ಹೆಗ್ಗಾರ ಶಾಲೆಯ ಅಡುಗೆ ಕೋಣೆಗೆ ಕನ್ನ: ಮತ್ತೆ ಕೈಚಳಕ ತೋರಿಸಿದ ನಾರಾಯಣ ಸಿದ್ದಿ! ಪೊಲೀಸರ ಕಾರ್ಯವೈಖರಿ ಕುರಿತು ಸಾರ್ವಜನಿಕರ ಅಸಮಾಧಾನ

Oct 2, 2026 - 08:39
 0  317
ಹೆಗ್ಗಾರ ಶಾಲೆಯ ಅಡುಗೆ ಕೋಣೆಗೆ ಕನ್ನ: ಮತ್ತೆ ಕೈಚಳಕ ತೋರಿಸಿದ ನಾರಾಯಣ ಸಿದ್ದಿ! ಪೊಲೀಸರ ಕಾರ್ಯವೈಖರಿ ಕುರಿತು ಸಾರ್ವಜನಿಕರ ಅಸಮಾಧಾನ

ಆಪ್ತ ನ್ಯೂಸ್ ರಾಮನಗುಳಿ:

ಹಳವಳ್ಳಿ–ಹೆಗ್ಗಾರ ಭಾಗದಲ್ಲಿ ಪದೇಪದೆ ಕಳ್ಳತನ ಪ್ರಕರಣಗಳಲ್ಲಿ ಹೆಸರು ಕೇಳಿಬರುತ್ತಿರುವ ನಾರಾಯಣ ಸಿದ್ದಿ ಮತ್ತೆ ತನ್ನ ಕೈಚಳಕ ತೋರಿಸಿದ್ದಾನೆ. ಈ ಬಾರಿ ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಗ್ಗಾರ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನೇ ಗುರಿಯಾಗಿಸಿಕೊಂಡಿದ್ದು, ಕಳ್ಳತನ ಪ್ರಕರಣ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಅಂಕೋಲಾ ತಾಲೂಕಿನ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಹೆಗ್ಗಾರ ಹಿರಿಯ ಪ್ರಾಥಮಿಕ ಶಾಲೆಯ ಕಿಟಕಿಯ ಸರಳುಗಳನ್ನು ಮುರಿದು ಒಳನುಗ್ಗಿರುವ ಕಳ್ಳ, ಅಡುಗೆ ಕೋಣೆಯಲ್ಲಿದ್ದ ಹಲವು ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಕೃತ್ಯದ ಹಿಂದೆ ನಾರಾಯಣ ಸಿದ್ದಿ ಕೈವಾಡವಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಅನ್ನಪೂರ್ಣ ಮಾರ್ಟ್‌ನಲ್ಲೂ ಈ ಹಿಂದೆ ಕಳ್ಳತನ ಆರೋಪ!

ಇದೇ ಡೋಂಗ್ರಿ ಪಂಚಾಯತ ವ್ಯಾಪ್ತಿಯ ಕನಕನಹಳ್ಳಿ ಸಮೀಪದ ನರಸಿಂಹ ಭಾಗವತ್ ಮಾಲೀಕತ್ವದ ಅನ್ನಪೂರ್ಣ ಮಾರ್ಟ್‌ನಲ್ಲೂ ಈ ಹಿಂದೆ ನಾರಾಯಣ ಸಿದ್ದಿ ಕಳ್ಳತನ ನಡೆಸಿದ್ದಾನೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಅಂಗಡಿ ಮಾಲೀಕನ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಅಂಗಡಿಯ ಶಟರ್‌ಗೆ ವಿದ್ಯುತ್ ಹರಿಸುವ ದುಸ್ಸಾಹಸವನ್ನೂ ಮಾಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸ್ಥಳೀಯರ ಆರೋಪದ ಪ್ರಕಾರ, ಕಳೆದ ಒಂದು ವರ್ಷದಿಂದ ಹೆಗ್ಗಾರ, ಕನಕನಹಳ್ಳಿ, ರಾಮನಗುಳಿ, ಕಲ್ಲೇಶ್ವರ ಹಾಗೂ ಹಳವಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ನಡೆಯುತ್ತಿವೆ. ಹಲವು ಪ್ರಕರಣಗಳಲ್ಲಿ ನಾರಾಯಣ ಸಿದ್ದಿ ಹೆಸರು ಕೇಳಿಬಂದಿದ್ದು, ಹೆಗ್ಗಾರ, ಕಲ್ಲೇಶ್ವರ ಸೇರಿದಂತೆ ಸುತ್ತಮುತ್ತಲಿನ ಸಹಕಾರಿ ಸಂಘಗಳಲ್ಲಿಯೂ ಕಳ್ಳತನ ಪ್ರಕರಣಗಳಲ್ಲಿ ಆತನ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.

ಸಹಚರರ ಬಂಧನ, ಪ್ರಮುಖ ಆರೋಪಿ ಇನ್ನೂ ಪತ್ತೆಯಾಗಿಲ್ಲವೇ?

ಹಿಂದಿನ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾರಾಯಣ ಸಿದ್ದಿಯ ಕೆಲವು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು, ಪ್ರಮುಖ ಆರೋಪಿ ಎಂದು ಸ್ಥಳೀಯರು ಹೇಳುತ್ತಿರುವ ನಾರಾಯಣ ಸಿದ್ದಿಯನ್ನು ಮಾತ್ರ ಬಂಧಿಸಲು ಸಾಧ್ಯವಾಗಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಪದೇಪದೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತಿಲ್ಲವೇ? ಒಂದೇ ವ್ಯಕ್ತಿಯ ವಿರುದ್ಧ ಹಲವು ಆರೋಪಗಳು ಕೇಳಿಬರುತ್ತಿದ್ದರೂ ಪೊಲೀಸರು ಏಕೆ ಮೌನವಾಗಿದ್ದಾರೆ? ಎಂಬ ಪ್ರಶ್ನೆಗಳು ಇದೀಗ ಸ್ಥಳೀಯರನ್ನು ಕಾಡತೊಡಗಿವೆ.

ಪೊಲೀಸ್ ಠಾಣೆ ಎದುರು ಪ್ರತಿಭಟನೆ ಎಚ್ಚರಿಕೆ!

ಹೆಗ್ಗಾರ, ಕನಕನಹಳ್ಳಿ, ರಾಮನಗುಳಿ, ಕಲ್ಲೇಶ್ವರ ಹಾಗೂ ಹಳವಳ್ಳಿ ಭಾಗದ ಜನರು ಪೊಲೀಸರ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಕೂಡಲೇ ಪತ್ತೆಹಚ್ಚಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನಾದರೂ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0