ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆನಗೋಡ ಶಾಲೆಯ ಶಿಕ್ಷಕ ಮಾರುತಿ ಆಚಾರಿ ಆಯ್ಕೆ
ಆಪ್ತ ನ್ಯೂಸ್ ಯಲ್ಲಾಪುರ:
ತಾಲ್ಲೂಕಿನ ಆನಗೋಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ಮಾರುತಿ ಆಚಾರಿ ಅರಬೈಲ್ ಇವರು ಜಿಲ್ಲಾ ಮಟ್ಟದ ಪ್ರತಿಭಾನ್ವಿತ ಹಾಗೂ ಕ್ರಿಯಾಶೀಲ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದ ೨೦೨೬-೨೭ ನೇ ಸಾಲಿನ ಲ್ಲಿ ನೀಡಲಾಗುವ " ಜಿಲ್ಲಾ ಅತ್ಯುತ್ತಮ ಶಿಕ್ಷಕ " ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಮಾರುತಿ ಆಚಾರಿ ಅವರು ಸಲ್ಲಿಸಿರುವ ಅನೇಕ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಕಳೆದ ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮಾರುತಿ ಆಚಾರಿ ಅವರು, ಸಿದ್ದಾಪುರದಲ್ಲಿ ಸಿಆರ್ಪಿಯಾಗಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ರಾಷ್ಟ್ರಮಟ್ಟದ ಆವಾರ್ಡಗೆ ವಿದ್ಯಾರ್ಥಿ:
ಯಲ್ಲಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಗೋಡ ಶಾಲೆಯ ವಿದ್ಯಾರ್ಥಿನಿ ಸಂಜನಾ ಪಟಗಾರ ಅವರನ್ನು "ರಾಷ್ಟ್ರಮಟ್ಟದ ಇನ್ಸ್ಪೈರ್ ಅವಾರ್ಡ್ ಮಾನಕ' ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಗೆ ಮಾರ್ಗದರ್ಶನ ನೀಡಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಕರೆದೊಯ್ದ ಸಂದರ್ಭದಲ್ಲಿ, ಶಿರಸಿ ಶೈಕ್ಷಣಿಕ ಜಿಲ್ಲೆಯ ಆರು ವಿದ್ಯಾರ್ಥಿಗಳ ತಂಡದ ನೇತೃತ್ವ ವಹಿಸಿ ದೇಹಲಿಗೆ ಕರೆದುಕೊಂಡು ಹೋಗಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟು, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಸ್ಫೂರ್ತಿಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ಇವರದು.
ಶಿಕ್ಷಣ ಇಲಾಖೆ ಆಯೋಜಿಸುವ ಆಶುಭಾಷಣ, ಚಿತ್ರಕಲೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟಕ್ಕೆ ಪ್ರತಿನಿಧಿಸುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಶಾಲೆಯ ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವಲ್ಲಿ ನಾವಿನ್ಯತೆ ಪ್ರಯೋಗಗಳ ಮೂಲಕ ಸಫಲತೆಯನ್ನು ಸಾಧಿಸಿದ್ದಾರೆ.ತಮ್ಮ ಕಾರ್ಯಕ್ಷೇತ್ರದಲ್ಲಿನ ವಿಶೇಷ ಪ್ರಯೋಗಗಳೊಂದಿಗೆ ಮಾರುತಿ ಆಚಾರಿ ಅವರು, ಆನಗೋಡ ಶಾಲೆಯಲ್ಲಿ ಖಗೋಳ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಿ, ಟೆಲಿಸ್ಕೋಪ್ ಮೂಲಕ ನಮ್ಮ ಶಾಲಾ ವಿದ್ಯಾರ್ಥಿಗಳ ಜೊತೆಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ತಾರಾಮಂಡಲ ಬಗ್ಗೆ ಮಾಹಿತಿ ನೀಡಿ, ವೈಜ್ಞಾನಿಕ ವಿಷಯಗಳ ಮೇಲೆ ಆಸಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬಾನು ಬೆರಗು ಎಂಬ ಹೆಸರಿನ ಈ ಕಾರ್ಯಕ್ರಮವನ್ನು ಜಿಲ್ಲೆಯ ವಿವಿಧ ಭಾಗಗಳಲ್ಲಿ 21 ಶಾಲೆಗಳಲ್ಲಿ ನಡೆಸಿ ರಾತ್ರಿ ಆಕಾಶದಲ್ಲಿ ವಿವಿಧ ಆಕಾಶಕಾಯಗಳನ್ನು ತಮ್ಮ ಶಾಲೆಯ ಸುಧಾರಿತ ಟೆಲಿಸ್ಕೋಪ್ ಮೂಲಕ ಪರಿಚಯಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಖಗೋಳ ವಿಜ್ಞಾನದಲ್ಲಿ ಆಸಕ್ತಿಯನ್ನು ಮೂಡಿಸುವಲ್ಲಿ ಕಾರಣೀಕರ್ತರಾಗಿದ್ದಾರೆ.
ಹಲವು ಅನುಭವದ ಖಣಿ:
ಗ್ರಾಫಿಕ್ ಡಿಸೈನಿಂಗ್ ಹಾಗೂ ಏ ಐ ತಂತ್ರಜ್ಞಾನದಲ್ಲಿ ನುರಿತರಾಗಿರುವ ಇವರು ಆನಗೋಡ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಇ -ಕಲಿಕಾ ಕೊಠಡಿಯ ಮೂಲಕ ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಜ್ಞಾನವನ್ನು ಪ್ರಸರಿಸಲು ಕಾರಣರಾಗಿದ್ದಾರೆ. ಗಣಿತ ವಿಷಯದಲ್ಲಿ ತಮ್ಮ ಅಪಾರ ಜ್ಞಾನ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿ, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿ, ಜಿಲ್ಲಾ ಮಟ್ಟದ ಹಲವಾರು ಗಣಿತ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. ರಾಜ್ಯಮಟ್ಟದ ಗಣಿತ ಅಭ್ಯಾಸ ಪುಸ್ತಕ ತಯಾರಿಕೆ ಕಾರ್ಯಗಾರದಲ್ಲಿ ಭಾಗವಹಿಸಿ, ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಆನಗೋಡ ಶಾಲೆಯ ಅನೇಕ ವಿದ್ಯಾರ್ಥಿಗಳನ್ನು ವಿವಿಧ ಸಹಪಠ್ಯ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರುತಿ ಆಚಾರಿ ಅವರ ಈ ಎಲ್ಲ ಸಾಧನೆಗಳನ್ನು ಗುರುತಿಸಿ, ಸೆಪ್ಟೆಂಬರ್ 5 2026 ಶನಿವಾರದಂದು ಶಿರಸಿ ಅಂಬೇಡ್ಕರ್ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿರಸಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ "ಜಿಲ್ಲಾ ಅತ್ಯುತ್ತಮ ಶಿಕ್ಷಕ''ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಲಾಗುತ್ತಿದೆ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0