ಉಪನ್ಯಾಸಕನಿಂದ ಲೈಂಗಿಕ ಕಿರುಕುಳ ಪ್ರಕರಣ: ವಿದ್ಯಾರ್ಥಿಗಳು–ಪೋಷಕರಿಂದ ಕಾಲೇಜಿಗೆ ಮುತ್ತಿಗೆ, ಕ್ರಮಕ್ಕೆ ಆಗ್ರಹ
ಆಪ್ತ ನ್ಯೂಸ್ ಅಂಕೋಲಾ:
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಪೂಜಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆ ತೀವ್ರ ಪ್ರತಿಭಟನೆ ನಡೆದಿದೆ.
ಆರೋಪದ ಪ್ರಕಾರ, ಕಾಲೇಜಿನ ಉಪನ್ಯಾಸಕ ರಾಮಚಂದ್ರ ಅಂಕೋಲೆಕರ್ ವಿದ್ಯಾರ್ಥಿನಿಯೋರ್ವಳಿಗೆ ಪಾಠದ ವೇಳೆ ಹಾಗೂ ಮೊಬೈಲ್ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾನೆ ಎಂದು ತಿಳಿದು ಬಂದಿದೆ. ಈ ಕುರಿತು ಪೀಡಿತ ವಿದ್ಯಾರ್ಥಿನಿ ಅಂಕೋಲ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾಳೆ.
ಆದರೆ, ದೂರು ದಾಖಲಾದರೂ ಕ್ರಮ ಕೈಗೊಳ್ಳದಿರುವುದು, ಪೋಷಕರು ಹಾಗೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಭಟನೆಗೆ ಇಳಿದ ವಿದ್ಯಾರ್ಥಿಗಳು ಕಾಲೇಜಿನ ಬಾಗಿಲು ಮುಚ್ಚಿ ಘೋಷಣೆ ಕೂಗಿದರು.
ಪ್ರತಿಭಟನಾಕಾರರು, ಉಪನ್ಯಾಸಕನನ್ನು ತಕ್ಷಣ ಅಮಾನತು ಮಾಡಬೇಕು. ಮತ್ತು ತನಿಖೆ ನಡೆಯುವವರೆಗೆ ಕಾಲೇಜು ಪ್ರಾಂಶುಪಾಲೆ ಅವರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ಈ ಘಟನೆ ಕಾಲೇಜು ವಲಯದಲ್ಲಿ ಸಂಚಲನ ಮೂಡಿಸಿದ್ದು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಬೇಡಿಕೆ ಆಲಿಸಿದ್ದಾರೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದಾರೆ.
ಸಮಾಜ ಮಾಧ್ಯಮಗಳಲ್ಲಿ ಈ ವಿಷಯದ ಕುರಿತು ಚರ್ಚೆ ಜೋರಾಗಿದ್ದು, ವಿದ್ಯಾರ್ಥಿ ಸಂಘಟನೆಗಳೂ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ತನಿಖೆ ಮತ್ತು ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿವೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



