~ಯಮುನಾ ಭಟ್ಟ ಹೆಗ್ಗಾರ
____________________________
.
ಸರಕಾರ ಬೇಡ್ತಿ ನದಿಯನ್ನು ಮತ್ತು ಶಾಲ್ಮಲಾ ನದಿಯನ್ನು ತಿರುಗಿಸಿ ಬೇರೆ ಜಿಲ್ಲೆಯ ಜನರಿಗೆ ಕುಡಿಯುವ ನೀರನ್ನು ಕೊಡಬೇಕೆಂದು ಹೊರಟಿದೆ. ಕುಡಿಯುವ ನೀರು ಎಂಬ ಕಾರಣದಿಂದ ಭಾಳ ಅನುಕಂಪವೂ ದೊರಕಿದೆ. ಜಿಲ್ಲೆಯ ಜನರಿಂದ ಪ್ರತಿರೋಧ, ಹೊರಾಟವೂ ಪ್ರಾರಂಭವಾಗಿದೆ. ಆದರೆ ನಿಜವಾದ ಹಕಿಕತ್ತು ಏನೆಂಬುದನ್ನು ಜನರು ಅರಿಯಬೇಕಾಗಿದೆ.
ಬೇಡ್ತಿ ನದಿ ಹುಬ್ಬಳ್ಳಿಯಲ್ಲಿ ಹುಟ್ಟಿ ಕಲಘಟಗಿ, ಕಿರವತ್ತಿ, ಶಿಡ್ಲಗುಂಡಿಯಲ್ಲಿ ಮುಂಡಗೋಡದಿಂದ ಬಂದ ಹಳ್ಳವನ್ನು ಸೇರಿಸಿಕೊಂಡು ಅದೇ ಮಾರ್ಗವಾಗಿ ಯಲ್ಲಾಪುರ ಶಿರಸಿ ಮಧ್ಯದ ಬೇಡ್ತಿ ಸೇತುವೆಯನ್ನು ದಾಟುತ್ತ ಅಲ್ಲೇ ಹಾಳುಬಿದ್ದ ಯಲ್ಲಾಪುರ ನಗರದ ಕುಡಿಯುವ ನೀರಿನಯೋಜನೆಯ ಬಾಂದಾರವನ್ನು ಅಣುಕಿಸುತ್ತ ಮಾಗೋಡಿನಲ್ಲಿ ಜಲಪಾತವನ್ನು ಇಳಿದು ಕೊಂಚ ದೂರ ಸಾಗುತ್ತಲೇ ಚಿತ್ತಪ್ಪೆ ಎನ್ನುವಲ್ಲಿ ಸೋಂದಾ- ಸಹಸ್ರಲಿಂಗದಿಂದ ಬಂದ ಶಾಲ್ಮಲಾ ನದಿಯನ್ನು ಸೇರಿ ಮುಂದುವರಿಯುತ್ತಾಳೆ. ಈ ಚಿತ್ತಪ್ಪೆ ಎಂಬುದು ಅಂಕೋಲ ತಾಲುಕಿನ ತುತ್ತ ತುದಿ, ಯಲ್ಲಾಪುರ, ಅಂಕೋಲ, ಶಿರಸಿ ತಾಲುಕುಗಳ ಸಂಗಮ. ಇಲ್ಲಿ ಮಾಗೋಡು ಜಲಪಾತ ಇಳಿದ ಕೂಡಲೇ ಬೇಡ್ತಿ ಎಂಬುವವಳು ಗಂಗಾವಳಿ ನದಿಯಾಗಿ ಶಾಲ್ಮಲಾ, ಬಿಳೆಹಳ್ಳ, ಮಲ್ಲಿಗೆ ಹಳ್ಳ, ಡಬ್ಗುಳಿ ಹಳ್ಳ,ಕೊಡ್ಲಗದ್ದೆ ಹಳ್ಳ,ಹಸೆ ಹಳ್ಳ, ಯಾಣದ ಹಳ್ಳ, ಗಳಲ್ಲದೆ ಇನ್ನು ಅನೇಕ , ಬೇಸಗೆಯಲ್ಲಿ ನೀರಿರದ ಹಳ್ಳ,ಕೊಡ್ಲುಗಳನ್ನು ಸೇರಿಸಿಕೊಂಡು ಅಗಸೂರ ಬಳಿ ಕರ್ನಾಟಕ ಸರಕಾರದ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕಟ್ಟಿದ ಅಡ್ಡ ಬಾಂದಾರದಿಂದ ಆನೆ ಗಾತ್ರದ ಪಂಪು - ಪೈಪು ಗಳ ಮೂಲಕ ಅಂಕೋಲ ಹಾಗೂ ಕಾರವಾರ ತಾಲೂಕಿನ ಪಂಚಾಯತಗಳ ಕುಡಿಯುವ ನೀರಿನ ದಾಹವನ್ನು ತಣಿಸುತ್ತಾಳೆ. ಹೀಗೆ ಎರಡು ತಾಲೂಕಿನ ಕುಡಿಯುವ ನೀರಿನ ದಾಹವನ್ನು ಇನ್ನೂ ಹೆಚ್ಚು ತಣಿಸುವುದಕ್ಕಾಗಿಯೆ ಸರಕಾರವು ಅಗಸೂರಿನ ಬಾಂದಾರವನ್ನು ಎತ್ತರಿಸಿ ಕಿಂಡಿ ಆಣೇಕಟ್ಟು ಕಟ್ಟುವ ಬಗ್ಗೆ ಈಗಾಗಲೇ ಕೆಲಸ ಶುರುಮಾಡಿದ್ದು ಮುಂದಿನ ಒಂದು ವರುಷದಲ್ಲಿ ಕಾಮಗಾರಿ ಮುಗಿಯಬಹುದಾಗಿದೆ. ಈ ಕಿಂಡಿ ಆಣೇಕಟ್ಟು ವಿರೋಧಿಸಿ ಅಂಕೋಲ ತಾಲೂಕಿನ ಡೋಂಗ್ರಿ, ಸುಂಕಸಾಳ, ಹಿಲ್ಲೂರು ಭಾಗದ ಜನ ಮುಷ್ಕರಗಳನ್ನು ನಡೆಸಿದರೂ ಸಹಾ ಕುಡಿಯುವನೀರು ಎಂಬ ಕಾರಣಕ್ಕೆ ಹಾಗೂ ಸೀಬರ್ಡ್ ನೌಕಾನೆಲೆಗೆ ಕುಡಿಯುವ ನೀರೊದಗಿಸುವ ಯೋಜನೆ ಎಂಬ ಕಾರಣಕ್ಕೆ ಸರಕಾರ ಇದನ್ನು ಕೈಬಿಡದೇ ಕಾಮಗಾರಿ ಪ್ರಾರಂಭವಾಗಿದೆ. ಹೀಗೆ ಸಾಗುವ ಗಂಗಾವಳಿಗೆ ಅಗಸೂರಿನ ನಂತರ ಬೇಸಗೆಯಲ್ಲಿ ಹರಿವು ಇರುವುದಿಲ್ಲ, ಮೇಲಿನಿಂದ ಬಂದ ನೀರನ್ನು ಬಾಂದಾರದಿಂದ ಕುಡಿಯುವ ನೀರಿಗೆ ಬಳಸುವ ಕಾರಣ ಕೆಲವೇ ಕಿಲೊಮೀಟರ್ ದೂರದ ಸಮುದ್ರದಿಂದ ನೀರು ಹಿಮ್ಮುಖವಾಗಿ ಪ್ರವಹಿಸುತ್ತದೆ. ಅದಕ್ಕೇ ಅಂಕೋಲಾದ ಗಂಗಾವಳಿ ಸೇತುವೆ ಬಳಿ ಯಥೇಚ್ಛ ನೀರು ನದಿಯಲ್ಲಿ ಕಂಡರೂ ಕುಡಿಯಲು ಬಳಸಲು ಅಸಾಧ್ಯವಾಗುತ್ತದೆ. ಆದರೆ ಮಳೆಗಾಲದಲ್ಲಿ ಹುಬ್ಬಳ್ಳಿ ಶಹರದ ಕಸವನ್ನೆಲ್ಲ ಹೊತ್ತು ಅಂಕೋಲಾ ಸಮುದ್ರಕ್ಕೆ, ಸೇರಿಸುವಷ್ಟು, ಗಂಗಾವಳಿ ತಟದ ಹಲವು ಊರುಗಳನ್ನು ಮುಳುಗಿಸುವಷ್ಟು ನೆರೆ ಪ್ರವಾಹ ಹೊತ್ತು ತರುವ ಈ ಬೇಡ್ತಿ- ಗಂಗಾವಳಿ ನದಿಗೆ ಕಟ್ಟು ಹಾಕಿನೀರು ತಿರುಗಿಸುತ್ತೇವೆಂಬುದು ಸಾಧ್ಯವಾ?? ಗುಳ್ಳಾಪುರದ ಬೃಹತ್ ಸೇತುವೆಯನ್ನೇ ಕೊಚ್ಚಿಮುಳುಗಿಸಿದ ಗಂಗಾವಳಿ ಪ್ರವಾಹ ನದಿ ನೀರ ತಿರುಗಿಸಲು ಹೊರಟ ಕಟ್ಟುಗಳನ್ನು ತಡೆದೀತೇ?
ಇಷ್ಟಾದ ಮೇಲೂ ..
ಬೇಸಗೆಯಲ್ಲಿ ಬೇಡ್ತಿನದಿಗೆ ಹರಿವೇ ಇರುವುದಿಲ್ಲ ಎಂಬುದು ಬೇಸಗೆಯಲ್ಲಿ ಬರಡಾಗುವ ಮಾಗೋಡು ಜಲಪಾತ ನೋಡುವ ಎಲ್ಲರಿಗೂ ತಿಳಿದ ವಿಷಯ. ಗಂಗಾವಳಿಗೆ ನಿಜವಾಗಿಯೂ ನೀರುಣಿಸುವವಳು ಸೋಂದಾಹೊಳೆ ಯಾನೆ ಶಾಲ್ಮಲಾ ನದಿ, ಚಿತ್ತಪ್ಪೆಯಲ್ಲಿ ಗಂಗಾವಳಿ ನದಿಯನ್ನು ಸೇರುವುದರಿಂದಲೇ ಗಂಗಾವಳಿ ತಟದಲ್ಲಿ ಇನ್ನೂ ಹಸಿರು ಹಾಗೂ ಉಸಿರು ಇದೆ. ಶಾಲ್ಮಲಾವನ್ನು ತಿರುಗಿಸಿ ಬೇರೆ ಜಿಲ್ಲೆಗೆ ವರ್ಗಾಯಿಸಿದರೆ ಸರಕಾರವೇ ಅನುಷ್ಠಾನ ಮಾಡಿದ ಸೀಬರ್ಡ ಗೆ ಹಾಗೂ ಅಂಕೊಲ ,ಕಾರವಾರಕ್ಕೆ ನೀರು ಕೊಡುವ ಅಗಸೂರ ಕಿಂಡಿ ಆಣೆಕಟ್ಟಿಗೆ ನೀರು ಕೊಡೋರು ಯಾರು, ಗುಳ್ಳಾಪುರದ ಬಹು ಅಶ್ವ ಶಕ್ತಿಯ , ಶಾಸಕ ಹೆಬ್ಬಾರ ರ ತವರಿಗೆ ನೀರುಣಿಸುವ ನೀರಾವರಿ ಯೋಜನೆಗೆ ನೀರು ತುಂಬುವವರಾರು. ಮಳೆಗಾಲ ಬಂದಾಗ ವರದೆಯು ಸಹಾ ಉಕ್ಕಿ ಹರಿದು ಅನಾಹುತವಾದ ಸುದ್ದಿಯನ್ನು ನಾವು ಓದುತ್ತೇವೆ, ಅಂಥದ್ದರಲ್ಲಿ ಮಳೆಗಾಲದಲ್ಲಿ ಹರಿದು ಸಮುದ್ರ ಸೇರುವ ನೀರನ್ನು ಬಳಸಿಕೊಳ್ಳುತ್ತೇವೆ ಎಂಬ ಅಧಿಕಾರಿಗಳ ಮಾತಿಗೆ ಅರ್ಥವುಂಟ? ಬೇಸಗೆಯಲ್ಲಿ ಗಂಗಾವಳಿಯ ಹರಿವನ್ನೆ ಸಂಪುರ್ಣವಾಗಿ ನಿಲ್ಲಿಸಿ ಇಲ್ಲಿನ ಪೃಕೃತಿಯನ್ನು ಒಣಗಿಸಿದರೆ ಅರ್ಥವುಂಟ?. ಅಥವಾ ಈಗಾಗಲೆ ಯಲ್ಲಾಪುರಕ್ಕೆ ಬೇಡ್ತಿನದಿ ನೀರನ್ನು ಒಯ್ಯುವ ಯೋಜನೆ ಜಾರಿಗೊಂಡು, ಸಂಪೂರ್ಣ ವಿಫಲವಾದ ಉದಾಹರಣೆ ನಮ್ಮೆದುರೇ ಇರುವಾಗ ಮತ್ತೊಂದು ಕಟ್ಟು ಕಟ್ಟಿ ಬೇರೆ ಜಿಲ್ಲೆಗೆ ನೀರು ಒಯ್ಯುತ್ತೇವೆನ್ನುವುದರಲ್ಲಿ ಅರ್ಥವುಂಟ? ಹತ್ತು ಕಿಲೋಮೀಟರ್ ದೂರದ ಯಲ್ಲಾಪುರಕ್ಕೇ ಬಾರದ ಬೇಡ್ತಿ ನದಿನೀರು ಹಾವೇರಿಗೆ ಅದೇನು ಹಾರಿ ಹೋದೀತ? ನದಿ ತಿರುವು ಎಂದರೆ ಅದೇನು ಗದ್ದೆ ಹಾಳಿಕಂಠ ಕಡಿದು ಬೇರೆ ಗದ್ದೆಗೆ ನೀರು ಬಿಟ್ಟ ಹಾಗಾ?..
..ಗಮನಿಸತಕ್ಕ ಮುಖ್ಯ ಮಾತೆಂದರೆ..
1.ಬೇಡ್ತಿಗೆ ಮಳೆಗಾಲ ಹೊರತುಪಡಿಸಿ ಬೇರೆ ಕಾಲದಲ್ಲಿ ಸ್ವಂತ ಹರಿವಿಲ್ಲ, ಶಾಲ್ಮಲಾದ ಬಲದಿಂದಲೇ ಗಂಗಾವಳಿ ನದಿ ನೀರು ಸಾಕಷ್ಟು ಕೃಷಿಗೆ ಬಳಸಿಯೂ ಅಂಕೊಲ,ಕಾರವಾರಕ್ಕೆ ಕುಡಿಯಲು ಸಹಾ ದೊರಕುತ್ತಿರುವುದು.
2. ಶಾಲ್ಮಲಾ ನದಿಯನ್ನು ತಿರುಗಿಸಿದರೆ ಎರಡು ತಾಲೂಕು ಅಷ್ಟೇ ಅಲ್ಲ ನೌಕಾನೆಲೆಯಂತಹ ರಾಷ್ಟ್ರೀಯ ಭದ್ರತಾ ತಾಣಗಳಿಗೂ ಕುಡಿಯಲು ನೀರಿಲ್ಲ.
3. ಅದಕ್ಕೋಸ್ಕರ ಗಂಗಾವಳಿ ತಟದ ಜನರು ಈ ಯೋಜನೆಯ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕಾದ್ದು ಅವಶ್ಯ.
4. ಬೇಡ್ತಿ- ಗಂಗಾವಳಿಯ ರಭಸಕ್ಕೆ ಮಳೆಗಾಲದಲ್ಲಿ ನದಿ ನೀರನ್ನು ಮೂರರಿಂದ ನಾಲ್ಕು ತಿಂಗಳು ಬಳಸುವುದು ಸಾಧ್ಯವಿಲ್ಲ.
5. ಪ್ರಸ್ತುತ ಯಲ್ಲಾಪುರ ನಗರಕ್ಕೇ ಬೆಸಗೆಯಲ್ಲಿ ನೀರಿನ ಕೊರತೆ ಬಹಳವಿದೆ, ಇಲ್ಲಿ ಬಾರದ ನೀರು ಅಲ್ಲಿಗೆ ಹೇಗೆ ಹೋದೀತು.
ಜನ ಜಾಗೃತಿಯಾಗಲಿ- ಎಲ್ಲರಿಗೂ ನೆಮ್ಮದಿಯಾಗಲಿ