ಚುನಾವಣೆಯಲ್ಲಿ ಮತದಾರರು, ಬಳಿಕ ಅತಿಕ್ರಮಣದಾರರು: ಮನೆ ನಂಬರ್ ಉಳಿಸಲು ಬಿಜೆಪಿಯ ಪ್ರತಿಭಟನೆ
ಆಪ್ತ ನ್ಯೂಸ್ ಶಿರಸಿ:
ಅತಿಕ್ರಮಣ ಹಾಗೂ ಗಾಂವಠಾಣ ಪ್ರದೇಶದಲ್ಲಿರುವ ಮನೆ–ನಿವೇಶನಗಳನ್ನು ತೆರಿಗೆ ವ್ಯಾಪ್ತಿಯಿಂದ ಕೈಬಿಡುವ ರಾಜ್ಯ ಸರ್ಕಾರದ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಬಿಜೆಪಿ ವತಿಯಿಂದ ದೇವನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಚುನಾವಣೆಯಲ್ಲಿ ಮತದಾರರು, ನಂತರ ಅತಿಕ್ರಮಣದಾರರೇ?
ಮನೆ ನಂಬರ್ ರದ್ದತಿ ಆದೇಶ ಹಿಂಪಡೆಯುವಂತೆ ಬಿಜೆಪಿ ಪ್ರತಿಭಟನೆ
ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, “ಚುನಾವಣೆ ಸಂದರ್ಭದಲ್ಲಿ ಮತದಾರರಂತೆ ಕಾಣುವ ಜನರು, ಚುನಾವಣೆ ಮುಗಿದ ಬಳಿಕ ಅತಿಕ್ರಮಣದಾರರಂತೆ ಕಾಣುತ್ತಾರೆ” ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
“ಕಾಂಗ್ರೆಸ್ಗೆ ಮತ ನೀಡಿದ ತಪ್ಪಿಗೆ ಸರ್ಕಾರ ನೀಡುವ ₹2 ಸಾವಿರ ತೆಗೆದುಕೊಂಡು ರಸ್ತೆಯಲ್ಲಿ ನಿಲ್ಲಬೇಕೇ? ಗೆಜೆಟ್ ಅಧಿಸೂಚನೆ ಹೊರಬಂದು ಒಂದು ವರ್ಷ ಕಳೆದರೂ ಸ್ಥಳೀಯ ಶಾಸಕರು ಈ ವಿಚಾರದಲ್ಲಿ ಏಕೆ ಮೌನ ವಹಿಸಿದ್ದಾರೆ? ಸರ್ಕಾರದ ನಿರ್ಧಾರಕ್ಕೆ ಅವರ ಸಹಮತ ಇದೆಯೇ?” ಎಂದು ಪ್ರಶ್ನಿಸಿದರು.
ಅಡಿಕೆಗೆ ಎಲೆಚುಕ್ಕಿ ಹಾಗೂ ಹಳದಿ ರೋಗದಂತಹ ಸಮಸ್ಯೆಗಳಿಂದ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಅವರಿಗೆ ಪರಿಹಾರ ಕಲ್ಪಿಸುವ ಬದಲು ಪಂಚಾಯತ್ ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತಂದು ಜನರ ಮನೆ ಹಕ್ಕನ್ನೇ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
30–40 ವರ್ಷ ತೆರಿಗೆ ಪಾವತಿಸಿದ ಮನೆಗಳ ದಾಖಲೆ ರದ್ದೇಕೆ?
ಉತ್ತರ ಕನ್ನಡ ಜಿಲ್ಲೆಯ ಅನೇಕ ಕುಟುಂಬಗಳು 30ರಿಂದ 40 ವರ್ಷಗಳಿಂದ ಮನೆಗಳಿಗೆ ಪಂಚಾಯಿತಿ ತೆರಿಗೆ ಪಾವತಿಸುತ್ತಿದ್ದು, ಮನೆ ನಂಬರ್, ಇ-ಸ್ವತ್ತು ಸೇರಿದಂತೆ ಪಂಚಾಯಿತಿ ದಾಖಲೆಗಳನ್ನು ಹೊಂದಿವೆ. ಇಂತಹ ದಾಖಲೆಗಳನ್ನು ಏಕಾಏಕಿ ರದ್ದುಪಡಿಸುವ ಕ್ರಮ ಸರಿಯಲ್ಲ ಎಂದು ಅನಂತಮೂರ್ತಿ ಹೆಗಡೆ ಹೇಳಿದರು.
“ವಸತಿ ರಹಿತರಿಗೆ ಸಮರ್ಪಕವಾಗಿ ಮನೆ ಒದಗಿಸದ ಕಾಂಗ್ರೆಸ್ ಸರ್ಕಾರ ಇದೀಗ ಸಾವಿರಾರು ಕುಟುಂಬಗಳ ಮನೆಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ಜನರ ಹಕ್ಕು ಕಸಿಯುವ ವಿಚಾರದಲ್ಲಿ ಸ್ಥಳೀಯ ಶಾಸಕರು ಏಕೆ ಮಾತನಾಡುತ್ತಿಲ್ಲ? ಅವರೂ ಇದರಲ್ಲಿ ಪಾಲುದಾರರಾಗಿದ್ದಾರೆಯೇ?” ಎಂದು ಪ್ರಶ್ನಿಸಿದರು.
ಕಸ್ತೂರಿ ರಂಗನ್ ವರದಿಯ ವಿಚಾರದಲ್ಲೂ ಕಾಂಗ್ರೆಸ್ ವಿರುದ್ಧ ಆರೋಪ
ಕಸ್ತೂರಿ ರಂಗನ್ ವರದಿ ಕುರಿತು ಮಾತನಾಡಿದ ಅವರು, “ಕಸ್ತೂರಿ ರಂಗನ್ ಕಾಂಗ್ರೆಸ್ನ ಪಾಪದ ಕೂಸು. ಅಂದಿನ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಈ ವರದಿ ಜಾರಿಗೆ ಬಂದಿದೆ. ಇದೀಗ ಅದರ ಹೊಣೆಯನ್ನು ಕೇಂದ್ರ ಸರ್ಕಾರದ ಮೇಲೆ ಹೊರಿಸುವುದು ಸರಿಯಲ್ಲ” ಎಂದು ಹೇಳಿದರು.
“ದಾಖಲೆ ರದ್ದುಪಡಿಸುವುದು ಜನರಿಗೆ ಅನ್ಯಾಯ”
ಹೋರಾಟದ ಸಂಚಾಲಕ ಹಾಗೂ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಒಕ್ಕೂಟದ ಮಾಜಿ ಅಧ್ಯಕ್ಷ ನವೀನ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಅರಣ್ಯ ಹಾಗೂ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಅನೇಕ ಕುಟುಂಬಗಳು ವರ್ಷಗಳಿಂದ ಪಂಚಾಯಿತಿಯಿಂದ ಮನೆ ನಂಬರ್ ಪಡೆದು, ತೆರಿಗೆ ಪಾವತಿಸಿ, ವಿವಿಧ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಜೀವನ ಕಟ್ಟಿಕೊಂಡಿವೆ ಎಂದರು.
ಇಂತಹ ಕುಟುಂಬಗಳ ದಾಖಲೆಗಳನ್ನು ಏಕಾಏಕಿ ರದ್ದುಪಡಿಸುವುದು ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿಕ್ರಮಣ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಜನರು ವಾಸಿಸುತ್ತಿದ್ದಾರೆ. “ಚುನಾವಣೆ ಸಂದರ್ಭದಲ್ಲಿ ಮತದಾರರು, ನಂತರ ಅತಿಕ್ರಮಣದಾರರು” ಎಂಬ ದ್ವಂದ್ವ ನೀತಿಯನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
“ಮನೆ ನಂಬರ್ ಇಲ್ಲದಿದ್ದರೆ ನಮ್ಮ ಬದುಕೇನು?”
ಗ್ರಾಮೀಣ ಮಂಡಲದ ಅಧ್ಯಕ್ಷೆ ಉಷಾ ಹೆಗಡೆ ಮಾತನಾಡಿ, “ನಮ್ಮ ಮನೆ ನಂಬರ್ ಉಳಿಯಬೇಕು ಎಂಬ ಕಾರಣಕ್ಕಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಜಿಲ್ಲೆಯ ಎಲ್ಲ ಪಂಚಾಯಿತಿಗಳಲ್ಲೂ ಈ ಹೋರಾಟ ನಡೆಯುತ್ತಿದೆ” ಎಂದರು.
ಮನೆ ನಂಬರ್ ಇಲ್ಲದಿದ್ದರೆ ರೇಷನ್ ಕಾರ್ಡ್, ಆಧಾರ್ ಸೇರಿದಂತೆ ಹಲವು ದಾಖಲೆಗಳು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಸಮಸ್ಯೆಯಾಗುತ್ತದೆ. ಮನೆ ನಂಬರ್ ಕಳೆದುಕೊಂಡರೆ ಶಾಶ್ವತವಾಗಿ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
“ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಮನೆ ನಂಬರ್ ಉಳಿಯುವವರೆಗೂ ಹೋರಾಟ ಮುಂದುವರಿಯಲಿದೆ. ಹಿಂದಿನ ಬಿಜೆಪಿ ಸರ್ಕಾರ ಅತಿಕ್ರಮಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳನ್ನು ನೀಡಿತ್ತು. ಆದರೆ ಈಗಿನ ಸರ್ಕಾರ ಎಷ್ಟು ಮನೆಗಳನ್ನು ನೀಡಿದೆ? ಮನೆಗಳಿಗೆ ಹಣವನ್ನೂ ನೀಡಿಲ್ಲ” ಎಂದು ಆರೋಪಿಸಿದರು.
ಏಪ್ರಿಲ್ನಲ್ಲಿ ಅಧಿವೇಶನದಲ್ಲಿ ಈ ವಿಚಾರ ಚರ್ಚೆಯಾಗಬೇಕಿದ್ದ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಏನು ಮಾಡುತ್ತಿದ್ದರು? ಜನರಿಗೆ ತೊಂದರೆಯಾಗಲಿದೆ ಎಂಬುದು ಗೊತ್ತಿರಲಿಲ್ಲವೇ? ಕಾಯಿದೆ ರೂಪಿಸುವ ಸಂದರ್ಭದಲ್ಲೇ ವಿರೋಧ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲವೇ ಎಂದು ಪ್ರಶ್ನಿಸಿದರು.
ಅರ್ಹರಿಗೆ ಹಕ್ಕುಪತ್ರ ನೀಡಿ: ನಾಗರಾಜ ಮರಾಠಿ
ದೇವನಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜ ಮರಾಠಿ ಮಾತನಾಡಿ, ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಮಾಡುವ ಬದಲು ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಬೇಕು ಎಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ತೆರಿಗೆ ಪಾವತಿಸಿ ಪಂಚಾಯಿತಿ ದಾಖಲೆಗಳನ್ನು ಹೊಂದಿರುವ ಜನರ ಹಕ್ಕುಗಳನ್ನು ಕಸಿದುಕೊಳ್ಳುವ ಕ್ರಮ ಸರಿಯಲ್ಲ. ಸರ್ಕಾರ ತನ್ನ ಆದೇಶವನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸದಸ್ಯ ನಾರಾಯಣ ಹೆಗಡೆ ಮಾತನಾಡಿ, ಸರ್ಕಾರದ ಆದೇಶ ಜಾರಿಯಾದರೆ ಅತಿಕ್ರಮಣ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಇಂತಹ ನಿರ್ಧಾರವನ್ನು ಸರ್ಕಾರ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸುದರ್ಶನ ದಿವಾಕರ, ಸುನೀಲ ಹೆಗಡೆ, ದಾಮೋದರ ಸಿದ್ದಿ, ರವಿ ಗಾಂವ್ಕರ್, ಸುನೀಲ್ ಭಟ್, ನಿರ್ಮಲಾ ಶೆಟ್ಟಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0