ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಜನಪ್ರತಿನಿಧಿಗಳು ಮುಂದಾಗಬೇಕು: ಪಾಂಡುರಂಗ ಹೆಗಡೆ
ಆಪ್ತ ನ್ಯೂಸ್ ಶಿರಸಿ:
ಜನಜೀವನ ಹಾಗೂ ಪರಿಸರ ನಾಶ ಮಾಡುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ತಡೆಯಲು ನಮ್ಮ ಭಾಗದ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ ಹೇಳಿದ್ದಾರೆ.
ಅವರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಣದೂರು ಗ್ರಾಮದ ಯಫಡಿಮಠದಲ್ಲಿ ನಡೆದ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಯೋಜನೆ ಜಾರಿಯಾಗಬೇಕಿದ್ದರೆ ಹಲವು ಹಂತದ ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ಈ ಯೋಜನೆಗೆ ಪರಿಸರ ಇಲಾಖೆ ಒಪ್ಪಿಗೆ ಬೇಕಾಗುತ್ತದೆ, ವನ್ಯಜೀವಿ ಮಂಡಳಿ, ಜಲಶಕ್ತಿ ಆಯೋಗ, ಮೂಲನಿವಾಸಿಗಳಿಗೆ ಸಂಬಂಧಿಸಿದ ಇಲಾಖೆ ಸೇರಿದಂತೆ ಕೇಂದ್ರ ಸರ್ಕಾರದ ಕೆಲವು ಇಲಾಖೆಗಳ ಒಪ್ಪಿಗೆ ಬೇಕಾಗುತ್ತದೆ. ಈ ಇಲಾಖೆಗಳು ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿರುವುದರಿಂದ ನಮ್ಮ ಭಾಗದ ಸಂಸದರು ಈ ಯೋಜನೆ ತಡೆಯಲು ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಯೋಜನೆಗೆ ಸದ್ಯಕ್ಕೆ ಮೂರು ಸಾವಿರ ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಿದೆ. ಇದು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವುದರಿಂದ ಈ ಕ್ಷೇತ್ರದ ಶಾಸಕರು ಹಣಕಾಸು ನೆರವನ್ನು ತಡೆಯುವ ಮೂಲಕ ಯೋಜನೆಗೆ ಮುಂದಾಗುವುದನ್ನು ತಡೆಯಬಹುದು ಎಂದು ಅವರು ಹೇಳಿದರು.
ನದಿಯ ನರ ತುಂಡರಿಸಿದಂತೆ...
ನೈಸರ್ಗಿಕವಾಗಿ ಹರಿಯುವ ಬೇಡ್ತಿ ಯೋಜನೆಯನ್ನು ಕಾಪಾಡಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಉತ್ತರ ಕನ್ನಡ ಜಿಲ್ಲೆಯ ನದಿಗಳಿಗೆ ಸಂಬಂಧಿಸಿ ಒಂದರ ಮೇಲೊಂದರಂತೆ ಯೋಜನೆಯನ್ನು ತರಲಾಗುತ್ತಿದೆ. ನದಿಗಳನ್ನು ದುರ್ಬಳಕೆ ಮಾಡುವ ಮೂಲಕ ಪರಿಸರ, ಜೀವವೈವಿಧ್ಯ ಹಾಗೂ ಜನಜೀವನದ ಮೇಲೆ ಹಾನಿ ಮಾಡಲಾಗುತ್ತಿದೆ. ಸಹಜವಾಗಿ ಹರಿಯುತ್ತಿರುವ ನದಿಯನ್ನು ಬೇರಡೆ ತಿರುಗಿಸುವುದು ಎಂದರೆ ಆ ನದಿಯ ನರವನ್ನೇ ತುಂಡರಿಸಿದಂತೆ. ಅಲ್ಲದೆ, ಈ ಯೋಜನೆಯಿಂದ ಸುಮಾರು ೬೦೦ ಎಕರೆಯಷ್ಟು ಅರಣ್ಯ ನಾಶವಾಗಲಿದೆ. ಎರಡ್ಮೂರು ಕಡೆ ಅಣೆಕಟ್ಟು ನಿರ್ಮಿಸಿ ಅದರಲ್ಲಿ ನೀರು ಸಂಗ್ರಹಿಸಿ ನೀರನ್ನು ಒಯ್ಯಲಾಗುತ್ತದೆ. ನೀರನ್ನು ಒಯ್ಯಲು ಬೆಟ್ಟ-ಗುಡ್ಡಗಳಲ್ಲಿ ಸುಮಾರು ೧೩ ಕಿಲೋ ಮೀಟರ್‌ನಷ್ಟು ಸುರಂಗ ಕೊರೆಯಲಾಗುತ್ತದೆ. ಇದರಿಂದ ಇನ್ನು ಎಷ್ಟು ಹಾನಿಯಾಗುತ್ತದೆಯೋ ಗೊತ್ತಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ ನೈಸರ್ಗಿಕ ಕಾಡುಗಳ ಪ್ರಮಾಣ ಶೇ.೮೨ರಷ್ಟು ಇದ್ದಿದ್ದು ಈಗ ಶೇ.೧೦ರಷ್ಟಕ್ಕೆ ಕುಸಿದಿದೆ. ಈಗ ನಾವು ನೋಡುತ್ತಿರುವುದೆಲ್ಲವೂ ಪ್ಲಾಂಟೇಶನ್‌ಕಾಡುಗಳು ಅಥವಾ ನಡೆತೋಪುಗಳಾಗಿವೆ. ಗುಡ್ಡ ಹಾಗೂ ಅರಣ್ಯ ಪ್ರದೇಶವಾದ ಉತ್ತರ ಕನ್ನಡದಂತಹ ಪ್ರದೇಶದಲ್ಲಿ ಶೇ.೬೫ರಷ್ಟು ನೈಸರ್ಕಿಕ ಕಾಡುಗಳಾದರೂ ಇರಬೇಕು. ಹಾಗಾದರೆ ಈಗ ನಾವೆಲ್ಲಿದ್ದೇವೆ ಎಂಬುದು ಇದರಿಂದ ಗೊತ್ತಾಗುತ್ತದೆ. ಈಗ ಅದನ್ನೂ ಕಳೆದುಕೊಳ್ಳುವತ್ತ ಸಾಗುತ್ತಿದ್ದೇವೆ. ಹೀಗಾಗಿ ಈಗಲಾದರೂ ಎಚ್ಚೆತ್ತು ಇಂತಹ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದರು.
ಯಾವುದೇ ಯೋಜನಾ ವರದಿ ತಯಾರಿಸಬೇಕಾದರೆ ಸ್ಥಳ ಪರಿಶೀಲನೆ ನಡೆಸಿಯೇ ತಯಾರಿಸಬೇಕು. ಈ ಯೋಜನೆ ವರದಿ ತಯಾರಿಸುವಾಗ ಸ್ಥಳ ಪರಿಶೀಲನೆ ಮಾಡದೆ ಕಚೇರಿಯಲ್ಲೇ ಕುಳಿತು ಯೋಜನೆ ಬಗ್ಗೆ ವರದಿ ತಯಾರಿಸಲಾಗಿದೆ. ಸ್ಥಳೀಯವಾಗಿ ಈ ಯೋಜನೆಗೆ ವಿರೋಧವಿದೆ ಎಂದು ಕಚೇರಿಯಲ್ಲೇ ಕುಳಿತು ವರದಿ ತಯಾರಿಸಲಾಗಿದೆ ಎಂದು ಅವರು ಹೇಳಿದರು.
ನೇತ್ರಾವತಿ ನದಿಯಿಂದ ದೂರ ಕೋಲಾರಕ್ಕೆ ನೀರನ್ನು ಒಯ್ಯುವ ಎತ್ತಿನ ಹೊಳೆ ನದಿ ತಿರುವು ಯೋಜನೆ ಹೇಗೆ ವಿಫಲವಾಗಿದೆ ಎಂಬುದು ಕಣ್ಣಮುಂದೆಯೇ ಇದೆ. ಇದು ಆರಂಭದಲ್ಲಿ ಸುಮಾರು ೩೦೦೦ ಕೋಟಿ ರೂ.ಯೋಜನೆಯಾಗಿತ್ತು. ಈಗ ೨೫೦೦೦ ಕೋಟಿ ರೂ.ಯೋಜನೆಯಾಗಿ ಬದಲಾಗಿದೆ. ಆದರೆ ಒಂದು ಹನಿ ನೀರು ಸಹ ಕೋಲಾರ ತಲುಪಿಲ್ಲ ಎಂದರು.
ಪರಿಸರ ಸಂಶೋಧಕ ಬಾಲಚಂದ್ರ ಹೆಗಡೆ ಸಾಯಿಮನೆ ಮಾತನಾಡಿ, ಹವಾಮಾನ ಬದಲಾವಣೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈಗಾಗಲೇ ಸುಮಾರು ೧.೫ ಡಿಗ್ರಿ ಉಷ್ಣಾಂಶ ಹೆಚ್ಚಳವಾಗಿದೆ. ಇಂತಹ ಯೋಜನೆಗಳಿಂದ ಪಶ್ಚಮ ಘಟ್ಟದಲ್ಲಿ ಹರಿಯಬೇಕಾದ ನೀರಿನ ಹರವು ಕಡಿಮೆಯಾಗಿ ಇದು ಇನ್ನಷ್ಟು ಹೆಚ್ಚಾಗಿ ಪಶ್ಚಿಮ ಘಟ್ಟಕ್ಕೇ ಅಪಾಯ ಸಂಭವಿಸಬಹುದು ಎಂದು ಎಚ್ಚರಿಸಿದರು.
ಪರಿಸರ ಹೋರಾಟಗಾರ ನರಸಿಂಹ ಹೆಗಡೆ ಮಾನಿಗದ್ದೆ ಮಾತನಾಡಿ, ಈ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳಿವೆ ಈ ಯೋಜನೆಯಿಂದ ನೇರವಾಗಿ ಬಾಧಿತವಾಗುವವರು ಹಾಗೂ ಪರೋಕ್ಷವಾಗಿ ಬಾಧಿತವಾಗುವವರು ಸಹ ಎಚ್ಚೆತ್ತುಕೊಳ್ಳಬೇಕು. ಈ ಯೋಜನೆಯಲ್ಲಿ ಅಣೆಕಟ್ಟೆಉ ಕಟ್ಟಿ ನೀರನ್ನು ಸಂಗ್ರಹಿಸಿರುವುದರಿಂದ ಘಟ್ಟದ ಕೆಳಗಿನ ನದಿ ಸುತ್ಮುತ್ತಲಿನವರಿಗೂ ನೀರಿನ ಹರಿವು ಕಡಿಮೆಯಾಗಿ, ಉಪ್ಪಿ ನೀರು ನದಿಗೆ ನುಗ್ಗಬಹುದು ಎಂದು ಎಚ್ಚರಿಸಿದರು.
ಯಫಟುಮಠ ದೇವಸ್ಥಾನ ಕಮಿಟಿ ಅಧ್ಯಕ್ಷ ದುಗ್ಗುಮನೆ ಅಧ್ಯಕ್ಷತೆ ವಹಿಸಿದ್ದರು. ಕೀಸಲವಾಡ ಸೀಮಾ ಅಧ್ಯಕ್ಷ ವಿ.ವಿ.ಹೆಗಡೆ ಗುಬ್ಬಿಗದ್ದೆ, ನಾಗು ಗೌಡ ಮುರೇಗಾರ ಮೊದಲಾದವರು ವೇದಿಕೆಯಲ್ಲಿದ್ದರು. ನಂತರ ಯೋಜನೆ ಬಗ್ಗೆ ಸಂವಾದ ನಡೆಯಿತು.
ಕಾರ್ಯಕ್ರಮ ಸಂಯೋಜಕ ನರಸಿಂಹ ಭಟ್ ಮುಣದೂರ ಸ್ವಾಗತಿಸಿದರು. ವಿಜಯಾ ಭಟ್ ಯಫಡಿಮಠ ಕಾರ್ಯಕ್ರಮ ನಿರೂಪಿಸಿದರು. ಸುಮುತ್ತಿನ ಗ್ರಾಮಗಳ ನೂರು ಜನರು ಪಾಲ್ಗೊಂಡಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



