27 ವರ್ಷಗಳ ಶೈಕ್ಷಣಿಕ ಸೇವೆಗೆ ಮನ್ನಣೆ: ಈರಣ್ಣ ಪಗಡಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಅರಣ್ಯ ಪ್ರದೇಶದ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ; ಬಡ ವಿದ್ಯಾರ್ಥಿಗೆ ಶಿಕ್ಷಣದ ದತ್ತು

Sep 4, 2026 - 18:37
 0  102
27 ವರ್ಷಗಳ ಶೈಕ್ಷಣಿಕ ಸೇವೆಗೆ ಮನ್ನಣೆ: ಈರಣ್ಣ ಪಗಡಿಗೆ ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಆಪ್ತ ನ್ಯೂಸ್ ಜೋಯಿಡಾ:

ದಟ್ಟ ಅರಣ್ಯದ ನಡುವೆ, ತಾಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಕೊಂದರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 27 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಮಕ್ಕಳ ಶೈಕ್ಷಣಿಕ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯ ಶಿಕ್ಷಕ ಈರಣ್ಣ ಶಿವಪುತ್ರಪ್ಪ ಪಗಡಿ ಅವರು ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಳಿಯಾಳ ತಾಲೂಕಿನ ಮದನಳ್ಳಿಯವರಾದ ಈರಣ್ಣ ಪಗಡಿ ಅವರು ಪ್ರಾಥಮಿಕ ಶಿಕ್ಷಕರ ತರಬೇತಿ ಪಡೆದು 23 ಫೆಬ್ರವರಿ 1999ರಂದು ಹಳಿಯಾಳ ತಾಲೂಕಿನ ಮೊದಲಗೇರಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ 28 ನವೆಂಬರ್ 2003ರಂದು ಜೋಯಿಡಾ ತಾಲೂಕಿನ ಗುಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಯಾಗಿ, ಅಲ್ಲಿ 13 ವರ್ಷಗಳ ಕಾಲ ಜನಮೆಚ್ಚಿನ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ನಂತರ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ 2 ಆಗಸ್ಟ್ 2016ರಂದು ಕೊಂದರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗೆ ನಿಯೋಜಿತರಾದ ಅವರು, ಇಂದಿಗೂ ಇದೇ ಶಾಲೆಯಲ್ಲಿ ಸೇವೆ ಮುಂದುವರಿಸಿದ್ದಾರೆ. ಒಟ್ಟಾರೆ 27 ವರ್ಷಗಳ ಸುದೀರ್ಘ ಶೈಕ್ಷಣಿಕ ಸೇವೆ ಅವರದ್ದಾಗಿದೆ.

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿದ ಶಿಕ್ಷಕ

ಕೊಂದರ ಶಾಲೆಯಲ್ಲಿ ಸೇವೆ ಆರಂಭಿಸಿದ ಬಳಿಕ ಈರಣ್ಣ ಪಗಡಿ ಅವರು ಮಕ್ಕಳ ಕಲಿಕೆಯ ಜೊತೆಗೆ ಪ್ರತಿಭಾ ಕಾರಂಜಿ, ಇಕೋ ಕ್ಲಬ್, ಪ್ರೇರಣಾ ಕ್ಲಬ್ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸಿದ್ದಾರೆ. ಇದರ ಪರಿಣಾಮವಾಗಿ ಶಾಲೆಯ ವಿದ್ಯಾರ್ಥಿಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಎಸ್‌ಡಿಎಂಸಿ, ಗ್ರಾಮಸ್ಥರು, ದಾನಿಗಳು, ಗಣ್ಯರು ಹಾಗೂ ಜನಪ್ರತಿನಿಧಿಗಳ ಸಹಕಾರ ಪಡೆದುಕೊಂಡು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಮಾರ್ಗದರ್ಶಕರ ಸಲಹೆ–ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶಾಲೆಯಲ್ಲೇ ಕೈತೋಟ; ಮಕ್ಕಳಿಂದಲೇ ತರಕಾರಿ ಬೆಳೆ

ಶಾಲೆಯ ವಿಶೇಷ ಪ್ರಯತ್ನಗಳಲ್ಲಿ ಮಕ್ಕಳಿಂದಲೇ ಕೈತೋಟ ನಿರ್ಮಿಸಿರುವುದು ಗಮನಾರ್ಹವಾಗಿದೆ. ವಿದ್ಯಾರ್ಥಿಗಳೇ ವಿವಿಧ ತರಕಾರಿಗಳನ್ನು ಬೆಳೆಸುವಂತೆ ಮಾಡಿ, ಅವುಗಳನ್ನು ಶಾಲೆಯ ಮಧ್ಯಾಹ್ನದ ಬಿಸಿ ಊಟಕ್ಕೆ ತಾಜಾ ತರಕಾರಿಯಾಗಿ ಬಳಸುವ ವ್ಯವಸ್ಥೆ ಕಲ್ಪಿಸಿದ್ದಾರೆ. ಇದರಿಂದ ಮಕ್ಕಳಲ್ಲಿ ಕೃಷಿ, ಪರಿಸರ ಸಂರಕ್ಷಣೆ ಹಾಗೂ ಸ್ವಾವಲಂಬನೆಯ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಕೊಂದರ ಶಾಲೆಯಲ್ಲಿ ನಲಿ–ಕಲಿ ಬೋಧನಾ ಪದ್ಧತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ 2019–20ನೇ ಸಾಲಿನಲ್ಲಿ ಉತ್ತಮ ನಲಿ–ಕಲಿ ಶಾಲೆ ಪ್ರಶಸ್ತಿ ದೊರೆತಿದೆ.

ಅಲ್ಲದೆ, 2024–25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು, ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕದ ವತಿಯಿಂದ ಡಾ. ಎಸ್. ರಾಧಾಕೃಷ್ಣನ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನೂ ಈರಣ್ಣ ಪಗಡಿ ಅವರು ಪಡೆದಿದ್ದಾರೆ.

ಬಡ ವಿದ್ಯಾರ್ಥಿಗೆ ಶಿಕ್ಷಣದ ದತ್ತು

ಶಿಕ್ಷಕ ವೃತ್ತಿಯನ್ನು ಕೇವಲ ಪಾಠ ಬೋಧನೆಗೆ ಸೀಮಿತಗೊಳಿಸದೆ, ಸಾಮಾಜಿಕ ಹೊಣೆಗಾರಿಕೆಯನ್ನೂ ನಿರ್ವಹಿಸುತ್ತಿರುವ ಈರಣ್ಣ ಪಗಡಿ ಅವರು ಕೊಂದರ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿ ಕುಮಾರ ಪ್ರದೀಪ ಶಂಕರ ಖೋಲಕರ ಅವರನ್ನು ಶಿಕ್ಷಣಕ್ಕಾಗಿ ದತ್ತು ಪಡೆದಿದ್ದಾರೆ. ಪ್ರಸ್ತುತ ವಿದ್ಯಾರ್ಥಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಪ್ರತಿ ವರ್ಷ 5ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿರುವ ಅವರು, ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ನೋಟಬುಕ್ ಹಾಗೂ ಲೇಖನ ಸಾಮಗ್ರಿಗಳ ವೆಚ್ಚವನ್ನೂ ತಮ್ಮಿಂದಲೇ ಭರಿಸುತ್ತಿದ್ದಾರೆ.

ಅರಣ್ಯದ ನಡುವೆ ಇರುವ ಪುಟ್ಟ ಶಾಲೆಯೊಂದನ್ನು ಶೈಕ್ಷಣಿಕ ಚಟುವಟಿಕೆಗಳು, ಪರಿಸರ ಕಾಳಜಿ ಹಾಗೂ ಸಾಮಾಜಿಕ ಜವಾಬ್ದಾರಿಯ ಕೇಂದ್ರವನ್ನಾಗಿ ರೂಪಿಸಿರುವ ಈರಣ್ಣ ಪಗಡಿ ಅವರ ಸೇವೆಗೆ ಇದೀಗ ಜಿಲ್ಲಾ ಮಟ್ಟದ ಪ್ರಶಸ್ತಿಯ ಗರಿ ಸಂದಿದೆ.

ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿಗೆ ಆಯ್ಕೆಯಾಗಿರುವ ಈರಣ್ಣ ಪಗಡಿ ಅವರಿಗೆ ತಾಲೂಕು ಅಧಿಕಾರಿಗಳು, ಶಿಕ್ಷಕ ವೃಂದ, ಗಣ್ಯರು, ಹಳೆಯ ವಿದ್ಯಾರ್ಥಿಗಳು, ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0