
...ವಿಂಗ್ ಕಮಾಂಡರ್ ಸುದರ್ಶನ
*****
18 ನವೆಂಬರ್ 1962 ಬೆಳಗಿನ ಜಾವ ಮೂರುವರೆ ಸಮಯದ ಮಂದ ಬೆಳಕಿನಲ್ಲಿ ಪೂರ್ವದ ಕಡೆಯಿಂದ ಚೀನಾದ ಸೈನಿಕರು ಪರ್ವತ ಹತ್ತುತ್ತಿರುವುದು ಕಾಣುತ್ತಲೇ ರೇಡಿಯೋ ಮುಖಾಂತರ ಎಲ್ಲರಿಗೂ ಎಚ್ಚರಿಕೆಯಿಂದ ಇರಲು ಶೈತಾನ್ ಸಿಂಗ್ ಆದೇಶ ನೀಡಿದರು...
'ಅವಸರ ಪಡಬೇಡಿ, ಬಂದೂಕಿನ ಒಳವ್ಯಾಪ್ತಿಗೆ ಸಿಗುವ ತನಕ ಗುಂಡು ಚಲಾಯಿಸಬೇಡಿ, ಶಬ್ದ ಮಾಡಬೇಡಿ, ನಾನು "ಫೈರ್"ಎಂದು ಆದೇಶ ಕೊಡುವವರೆಗೆ ಕಾಯಿರಿ'
ಚೀನೀಯರು
ಇನ್ನೇನು ಹತ್ತಿರ ಬಂದ ಕೂಡಲೇ 'ಫೈರ್' ಎಂದು ಗರ್ಜಿಸಿದರು. ಪರ್ವತದ ಪ್ರಶಾಂತತೆಯನ್ನು ಸೀಳಿಕೊಂಡು.. ಡಡ್ಡ್..ಡಡ್ಡ್ ಡಡ್ಡ್ ಶಬ್ದ ಗುಂಜಾಯಿಸಿತು. ಸತ್ತು ಬಿದ್ದ ಚೀನೀ ಸೈನಿಕರ ಹೆಣಗಳು ಹಿಮದಲ್ಲಿ ಹುದುಗಿ ಹೋದವು. ಬದುಕಿ ಮುನ್ನುಗ್ಗಿದವರನ್ನು ಬಂದೂಕಿನ ಬಯೋನೆಟ್ಟಿನಿಂದ ಎದೆಗೆ ಚುಚ್ಚಿ ಸಾಯಿಸಿದರು, ಉಳಿದವರು ಓಡಿ ಹೋದರು.
ಗಾಯಗೊಂಡ ಭಾರತೀಯ ಸೈನಿಕರ ಮನೋಸ್ಥೈರ್ಯ ತುಂಬಿ ಮೇಜರ್ ಶೈತಾನ್ ಸಿಂಗ್ ಇನ್ನೊಂದು ಶಿಖರದ ಪ್ಲಾಟೂನಿನ ಕಡೆ ದೌಡಾಯಿಸಿದರು. ಅವರಿಗೆ ಗೊತ್ತಿತ್ತು ಚೀನೀಯರು ಇನ್ನೊಂದು ದಿಕ್ಕಿನಿಂದ ಬರುತ್ತಾರೆ ಎಂದು, ಅವರ ಊಹೆ ನಿಜವಾಯಿತು. ಈ ಸಲ ಸಾವಿರಾರು ಚೀನೀಯರು ರೇಜಾ಼ಂಗ್ ಲಾ ಪರ್ವತ ಶಿಖರವನ್ನು ಏರತೊಡಗಿದರು. ಪುನಃ ಅದೇ ರಣತಂತ್ರ ದಿಂದ ಚೀನಾದ ಸೈನಿಕರನ್ನು ಮುಗಿಸಲಾಯಿತು. ಹತ್ತಿರ ಬಂದವರನ್ನು ಕೈಯಿಂದಲೇ ಕೊಂದು ಸಾಯಿಸಿದರು. ಅಷ್ಟೊತ್ತಿಗೆ ಸೂರ್ಯೋದಯವಾಯಿತು.
ಮೇಜರ್ ಸಿಂಗ್ ರವರು ಇನ್ನೆಷ್ಟು ಗುಂಡುಗಳು ಉಳಿದಿವೆ, ಎಷ್ಟು ಸೈನಿಕರು ಜೀವಂತವಾಗಿದ್ದಾರೆ ಎನ್ನುವ ಲೆಕ್ಕಾಚಾರ ಮಾಡಿಕೊಂಡು ಇನ್ನೊಂದು ದಾಳಿಯನ್ನು ಹೆದರಿಸಬಹುದು ಅಷ್ಟೇ ಎನ್ನುವ ನಿರ್ಧಾರಕ್ಕೆ ಬಂದರು. ಸಮಯ ಆಗಲೇ ಎಂಟು ಗಂಟೆಯಾಗಿತ್ತು ಪೂರ್ವಕ್ಕೇ ಕಣ್ಣಿಟ್ಟು ಕಾಯುತ್ತಿದ್ದ ಸೈನಿಕರಿಗೆ ಹಿಂದಿನಿಂದ ಬಂದ ಸೈನಿಕರು ತಮ್ಮ ರೆಜಿಮೆಂಟಿನ ಇನ್ನೊಂದು ಕಂಪನಿ ಸಹಾಯಕ್ಕೆ ಬರುತ್ತಿದೆಯೇನೋ ಎಂದು ಭಾವಿಸಿದ್ದರು. ಆದರೆ ದೂರ್ಬೀನಿನ ಒಳ ವ್ಯಾಪ್ತಿಗೆ ಬಂದಾಗ ಕಾಣಿಸಿದ್ದು ಚೀನಾದ ಸೈನಿಕರು. ಕೂಡಲೇ ಫೈರಿಂಗಿಗೆ ಆದೇಶ ನೀಡಿದರು ಮೇಜರ್ ಸಿಂಗ್. ಚೀನೀಯರು ಎಸೆದ ಒಂದು ಗ್ರೆನೇಡ್ ಅವರ ಹೊಟ್ಟೆಯನ್ನು ಬಗಿದು ಹಾಕಿತು. ಅವರ ರೇಡಿಯೋ ಮ್ಯಾನ್ ರಾಮಚಂದ್ರ ಯಾದವ್ ಅವರನ್ನು ಎತ್ತಿಕೊಂಡು ಬಂಕರಿನ ಒಳಗೆ ಹೋದ. ವಿಪರೀತ ರಕ್ತಸ್ರಾವದಿಂದ ಆಗಾಗ ಮೂರ್ಛೆ ಹೋಗುತ್ತಿದ್ದ ಮೇಜರ್ ಒಮ್ಮೆ ಸಾವರಿಸಿಕೊಂಡು ರಾಮಚಂದ್ರ ಯಾದವರಿಗೆ....
"ನೀನು ಇಲ್ಲಿಂದ ಹೊರಟು ಕೆಳಗಿನ ರೆಜಿಮೆಂಟಿನ ಮುಖ್ಯಾಲಯಕ್ಕೆ ಹೋಗಿ ನಡೆದದ್ದನ್ನೆಲ್ಲಾ ಹೇಳಿಬಿಡು, ಹೇಳು ನಮ್ಮ ಕಂಪನಿ ಸಾವಿರಾರು ಚೀನೀಯರನ್ನು ಕೊಂದು ಹಾಕಿದೆ...ಎಂದು"
ಸ್ವಾಮಿ ಭಕ್ತ ಯಾದವ್ ಇದಕ್ಕೆ ಒಪ್ಪಲೇ ಇಲ್ಲ. ಅಷ್ಟೊತ್ತಿಗೆ ಭಾರತೀಯ ಸೈನಿಕರ ಗುಂಡುಗಳೆಲ್ಲಾ ಖಾಲಿಯಾಗಿದ್ದವು. ಸಿಕ್ಕ ಸಿಕ್ಕ ಚೀನೀಯರ ತಲೆಗಳನ್ನು ಡಿಕ್ಕಿ ಹೊಡೆಸಿ ಸಾಯಿಸುತ್ತಲೇ ಪ್ರಾಣ ಬಿಟ್ಟರು. ಇನ್ನೇನು ನಮ್ಮ ಕಮಾಂಡರನ್ನು ಹುಡುಕಿಕೊಂಡು ಬರುತ್ತಾರೆ ಎಂದು ಮನವರಿತ ಯಾದವ್ ಬಂದೂಕಿಗೆ ಕಟ್ಟಿದ್ದ ಬೆಲ್ಟಿನಿಂದ ಮೇಜರ್ ಸಿಂಗರವರನ್ನು ತನ್ನ ದೇಹಕ್ಕೆ ಕಟ್ಟಿಕೊಂಡು ಶಿಖರದಿಂದ ಕೆಳಕ್ಕೆ ಉರುಳಲು ಪ್ರಾರಂಭಿಸಿದ. ಸುಮಾರು ನಾನೂರು ಅಡಿ ಕೆಳಗೆ ಹೋದ ಮೇಲೆ ಮೇಜರ್ ಸಾಹೀಬರನ್ನು ಬಂಡೆಗಳ ಮರೆಯಲ್ಲಿ ಮಲಗಿಸಿ ಸಹಾಯ ಕೋರಲು ರೆಜಿಮೆಂಟಿನ ಮುಖ್ಯಾಲಯದ ಕಡೆಗೆ ದೌಡಾಯಿಸಿದ. ವಿಷಯ ತಿಳಿದ ಅಧಿಕಾರಿಗಳು ಕೂಡಲೇ ವೈದ್ಯಕೀಯ ಸಹಾಯದೊಂದಿಗೆ ಸ್ಥಳಕ್ಕೆ ದೌಡಾಯಿಸಿದರು.
ನಾಡಿಬಡಿತದ ಸಹಾಯದಿಂದ ನಡೆಯುತ್ತಿದ್ದ ಮೇಜರ್ ಶೈತಾನ್ ಸಿಂಗರ ಕೈಗಡಿಯಾರ 8.15 ಕ್ಕೆ ನಿಂತು ಬಿಟ್ಟಿತ್ತು.
ಕೇವಲ 124 ಭಾರತೀಯ ಸೈನಿಕರು ಸುಮಾರು ಸಾವಿರದಷ್ಟು ಚೀನಾದ ಸೈನಿಕರನ್ನು ಹೊಡೆದು ಸಾಯಿಸಿದರು ಎನ್ನುವ ರಾಮಚಂದ್ರ ಯಾದವ್ ಅವರ ಹೇಳಿಕೆಯನ್ನು ಸೈನ್ಯದವರೇ ನಂಬಲಿಲ್ಲ. ಅಲ್ಲಿ ಬದುಕಿದ ಕೆಲವರನ್ನು ಚೀನೀಯರು ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದು ಕೊಂಡೊಯ್ದರು. ಅದರಲ್ಲಿ ನಿಹಾಲ್ ಸಿಂಗ್ ಎನ್ನುವ ಸೈನಿಕ ಚೀನೀಯರ ಕಣ್ತಪ್ಪಿಸಿ ಓಡಿಬಂದ. ಸಾವಿರಾರಕ್ಕೂ ಹೆಚ್ಚು ಚೀನಾದ ಸೈನಿಕರ ದೇಹಗಳನ್ನು ಹಲವಾರು ಟ್ರಕ್ಕುಗಳಲ್ಲಿ ತಾನೇ ಕಣ್ಣಾರೆ ಕಂಡಿದ್ದೇನೆ ಎಂದ ಮೇಲೆ ಅಧಿಕಾರಿಗಳು ಈ ವೃತ್ತಾಂತದ ಗಾಢತೆಯನ್ನು ಅರ್ಥ ಮಾಡಿಕೊಂಡು ಹೌಹಾರಿಹೋದರು.
20 ಫೆಬ್ರವರಿ 1963 ಯಂದು ಕುರಿಗಾಹಿಯೊಬ್ಬ ಲಡಾಕಿನ ಚುಶೂಲ್ ಪ್ರಾಂತದ ಬಳಿ ಪರ್ವತದ ಮೇಲೆ ಹತ್ತಿದ್ದ ಮೇಕೆಗಳನ್ನು ತರುಬಲು ಹೋದಾಗ ಭಯಾನಕ ದೃಷ್ಯವೊಂದು ಕಂಡು ಹೆದರಿ ಓಡಿಬಂದು ಹತ್ತಿರದ ಸೈನ್ಯದ ಕಛೇರಿಗೆ ತಾನು ಕಂಡ ವಿಷಯವನ್ನು ತಿಳಿಸಿದ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ವಸ್ತು ಸಂಗ್ರಹಾಲಯದಲ್ಲಿಟ್ಟಿದ್ದ ಮೂರ್ತಿಗಳಂತೆ ಕಾಣುತ್ತಿದ್ದ ಸೈನಿಕರ ಪಾರ್ಥಿವ ಶರೀರಗಳನ್ನು
ಸ್ವಲ್ಪ ಹೊತ್ತು ಎವೆಯಿಕ್ಕದೆ ನೋಡಿದರು. ರಕ್ಷಣಾ ಕವಚಗಳಿಲ್ಲದೆ ಕೊರೆಯುವ ಛಳಿಯಲ್ಲಿ ಹೋರಾಡುತ್ತಲೇ ಪ್ರಾಣ ಬಿಟ್ಟಿದ್ದಾರೆ. ಛಳಿಗೆ ಅವರ ಮೃತದೇಹಗಳು ಹಾಗೇ ಸೆಟೆದುಕೊಂಡು ಬಿಟ್ಟಿದ್ದಾವೆ. ಬಂದೂಕಿನ ಮೇಲೆ ಇಟ್ಟಿದ್ದ ಕೈ ಹಾಗೇ ಇದೆ. ಗಾಯಾಳುಗಳಿಗೆ ಬ್ಯಾಂಡೇಜ್ ಕಟ್ಟುತ್ತಲೇ ಪ್ರಾಣಬಿಟ್ಟ ವೈದ್ಯಕೀಯ ಸಹಾಯಕ..ಗುಂಡುಗಳಿಲ್ಲದ ಬಂದೂಕಿನ ಬಯೋನಟ್ಟನ್ನು ಹಿಡಿದುಕೊಂಡು ಮುನ್ನುಗ್ಗುತ್ತಲೇ ಸತ್ತಿರುವ ಸೈನಿಕ.
ಎಲ್ಲಾ ಗುಂಡುಗಳು ಎದೆಯ ಮೇಲೆ ಹೊಕ್ಕಿದ್ದವೇ ಹೊರತು ಬೆನ್ನಿನ ಮೇಲೆ ಬಿದ್ದಿಲ್ಲಾ…
ನಂತರ ದೊರೆತ ಮೇಜರ್ ಶೈತಾನ್ ಸಿಂಗರ ಮೃತ ದೇಹವನ್ನು ಅವರ ಹುಟ್ಟೂರು ರಾಜಾಸ್ಥಾನದ ಜೋಧಪುರಕ್ಕೆ ರವಾನಿಸಲಾಯಿತು. ಈ ವೀರಯೋಧನ ಅಂತೇಷ್ಟಿಗೆ ಜನಸಾಗರವೇ ಹರಿದು ಬಂದು ಆಶೂತರ್ಪಣ ಅರ್ಪಿಸಿತು.
1962 ಚೀನಾದ ಆ ಆಕ್ರಮಣದ ವಿಷಯ ಬಂದಾಗ ಅವಮಾನ, ಹತಾಶೆಗಳ ಬಗ್ಗೆಯೇ ಆಲೋಚಿಸಿ ಕುಗ್ಗಿ ಹೋಗುತ್ತೇವೆ, ಆದರೆ ಇತಿಹಾಸದ ಪುಟಗಳಲ್ಲಿ ಹುದುಗಿರುವ ಇಂಥಹದೊಂದು ಸಾಹಸಗಾಥೆಯನ್ನು ಮರೆಯಬಾರದು.