮಲ್ಬಲ್ ಅಹ್ಮದ್ ಬ್ಯಾಡಗಿ (29) ಎಂಬಾತನನ್ನು ಬಂಧಿಸಲಾಯಿತು. ಆತ ಮೂಲತಃ ಹಾವೇರಿ ಜಿಲ್ಲೆಯ ನವನಗರ 4ನೇ ಕ್ರಾಸ್ ನಿವಾಸಿಯಾಗಿದ್ದು, ಪ್ರಸ್ತುತ ಶಿರಸಿ ತಾಲೂಕಿನ ದಾಸನಕೊಪ್ಪದಲ್ಲಿ ವಾಸವಾಗಿದ್ದಾನೆ.
₹1.20 ಲಕ್ಷ ಮೌಲ್ಯದ ವಸ್ತುಗಳ ವಶ
ಬಂಧಿತನಿಂದ ಸುಮಾರು 253 ಗ್ರಾಂ ಗಾಂಜಾ (ಅಂದಾಜು ಮೌಲ್ಯ ₹20,000) ಹಾಗೂ ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಬಳಸಲಾಗಿದ್ದ ಹುಂಡೈ ಐ10 ಕಾರು (ಅಂದಾಜು ಮೌಲ್ಯ ₹1 ಲಕ್ಷ) ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಹಲವು ಪ್ರಕರಣಗಳ ಆರೋಪಿಯೇ!
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಇಮ್ರಾನ್ ವಿರುದ್ಧ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟ ಮತ್ತು ಮಾರಾಟಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನ ಹಾಗೂ ಹಾನಗಲ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯ ಅಪರಾಧ ಹಿನ್ನೆಲೆ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್. (ಐಪಿಎಸ್) ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ-1 ಕೃಷ್ಣಮೂರ್ತಿ ಜಿ., ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಶಿರಸಿ ವೃತ್ತ ನಿರೀಕ್ಷಕ ಸಂಪತ್ ಇ.ಸಿ. ಅವರ ಮೇಲ್ವಿಚಾರಣೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಪಿಎಸ್‌ಐ ನರಸಿಂಹಲು ಟಿ. ಹಾಗೂ ಪಿಎಸ್‌ಐ ನಾರಾಯಣ ರಾಠೋಡ್ ಅವರ ನೇತೃತ್ವದಲ್ಲಿ ಶಿರಸಿ ನಗರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಬಸವರಾಜ ಹಗರಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪೂರ, ಸದ್ದಾಂ ಹುಸೇನ್, ಹನುಮಂತ ಕಬಾಡಿ, ತುಕಾರಾಮ ಬಣಕಾರ, ಸುನೀಲ್, ಪ್ರಶಾಂತ ಹಾಗೂ ರಾಜಶೇಖರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಜಿಲ್ಲಾ ಪೊಲೀಸ್ ಅಧೀಕ್ಷಕರು ಯಶಸ್ವಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



