ಪಂಚಭೂತಗಳಲ್ಲಿ ಲೀನವಾದ ಸರಸ್ವತಿಪುತ್ರ: ಸಾಹಿತಿ ಎಸ್‌ ಎಲ್‌ ಭೈರಪ್ಪಗೆ ಭಾವಪೂರ್ಣ ವಿದಾಯ

Sep 26, 2025 - 14:45
Sep 26, 2025 - 14:49
 0  73
ಪಂಚಭೂತಗಳಲ್ಲಿ ಲೀನವಾದ ಸರಸ್ವತಿಪುತ್ರ: ಸಾಹಿತಿ ಎಸ್‌ ಎಲ್‌ ಭೈರಪ್ಪಗೆ ಭಾವಪೂರ್ಣ ವಿದಾಯ

ಆಪ್ತ ನ್ಯೂಸ್‌ ಮೈಸೂರು:

ಕನ್ನಡ ಸಾಹಿತ್ಯ ಲೋಕದ ಮಹಾನ್ ಕಾದಂಬರಿಕಾರ, ಅಕ್ಷರ ಮಾಂತ್ರಿಕ ಎಂದೇ ಪ್ರಸಿದ್ಧರಾದ ಡಾ. ಎಸ್.ಎಲ್. ಭೈರಪ್ಪ ಅವರ ಅಂತ್ಯ ಸಂಸ್ಕಾರವು ಇಂದು (ಸೆಪ್ಟೆಂಬರ್‌ 26) ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನಡೆಯಿತು. ಮಧ್ಯಾಹ್ನ 12:30ಕ್ಕೆ ಭೈರಪ್ಪ ಪಂಚಭೂತಗಳಲ್ಲಿ ಲೀನರಾದರು.

ಪತ್ನಿ ಸರಸ್ವತಿ, ಪುತ್ರರಾದ ರವಿಶಂಕರ್ ಹಾಗೂ ಉದಯ್ ಶಂಕರ್, ಕುಟುಂಬಸ್ಥರು, ದೇಶದ ರಾಜಕೀಯ-ಸಾಹಿತ್ಯ ಲೋಕದ ಗಣ್ಯರು ಅಂತಿಮ ವಿದಾಯ ಸಲ್ಲಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ, ಶಾಸಕ ಟಿ.ಎಸ್‌. ಶ್ರೀವತ್ಸ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

ಭೈರಪ್ಪರ ಇಚ್ಛೆಯಂತೆ ಅಂತಿಮ ವಿಧಿವಿಧಾನದಲ್ಲಿ ಉದಯೋನ್ಮುಖ ಲೇಖಕಿ ಸಹನಾ ವಿಜಯ್‌ಕುಮಾರ್ ಸಹ ಪಾಲ್ಗೊಂಡರು. ಪುತ್ರರ ಜೊತೆಗೆ ಸಹನಾ ವಿಜಯ್‌ಕುಮಾರ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದು ವಿಶೇಷ ಗಮನ ಸೆಳೆಯಿತು. ಭೈರಪ್ಪ ಅಗ್ನಿಯಲ್ಲಿ ಲೀನವಾಗುತ್ತಿದ್ದಂತೆ ಕನ್ನಡ ಸಾಹಿತ್ಯ ಪ್ರೇಮಿಗಳು ಭಾವನಾತ್ಮಕರಾದರು. 

ಅಂತ್ಯಸಂಸ್ಕಾರವು ಸಂಪೂರ್ಣ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿತು. ಸರ್ಕಾರದ ಪರವಾಗಿ ಪೊಲೀಸ್ ಅಧಿಕಾರಿ ಶಿವಾನಂದ ನೇತೃತ್ವದ ದಳವು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿತು. ರಾಷ್ಟ್ರಧ್ವಜವನ್ನು ಪ್ರಹ್ಲಾದ್ ಜೋಷಿ ಮತ್ತು ಡಾ. ಮಹದೇವಪ್ಪ ಅವರು ಭೈರಪ್ಪರ ಪುತ್ರರಿಗೆ ಹಸ್ತಾಂತರಿಸಿದರು.

ಸಾಹಿತ್ಯ ಲೋಕದಲ್ಲಿ ಐದು ದಶಕಗಳಿಗಿಂತಲೂ ಹೆಚ್ಚಿನ ಕಾಲ ಆಳ್ವಿಕೆ ನಡೆಸಿದ ಭೈರಪ್ಪರು, ತಮ್ಮ ತೀಕ್ಷ್ಣವಾದ ವಿಚಾರಸರಣಿ, ಸಂಶೋಧನಾ ಮನೋಭಾವ ಮತ್ತು ವಿಶಿಷ್ಟ ಶೈಲಿಯಿಂದ ಓದುಗರ ಹೃದಯದಲ್ಲಿ ಅಳಿಯದ ಗುರುತು ಮೂಡಿಸಿದ್ದರು.

ಭೈರಪ್ಪ ಅವರ ಕಾದಂಬರಿಗಳು

  1. ಭೀಮಕಾಯ
  2. ಬೆಳಕು ಮೂಡಿತು
  3. ಧರ್ಮಶ್ರೀ - (೧೯೬೧)
  4. ದೂರ ಸರಿದರು- (೧೯೬೨)
  5. ಮತದಾನ - (೧೯೬೫)
  6. ವಂಶವೃಕ್ಷ- (೧೯೬೫)
  7. ಜಲಪಾತ (ಕಾದಂಬರಿ)- (೧೯೬೭)
  8. ನಾಯಿ ನೆರಳು- (೧೯೬೮)
  9. ತಬ್ಬಲಿಯು ನೀನಾದೆ ಮಗನೆ-(೧೯೬೮)
  10. ಗೃಹಭಂಗ-(೧೯೭೦)
  11. ನಿರಾಕರಣ-(೧೯೭೧)
  12. ಗ್ರಹಣ-(೧೯೭೨)
  13. ದಾಟು -(೧೯೭೩)
  14. ಅನ್ವೇಷಣ-(೧೯೭೬)
  15. ಪರ್ವ-(೧೯೭೯)
  16. ನೆಲೆ -(೧೯೮೩)
  17. ಸಾಕ್ಷಿ -(೧೯೮೬)
  18. ಅಂಚು-(೧೯೯೦)
  19. ತಂತು -(೧೯೯೩)
  20. ಸಾರ್ಥ-(೧೯೯೮)
  21. ಮಂದ್ರ-(೨೦೦೧)
  22. ಆವರಣ-(೨೦೦೭)
  23. ಕವಲು - (೨೦೧೦)
  24. ಯಾನ - (೨೦೧೪)
  25. ಉತ್ತರಕಾಂಡ-(೨೦೧೭)

    ಆತ್ಮ ಚರಿತ್ರೆ

    • ಭಿತ್ತಿ

      ತತ್ತ್ವಶಾಸ್ತ್ರ

      1. ಸತ್ಯ ಮತ್ತು ಸೌಂದರ್ಯ (೧೯೬೬) - ಪಿ.ಎಚ್.ಡಿ ಪ್ರಬಂಧ
      2. ಸಾಹಿತ್ಯ ಮತ್ತು ಪ್ರತೀಕ (೧೯೬೭)
      3. ಕಥೆ ಮತ್ತು ಕಥಾವಸ್ತು (೧೯೬೯)
      4. ಸಂದರ್ಭ:ಸಂವಾದ (೨೦೧೧)

      ಇತರೆ

      • ನಾನೇಕೆ ಬರೆಯುತ್ತೇನೆ? (೧೯೮೦)


What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0