ರಾತ್ರಿ ಯಕ್ಷಗಾನ ಮಾಡಿಸಿದ್ದರು ಬೆಳಿಗ್ಗೆ ದೇಹ ತ್ಯಜಿಸಿದರು!

Oct 28, 2025 - 21:08
 0  287
ರಾತ್ರಿ ಯಕ್ಷಗಾನ ಮಾಡಿಸಿದ್ದರು ಬೆಳಿಗ್ಗೆ ದೇಹ ತ್ಯಜಿಸಿದರು!

ಆಪ್ತ ನ್ಯೂಸ್ ಯಲ್ಲಾಪುರ:

ಹವ್ಯಾಸಿ ಯಕ್ಷಗಾನ ಕಲಾವಿದ  ಹುತ್ಕಂಡದ ಕೃಷ್ಣ ಹೆಗಡೆ ರುಮಡಿಗದ್ದೆ ಮಂಗಳವಾರ ಬೆಳಗಿನ ಜಾವ ಇಹಲೋಕತ್ಯಜಿಸಿದರು.ಅವರಿಗೆ  ೬೯ ವರ್ಷ ವಯಸ್ಸಾಗಿತ್ತು.ಪತ್ನಿ,ಓರ್ವ ಪುತ್ರ,ಇಬ್ಬರು ಪುತ್ರಿ ಬಂಧುಬಳಗವನ್ನು ಅಗಲಿದ್ದಾರೆ.
ಇವರಿಗೆ ಯಕ್ಷಗಾನ ಅಂದರೆ ಅಚ್ಚುಮೆಚ್ಚು. ಪಾತ್ರ ಮಾಡುವುದೆಂದರೆ ಮತ್ತೂ ಖುಷಿ, ಮಕ್ಕಳಿಗೆ ಕಲಿಸುವುದೆಂದರೆ ಎಲ್ಲಿಲ್ಲದ ಪ್ರೀತಿ. ಹೀಗೆ ಊರಲ್ಲಿ ಮಕ್ಕಳಿಗೆ ಹಲವರಿಗೆ ಯಕ್ಷಗಾನದ ಗೀಳನ್ನು ಹಿಡಿಸಿದವರು ರುಮಡಿಗದ್ದೆಯ ಕೃಷ್ಣ ಹೆಗಡೆಯವರು. ಹವ್ಯಾಸಿ ಯಕ್ಷ ಕಲಾ ಬಳಗ ಹನುಮಂತಕೊಪ್ಪ  ಎಂಬ ಬಳಗವನ್ನೂ ಕಟ್ಟಿಬೆಳಸಿದ್ದರು. ಅದರ ವತಿಯಿಂದ ಸೋಮವಾರ ರಾತ್ರಿ ಉಪಳೇಶ್ವರದಲ್ಲಿ ಇವರು ದುಷ್ಟಬುದ್ದಿ ಚಂದ್ರಹಾಸ ಚರಿತ್ರೆ ಯಕ್ಷಗಾನ ಮಾಡಿಸಿದ್ದರು.
ಕಳೆದ ಮೇದಲ್ಲಿ ಮಾಡುವದಿತ್ತು. ಆದರೆ ಮಳೆಯ ತೊಂದರೆಯಿಂದ ನಂತರ ಸಾಧ್ಯವಾಗಲಿಲ್ಲ. ಸೋಮವಾರವೂ ಮಳೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತ ಸಭಾಭವನದಲ್ಲಿ ಏರ್ಪಾಡು ಮಾಡಿಸಿದ್ದರು. ಅದು ಅವರ ಎಂಟನೆಯ ವರ್ಷದ ಯಕ್ಷಗಾನ. ರಾತ್ರಿ ಸಭಾ ಕಾರ್ಯಕ್ರಮದಲ್ಲಿ ನಂತರ ಬಂದವರ ಜೊತೆಗೆ ಮಾತನಾಡುತ್ತ, ತಮಾಷೆ ಮಾಡುತ್ತ ಕುಣಿದಾಡುತ್ತಲೇ ಇದ್ದರು. ಯಕ್ಷಗಾನ ತಡರಾತ್ರಿ ಮುಗಿದಿತ್ತು. ಮುಗಿಸಿ ಮನೆ ಸೇರಿದ್ದರು ಎಲ್ಲರೂ ಮತ್ತು ಈ ಹೆಗಡೆಯವರು. 
ಬೆಳಗಿನ ಜಾವ ಕೃಷ್ಣ ಹೆಗಡೆ ರುಮಡಿಗದ್ದೆ ಓಂ ಶಾಂತಿ ಎಂಬ ಸಂದೇಶವೊಂದು ಹರಿದಾಡಿತು. ನಂಬಲು ಸಾಧ್ಯವೇ ಇಲ್ಲ. ಆದರೂ ಸತ್ಯ, ಶಿವನ ಪಾದ ಸೇರೆಬಿಟ್ಟರು. ಸೋಮವಾರ ರಾತ್ರಿಯ ಯಕ್ಷಗಾನದ ಪ್ರದರ್ಶನ ಸಲುವಾಗಿ ತುಂಬಾ ಶೃಮ ಹಾಕಿದ್ದರು. ಮುಂದೂಡಿದ ಯಕ್ಷಗಾನ ಏನೇ ಆಗಲಿ ಮಾಡಲೇಬೇಕೆಂಬ ಹಠ ಹೊತ್ತು ಮಾಡಿಸಿದರು. ಜನರ ಬಳಿ ಅಲ್ಪಸ್ವಲ್ಪ ಕಾಡಿಬೇಡಿ ಹಣಸಂಗ್ರಹಿಸಿದ ಪರಿಣಾಮ ಮಾಡಲೇಬೇಕೆಂಬುದು ಅವರ ತುಮುಲ. 
ನಮ್ಮೆಲ್ಲರ ಜೊತೆ ಆಚೆ ಈಚೆ ಓಡಾಡಿದ ವ್ಯಕ್ತಿ ಬೆಳಗಾಗುವುದರೊಳಗೆ ಹೀಗಾದ ಎಂಬ ಸಂಗತಿ ಎಲ್ಲರೂ ಹೌಹಾರುವಂತೆ ಮಾಡಿತು. ಯಕ್ಷಗಾನಕ್ಕೆ ಬದುಕನ್ನು ಮುಡುಪಾಗಿಟ್ಟ ಹತ್ತಾರು ಕಲಾವಿದರ ಕುಣಿತ ನೋಡಿ ಕಲಿತು‌ ಊರ ಮಕ್ಕಳಿಗೆ ಕಲಿಸಿ ಮಕ್ಕಳಿಂದ ನಮ್ಮ ಕೃಷ್ಣಜ್ಜ ಎನಿಸಿಕೊಂಡಿದ್ದರು. ಬೆಳಿಗ್ಗೆಯೇ ಬಂದ ಸಾವಿನ ಸುದ್ದಿಯನ್ನು ಅದೆಷ್ಟೋ ಜನ ನಂಬದಾದರು. ಏನೇ ಆದರೂ ಸಾವಿನ ಅರೆಕ್ಷಣ ಮೊದಲು ತಮ್ಮ ಹರಕೆಯ ಆಟವನ್ನು ಪ್ರದರ್ಶನಗೊಳಿಸಿದ್ದರು. ಉದ್ಘಾಟನೆಯ ಸಂದರ್ಭದಲ್ಲೂ ಅವರ ಕ್ರಿಯಾತ್ಮಕತೆ ಬಗ್ಗೆ ಮಾತನಾಡಲಾಗಿತ್ತು. ಅವರ ಬದುಕು,ಕಷ್ಟ ಅವರಲ್ಲಿನ ಆಸಕ್ತಿ ಬಗ್ಗೆ ಮಾತನಾಡಿದ್ದರು. ಆದರೆ ಬೆಳಗಾದರೆ ಕೃಷ್ಣ ಹೆಗಡೆ ಇನ್ನಿಲ್ಲವಾಗಿದ್ದರು. ಬಹುಶಃ ಸೋಮವಾರ ಈ ಹರಕೆಯ ಯಕ್ಷಗಾನ ಅವರ ಕನಸಾಗಿತ್ತು. ಅದೇ ಕೊನೆಯಾಟವಾಯ್ತು. ಎಂಟು ವರ್ಷದಿಂದ ನಡೆಸಿಕೊಂಡು ಬಂದ ಈ ಹರಕೆಯ ಯಕ್ಷಗಾನ ಮುಂದೆ ಯಾರು ಮುನ್ನೆಡೆಸುತ್ತಾರೆನ್ನುವುದು ಪ್ರಶ್ನೆ? ಹಿಂದೆ ಬರಗಾಲ ಬಿದ್ದಾಗ ಯಕ್ಷಗಾನದ ಹರಕೆ ಹೊತ್ತು ಮಾಡಿಸಿಕೊಂಡು ಬಂದಿದ್ದರೆನ್ನುವುದು ಉಲ್ಲೇಖನೀಯ. ಏನೂ ಓದದಿದ್ದರೂ ಕಲಾವಿದನಾಗಿ ಮಕ್ಕಳಿಗೆ ಗುರುವಾಗಿ ಊರಲ್ಲಿ ಜನಪ್ರೀಯತೆ ಗಳಿಸಿದ್ದ ಕೃಷ್ಣ ಹೆಗಡೆ ಇನ್ನು ನೆನಪು ಮಾತ್ರ.

What's Your Reaction?

Like Like 1
Dislike Dislike 1
Love Love 0
Funny Funny 0
Angry Angry 1
Sad Sad 0
Wow Wow 0