ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ಹೊಂಡ ತುಂಬಿದ ಗ್ರಾಮಸ್ಥರು

Oct 7, 2025 - 11:07
 0  101
ಸರ್ಕಾರಕ್ಕೆ ಹಿಡಿಶಾಪ ಹಾಕುತ್ತ ಹೊಂಡ ತುಂಬಿದ ಗ್ರಾಮಸ್ಥರು

ಆಪ್ತ ನ್ಯೂಸ್ ಶಿರಸಿ:
ಹೋಂಡಾ ಬಿದ್ದ ರಸ್ತೆ ಸರಿ ಪಡಿಸಲು ಸರ್ಕಾರ ಹಾಗೂ ಲೋಕೋಪಯೋಗಿ ಇಲಾಖೆ ಮುಂದಾಗದೆ ಇದ್ದಿದ್ದರಿಂದ ಗ್ರಾಮಸ್ಥರೇ ಸೇರಿ ರಸ್ತೆ ಸರಿಪಡಿಸಿಕೊಂಡಿದ್ದಾರೆ.
ಪ್ರತಿ ದಿನ ಸಾವಿರಾರು ವಾಹನಗಳು ಓಡಾಡುವ ರಸ್ತೆ ಹೊಂಡಮಯವಾಗಿದ್ದರೂ ಲೋಕೋಪಯೋಗಿ ಇಲಾಖೆ ಕಣ್ಣುಮುಚ್ಚಿ ಕುಳಿತಿತ್ತು. ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರು ಹೊಂಡದ ರಸ್ತೆಯಿಂದಾಗಿ ಒದ್ದಾಡುತ್ತಿದ್ದರು. ಹೀಗಾಗಿ ಗ್ರಾಮಸ್ಥರೇ ಶ್ರಮದಾನದ ಮೂಲಕ ಹೊಂಡ ತುಂಬಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 
ಈ ಘಟನೆ ನಡೆದಿದ್ದು ಶಿರಸಿ ಗೋಳಿಮಕ್ಕಿ ಮಾರ್ಗದ ಕೊಳಗಿಬೀಸ್‌ನಿಂದ ಹಾಣಜಿಮನೆ ಮಾರ್ಗದ ಮಧ್ಯೆ. ಹಾಣಜಿಮನೆಯಿಂದ ಕೊಳಗಿಬೀಸ್‌ವರೆಗೆ ೧.೫ ಕಿ. ಮೀಗಳಷ್ಟು ರಸ್ತೆ ಮರು ಡಾಂಬರೀಕರಣವಾಗಿರಲಿಲ್ಲ. ಕಳೆದ ಮಳೆಗಾಲದಿಂದಾಗಿ ಇಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆಯಾಗಿ ಪರಿಣಮಿಸಿತ್ತು.
ಭಾನುವಾರ ಗ್ರಾಮಸ್ಥರೆಲ್ಲ ಸೇರಿ ಈ ರಸ್ತೆ ಹೊಂಡ ತುಂಬಲು ನಿರ್ಧರಿಸಿದ್ದಾರೆ. ಇಲ್ಲಿಯ ಹಾಣಜಿಮನೆ, ಅಬ್ಬಿಹದ್ದ, ಹೆಬ್ಬಲಸು, ಪಟ್ಟಿಗುಂಡಿ, ನೇರ್ಲದ್ದ, ಮತ್ತಿಗಾರ, ಓಣಿಮನೆ, ನೇರ್ಲವಳ್ಳಿ ಗ್ರಾಮಸ್ಥರೆಲ್ಲ ಸ್ವತಃ ಗುದ್ದಲಿ ಪಿಕಾಸು ಹಿಡಿದು ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯ ನೂರಾರು ಹೊಂಡಗಳನ್ನು ತುಂಬಿದ್ದಾರೆ. ವಾಹನ ಸಂಚಾರ ಈಗ ಸುಗಮವಾಗಿ ನಡೆಯುವಂತೆ ಮಾಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0