ಸಾವಿರ ಹಳ್ಳಿ ಹಾಡುಗಳನ್ನು ಸರ ಸರನೆ ಹಾಡುವ ಕಮಲಾ ಹೆಗಡೆ

ಇವರು ಕಮಲಾ ಹೆಗಡೆ. ಇವರನ್ನು ಮಾತನಾಡಿಸಿ, ಹಾಡನ್ನು ಹೇಳಿ ಎಂದರೆ ಸಾಕು ಸಾವಿರಾರು ಹವ್ಯಕ ಸಂಪ್ರದಾಯದ ಹಾಡುಗಳನ್ನು ಸರಸರನೆ ಹಾಡುತ್ತಾರೆ. ಮದುವೆ ಇರಬಹುದು, ಮಂಗಲಕಾರ್ಯಗಳಿರಬಹುದು ಇವರ ಹಾಡಿಲ್ಲದೇ ಶಾಸ್ತ್ರಗಳು ಮುಂದೆ ಸಾಗುವುದೇ ಇಲ್ಲವೇನೋ ಎನ್ನುವಂತೆ ಆಗಿದೆ.
ಮದುವೆ ಇರಬಹುದು, ಮುಂಜಿ, ಮಂಗಲ ಪೂಜೆ ಇರಲಿ ಅಥವಾ ಇನ್ಯಾವುದೇ ಕಾರ್ಯಕ್ರಮ ಇರಲಿ, ಕಮಲಾ ಹೆಗಡೆಯವರ ಹಾಡು ಇರಲೇಬೇಕು. ಅಜಮಾಸು 79 ವರ್ಷಗಳಾಗುತ್ತ ಬಂದರೂ ಇವರ ಕಂಚಿನ ಕಂಠಕ್ಕೆ ವಯಸ್ಸಾಗಿಲ್ಲ. ಇವರು ಸುಶ್ರಾವ್ಯವಾಗಿ ಹಾಡಲು ನಿಂತರೆ ಸಾಕು ಮತ್ತೆ ಮತ್ತೆ ಕೇಳಬೇಕನ್ನಿಸುತ್ತದೆ. ಮನಸ್ಸು ತೂಗಲಾರಂಬಿಸುತ್ತದೆ.
ಬಾಲ್ಯ-ಬದುಕು
ಸಾವಿರ ಹಾಡುಗಳ ಸರದಾರ್ತಿ ಕಮಲಾ ಹೆಗಡೆ ಅವರ ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತದ ಶೇಡಿ ದಂಟಕಲ್. ಆದರೆ ಇವರು ಹುಟ್ಟಿದ ಊರು ಶಿರಸಿ ತಾಲೂಕಿನ ಬಾಳಗಾರ. 1947 ಆಗಸ್ಟ್ 18ರಂದು ಬಾಳಗಾರಿನ ಗೋಪಾಲಕೃಷ್ಣ ಹಾಗೂ ಜಾನಕಿ ದಂಪತಿಗಳ ಮಗಳಾಗಿ ಜನಿಸಿದಾಕೆ ಕಮಲಾ ಹೆಗಡೆ. ತಂದೆ-ತಾಯಿಯ ಒಂಭತ್ತು ಮಕ್ಕಳ ತುಂಬು ಕುಟುಂಬದಲ್ಲಿ ಆರನೆಯವರಾಗಿ ಜನಿಸಿದವರು.
ಬಾಲ್ಯದಲ್ಲಿ ಕಲಿಕೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿದ್ದ ಇವರಿಗೆ ಹಳ್ಳಿಯ ಹವ್ಯಕ ಹಾಡನ್ನು ಕಲಿಸಿದವರು ಅಜ್ಜಿ ಕಾವೇರಜ್ಜಿ. ಮನೆಯೆ ಮೊದಲ ಪಾಠಶಾಲೆ ಎನ್ನುವಂತೆ ಇವರಿಗೆ ಆಗಿದ್ದು ವಿಶೇಷ. ಬಾಳಗಾರಿನಲ್ಲಿ ಸುಂದರ-ಸುಮಧುರವಾಗಿ ಭಕ್ತಿಗೀತೆಗಳನ್ನು ಹಾಡುತ್ತಿದ್ದ ತಂದೆ ಗೋಪಾಲಕೃಷ್ಣ ಹೆಗಡೆ ಭಜನೆಗಳನ್ನು ಕಲಿಸಿದರು. ಇವರು ನಾಲ್ಕನೆ ತರಗತಿಯವರೆಗೆ ಬಾಳಗಾರಿನ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಧ್ಯಯನ ಮಾಡಿದರೆ ಐದನೇ ತರಗತಿಯನ್ನು ಓದಿದ್ದು ಹಿರಿಯ ಪ್ರಾಥಮಿಕ ಶಾಲೆ ಕೋಡ್ಸಿಂಗೆಯಲ್ಲಿ. ಅಂದಿನ ಕಾಲಕ್ಕೆ ಐದನೇ ತರಗತಿಯ ತನಕ ಓದಿದ ಇವರು ತಮ್ಮ ಶಾಲೆಗೆ ಹೋಗುವುದನ್ನು ನಿಲ್ಲಿಸಿದರೂ ಹಳ್ಳಿಯ ಹಾಡುಗಳ ಸಂಗ್ರಹ ಹಾಗೂ ಹಾಡುವಿಕೆಯನ್ನು ಮುಂದುವರಿಸಿದರು. ತಮ್ಮ 12 ನೇ ವಯಸ್ಸಿನಿಂದ ಕಮಲಾಕ್ಷಿ ಹೆಗಡೆ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತ ಬಂದಿದ್ದಾರೆ.
ವೈವಾಹಿಕ ಜೀವನ
ಕಮಲಾಕ್ಷಿ ಅವರ ವಿವಾಹವು ಶೇಡಿ ದಂಟಕಲ್ಲಿನ ಮಧುಕೇಶ್ವರ ತಿಮ್ಮಯ್ಯ ಹೆಗಡೆ ಅವರ ಜೊತೆಗೆ ನಡೆಯಿತು. ವಿವಾಹವಾಗುವಾಗ ಕಮಲಾ ಅವರ ವಯಸ್ಸು 19. ಬಾಳಗಾರಿನಲ್ಲಿ ಅದ್ದೂರಿಯಾಗಿ ವಿವಾಹ ನಡೆದಿತ್ತು. ಕಮಲಾ ಹೆಗಡೆ ಅವರು ಹೇಳುವ ಪ್ರಕಾರ ಅವರ ವಿವಾಹ ಕಾರ್ಯಕ್ರಮ 6 ದಿನಗಳ ಕಾಲ ನಡೆದಿತ್ತು. ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳು.
ಕಮಲಾ ಹೆಗಡೆ ಅವರು ಹಾಡಿದ ಹವ್ಯಕರ ಸಂಪ್ರದಾಯದ ಹಾಡುಗಳನ್ನು ನೋಡಬೇಕಾದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಬಹುದು
https://www.youtube.com/
ಹವ್ಯಾಸ-ನಾಟಿ ವೈದ್ಯ ವೃತ್ತಿ
ಕಮಲಾ ಹೆಗಡೆಯವರು ಕೇವಲ ಹಾಡು ಮಾತ್ರ ಹೇಳುವುದಿಲ್ಲ. ಅವರು ಬ್ಯಾಗು ಮಾಡುವ, ಆರತಿಕಟ್ಟು ಮಾಡು ಹವ್ಯಾಸವನ್ನು ಹೊಂದಿದ್ದಾರೆ. ಬೀಸಣಿಗೆ ತಯಾರು ಮಾಡುವ ಆಸಕ್ತಿಯೂ ಇದೆ. ಎಲ್ಲಿಯೇ ಹೊಸ ರೀತಿಯ ಗಿಡಗಳು ಕಾಣಿಸಿದರೂ ಅವನ್ನು ತಂದು ನೆಟ್ಟು, ಆರೈಕೆ ಮಾಡಿ ಉದ್ಯಾನ ಮಾಡುವ ಕಾರ್ಯವನ್ನೂ ಕೂಡ ಮಾಡುತ್ತಾರೆ.
ಇಷ್ಟೇ ಅಲ್ಲ, ಕಮಲಾ ಹೆಗಡೆ ಅವರು ಹಳ್ಳಿ ಔಷಧಿಯನ್ನೂ ಕೂಡ ನೀಡುತ್ತಾರೆ. ಇವರು ಕೊಡುವ ನಾಟಿ ಔಷಧಿ ಬಹಳ ಪರಿಣಾಮಕಾರಿ. ಯಾರಿಗಾದರೂ ಮಕ್ಕಳಾಗದೇ ಇದ್ದರೆ ಅವರಿಗೆ ಪರಿಣಾಮಕಾರಿ ಔಷಧವನ್ನು ಕಮಲಾ ಹೆಗಡೆಯವರು ನೀಡುತ್ತಾರೆ. ಕಮಲಾ ಹೆಗಡೆಯವರ ಪತಿ ಮಧುಕೇಶ್ವರ ಹೆಗಡೆ ಅವರು ಕೂಡ ಕೂಲ ಬಳ್ಳಿಯಿಂದ ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ.
ಹವ್ಯಕ ಹಾಡುಗಳ ವೀಕಿಪೀಡಿಯಾ
ಇವರ ಬಳಿ ಸಾವಿರಕ್ಕೂ ಅಧಿಕ ಹಳ್ಳಿ ಹಾಡುಗಳ ಸಂಗ್ರಹವಿದೆ. ಹೊಸದಾಗಿ ಯಾವುದೇ ಹಾಡು ಸಿಕ್ಕರೂ ಅದನ್ನು ಬಹಳ ಆಸ್ಥೆಯಿಂದ ಬರೆದು ಇಟ್ಟುಕೊಳ್ಳುತ್ತಾರೆ. ಯಾವುದೇ ಸಂದರ್ಭದಲ್ಲಿಯೂ ಹಾಡಿನ ಧಾಟಿ ಮರೆಯದೇ ಸುಶ್ರಾವ್ಯವಾಗಿ ಹಾಡುತ್ತಾರೆ. ಗಣಪತಿ ಹಾಡು, ಮಂಗಲ ಹಾಡು, ಸೋಬಾನೆ ಪದ ಸೇರಿ ಅದೆಷ್ಟೋ ಹಾಡನ್ನು ಥಟ್ಟನೆ ಹಾಡುತ್ತಾರೆ. ಒಂದು ರೀತಿಯಲ್ಲಿ ಇವರು ಹವ್ಯಕ ಹಾಡುಗಳ ವೀಕಿಪಿಡಿಯಾ ಇದ್ದಂತೆ.
ಸರ್ಕಾರಕ್ಕೆ ಕಾಣುತ್ತಿಲ್ಲ ಇಂತಹ ಪ್ರತಿಭಾವಂತರು
ಸರಿಸುಮಾರು 68 ವರ್ಷಗಳ ಕಾಲ ಹವ್ಯಕ ಹಾಡುಗಳನ್ನು ಹಾಡುತ್ತ ಬಂದಿದ್ದರೂ ಸರ್ಕಾರಗಳು ಹಾಗೂ ಜನಪ್ರತಿನಿಧಿಗಳಿಗೆ ಇವರು ಕಾಣಿಸಿಲ್ಲ. ಇವರಾಗಿಯೇ ಯಾವುದೇ ಸ್ಪರ್ಧೆಗಳಲ್ಲಿ ಪಾಲ್ಗೊಂಡಿಲ್ಲ. ಪ್ರತಿಫಲಾಪೇಕ್ಷೆಯಿಲ್ಲದೇ ಹಾಡುತ್ತ ಬಂದಿರುವ ಇವರನ್ನು ಸರ್ಕಾರ ಗಮನಿಸಿಯೇ ಇಲ್ಲ. ಬೇರೆ ಯಾವುದೇ ಸಮುದಾಯದ ಜನರಾಗಿದ್ದರೂ ಇಷ್ಟೊತ್ತಿಗೆ ಇವರನ್ನು ಪ್ರಶಸ್ತಿಗಳ ಮೂಲಕ ಗೌರವಿಸುವ ಕಾಅರ್ಯವನ್ನು ಜನಪ್ರತಿನಿಧಿಗಳು, ಸರ್ಕಾರಗಳು ಮಾಡುತ್ತಿದ್ದರು. ಆದರೆ ಇವರ ಕುರಿತು ಗೊತ್ತಿದ್ದರೂ ಗೊತ್ತಲ್ಲದಂತೆಯೇ ವರ್ತಿಸುತ್ತಿದೆಯೇ ಎಂಬಂತಾಗಿದೆ. ಮುಂದಿನ ದಿನಗಳಲ್ಲಾದರೂ ಕಮಲಾ ಹೆಗಡೆಯವರಂತಹ ಹಿರಿಯ ಸಂಪ್ರದಾಯದ ಹಾಡುಗಾರ್ತಿಯರಿಗೆ ಸಲ್ಲಬೇಕಾದ ಗೌರವ ಸಲ್ಲಲಿ. ಅವರ ಹಾಡಿಗೆ ಬೆಲೆ ಸಿಗುವಂತಾಗಲಿ ಎನ್ನುವುದು ಆಪ್ತ ನ್ಯೂಸ್ ಆಶಯ
ಕಮಲಾ ಹೆಗಡೆ ಅವರ ಹಾಡುಗಳನ್ನು ಇಲ್ಲಿ ನೋಡಬಹುದು
[embed]https://www.youtube.
What's Your Reaction?






