ಮನೆ ಹಬ್ಬದಂತೆ ಕನ್ನಡ ಹಬ್ಬವನ್ನು ಆಚರಿಸಬೇಕು: ಆರ್.ಜಿ.ಶೇಟ್‌

Nov 2, 2025 - 19:54
Nov 2, 2025 - 19:56
 0  17
ಮನೆ ಹಬ್ಬದಂತೆ ಕನ್ನಡ ಹಬ್ಬವನ್ನು ಆಚರಿಸಬೇಕು: ಆರ್.ಜಿ.ಶೇಟ್‌

ಆಪ್ತ ನ್ಯೂಸ್ ಕಾನಸೂರು:

ಕನ್ನಡ ಹಬ್ಬವನ್ನು ಪ್ರತಿಯೊಬ್ಬರು ಮನೆಯ ಹಬ್ಬದಂತೆ ಅದ್ಧೂರಿಯಾಗಿ ಆಚರಿಸಬೇಕು. ನಮ್ಮ ನಾಡು, ನೆಲ, ಜಲ ರಕ್ಷಣೆಯ ಜವಾಬ್ದಾರಿ ಯುವಕರ ಮೇಲಿದೆ ಎಂದು ಉದ್ಯಮಿ ಆರ್.ಜಿ.ಶೇಟ್‌ ಹೇಳಿದರು.
ಅವರು ಶನಿವಾರ ಸಿದ್ದಾಪುರ ತಾಲೂಕಿನ ಕಾನಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಾನಸೂರಿನ ಗೆಳೆಯರ ಬಳಗದಿಂದ ಹಮ್ಮಿಕೊಂಡ 5 ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, ಪ್ರತಿಯೊಬ್ಬರು ಇತರ ಭಾಷೆಯನ್ನು ಗೌರವಿಸುವುದರ ಜತೆ ಕನ್ನಡ ಭಾಷೆಯನ್ನು ಬೆಳೆಸಬೇಕು. ಕನ್ನಡ ನಾಡಿನಲ್ಲಿ ಜನ್ಮಿಸಿದ ನಾವು ಪುಣ್ಯವಂತರು ಎಂದರು.
ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್‌ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಮಾತನಾಡಿ, ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಕಳೆದ 5 ವರ್ಷಗಳಿಂದ ಕಾನಸೂರಿನಲ್ಲಿ ರಾಜು ಕಾನಸೂರು ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಜತೆ ಪ್ರತಿ ವರ್ಷವೂ ಸಮಾಜದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಇತರರಿಗೆ ಮಾದರಿ ಎಂದರು.
ಪ್ರಾಮಾಣಿಕ ಸೇವಕ ಪ್ರಶಸ್ತಿ ಸ್ವೀಕರಿಸಿದ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ ಮಾತನಾಡಿ, ನಾವು ನ್ಯಾಯವಾಗಿ ಇದ್ದರೆ ಕಾನೂನು ನಮ್ಮನ್ನು ಬೆಂಬಲಿಸುತ್ತದೆ. ತಪ್ಪು ಮಾಡಿದವರು ಯಾವುದೇ ಕಾರಣಕ್ಕೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದ ಒಳಗಡೆ ಇರುವ ನಮ್ಮಂತವರನ್ನು ಕನ್ನಡ ರಾಜ್ಯೋತ್ಸವದ ದಿನದಂದು ಗುರುತಿಸಿ, ಗೌರವಿಸಿದ ಕಾನಸೂರಿನ ಗೆಳೆಯವರ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿ ಇದು ರಾಜ್ಯ ಮಟ್ಟದ ಉತ್ಸವವಾಗಲಿ ಎಂದು ಹಾರೈಸಿದ ಅವರು, ಹೊರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಉತ್ತರಕನ್ನಡ ಜಿಲ್ಲೆಯ ಹೆಸರನ್ನು ಬೆಳಗಿಸಬೇಕು ಎಂದು ಕರೆ ನೀಡಿದರು.
ಬಹುಮುಖಿ ಸೇವಕ ಪ್ರಶಸ್ತಿ ವಿನಾಯಕ ಶೆಟ್ಟಿ ಮಾತನಾಡಿ, ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ನಾವು ಹುಟ್ಟಿದಾಗ ಜೀವ ಇರುತ್ತದೆ ಹೆಸರು ಇರುವುದಿಲ್ಲ. ನಾವು ಮಾಡಿದ ಕಾರ್ಯವನ್ನು ಸಮಾಜ ಗುರುತಿಸುತ್ತದೆ. ಒಳ್ಳೆಯ ಕೆಲಸ ಮಾಡಿದಾಗ ಸಮಾಜದಲ್ಲಿ ನಮ್ಮ ಹೆಸರು ಶಾಶ್ವತವಾಗಿ ಇರಲು ಸಾಧ್ಯ. ಶಿರಸಿಯಲ್ಲಿ ವಸಂತ ಶೆಟ್ಟಿ ಅವರ ಹೆಸರನ್ನು ಗುರುತಿಸದ ಜನರೇ ವಿರಳ. ತಂದೆ ವಸಂತ ಶೆಟ್ಟಿ ಅವರು ಕೆಡಿಸಿಸಿ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಲೇ ಸಮಾಜದ ಬಡ ಜನರ ಜೀವನಮಟ್ಟ ಸುಧಾರಿಸುವಲ್ಲಿ ತಮ್ಮ ಕಾರ್ಯವೃತ್ತಿಯಲ್ಲಿ ಎಷ್ಟು ಸಾಧ್ಯವೊ ಅದಕ್ಕಿಂತ ಹೆಚ್ಚು ಕಾರ್ಯಗಳನ್ನು, ಮಾಡಿ ಜನಾನುರಾಗಿಯಾಗಿ ಗುರುತಿಸಿಕೊಂಡವರು. ಅವರ ಕೆಲಸಗಳನ್ನು ಗಮನಿಸುತ್ತ ಬೆಳೆದ ನಾನು. ನಮ್ಮ ತಂದೆ ವಸಂತ ಶೆಟ್ಟಿ ಅವರು ಸ್ಥಾಪಿಸಿದ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ಮುಖ್ಯ ಕಾರ್ಯನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದು, ಅದರೊಂದಿಗೆ ನಾನು ನಿರ್ವಹಿಸಿದ ಅಲ್ಪ ಪ್ರಮಾಣದ ಸಮಾಜ ಸೇವೆ ಗುರುತಿಸಿ ಸನ್ಮಾನಿಸಿ, ಪ್ರಶಸ್ತಿ ನೀಡುತ್ತಿರುವ ಕಾನಸೂರು ಗೆಳೆಯರ ಬಳಗದ ಸಂಘಟಕ ರಾಜು ಕಾನಸೂರಗೆ ಧನ್ಯವಾದ ಸಮರ್ಪಿಸುತ್ತೇನೆ ಎಂದರು.
ಸಹಕಾರ ಶ್ರೀ ಪ್ರಶಸ್ತಿ ಸ್ವೀಕರಿಸಿ ಧಾರವಾಡ ಹಾಲು ಒಕ್ಕೂಟದ ಪ್ರಭಾರಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಗೋ ಮಾತೆಯನ್ನು ನಂಬಿದವರು ನಾವು. ಪುಟ್ಟ ಹಳ್ಳಿಯಿಂದ ಬಂದ ನನ್ನನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ, ಹಾಲಿ ಪ್ರಭಾರಿ ಅಧ್ಯಕ್ಷ ಸ್ಥಾನ ಅಲಂಕರಿಸಲು ಕ್ಷೀರ ಬಂಧುಗಳು ಕಾರಣ ಎಂದ ಅವರು, ಕನ್ನಡ ರಾಜ್ಯೋತ್ಸವದ ದಿನದಂದು ದನ ಕಾಯುವ ನನ್ನನ್ನು ವೇದಿಕೆ ಮೇಲೆ ಕರೆದು ಸನ್ಮಾನಿಸಿ, ಗೌರವಿಸಿರುವುದಕ್ಕೆ ಚಿರಋಣಿ ಎಂದರು
ಕಾನಸೂರು ಗ್ರಾಪಂ ಅಧ್ಯಕ್ಷೆ ಅನಿತಾ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷೆ ಸವಿತಾ ಕಾನಡೆ, ಸದಸ್ಯರಾದ ಶಶಿಕಾಂತ ನಾಮಧಾರಿ, ಮನೋಜ ಶಾನಭಾಗ, ಶಶಿಪ್ರಭಾ ಹೆಗಡೆ ಎಸ್‌ಡಿಎಂಸಿ ಅಧ್ಯಕ್ಷೆ ಭಾರತಿ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸಂಘಟಕ ರಾಜು ಕಾನಸೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಗುರುರಾಜ ನಾಯ್ಕ ನಿರೂಪಿಸಿದರು. ದಯಾನಂದ ಪ್ರಾರ್ಥಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಶಿರಸಿ ಆರ್ಕೆಸ್ಟ್ರಾದ ದಿವ್ಯಾ ಹೆಗಡೆ ತಂಡವದವರಿಂದ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರ ಗಮನಸೆಳೆಯಿತು. ಕಾನಸೂರು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಿತು.

*****

ಶಿರಸಿಯ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ವಸಂತ ಶೆಟ್ಟಿ ಅವರಿಗೆ ಬಹುಮುಖಿ ಸೇವಕ, ಸಹಾಯಕ ಸರ್ಕಾರಿ ಅಭಿಯೋಜಕ ರಾಜೇಶ ಎಂ.ಮಳಗೀಕರ ಅವರಿಗೆ ಪ್ರಾಮಾಣಿಕ ಸೇವಕ ಹಾಗೂ ಧಾರವಾಡ ಹಾಲು ಒಕ್ಕೂಟದ ಪ್ರಭಾರಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಅವರಿಗೆ ಸಹಕಾರ ಶ್ರೀ ಪ್ರಶಸ್ತಿ ಸನ್ಮಾನಿಸಿ ಗೌರವಿಸಲಾಯಿತು.

*****
ಆರೋಪಿತರಿಗೆ ಶಿಕ್ಷೆಗೆ ಒಳಪಡಿಸಿ ಬಡವರಿಗೆ ನ್ಯಾಯ ಒದಗಿಸಿದ್ದೇನೆ ಎಂಬ ಆತ್ಮತೃಪ್ತಿ ನನ್ನಲ್ಲಿದೆ. ಸಾಕ್ಷಿದಾರರು ಇನ್ನಿತರ ಆಸೆಗೆ ಒಳಪಡೆದೇ ನ್ಯಾಯಾಲಯದಲ್ಲಿ ಧೈರ್ಯವಾಗಿ ಸಾಕ್ಷಿ ನುಡಿಯಬೇಕು.
ರಾಜೇಶ ಮಳಗೀಕರ, 
ಸಹಾಯಕ ಸರ್ಕಾರಿ ಅಭಿಯೋಜಕ

 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0