ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆ: ಸರ್ಕಾರಿ ಜೀಪ್ ಜಖಂ, ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

Jul 7, 2026 - 13:02
 0  227
ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆಯೇ ಹಲ್ಲೆ: ಸರ್ಕಾರಿ ಜೀಪ್ ಜಖಂ, ನಾಲ್ವರು ಆರೋಪಿಗಳು ನ್ಯಾಯಾಂಗ ಬಂಧನಕ್ಕೆ

ಆಪ್ತ ನ್ಯೂಸ್ ಶಿರಸಿ:

ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ನಾಲ್ವರನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತ ಆರೋಪಿಗಳನ್ನು ನಗರದ ರಾಮನಬೈಲ್ ಶ್ರೀರಾಮ ಕಾಲೋನಿಯ ಪೈಜಾನ್ ಅಬ್ದುಲ್ ಸಮ್ಮದ್ ಮುಲ್ಲಾ (22), ಹುಬ್ಬಳ್ಳಿ ರಸ್ತೆಯ ಹವಾಲ್ದಾರಗಲ್ಲಿಯ ತನ್ವೀರ ಆಸೀಪ್ ಶೇಖ್ (22), ರಾಜೀವನಗರದ ತೋಹಿದ್ ಶಬ್ಬೀರ್ ಸವಣೂರ (22) ಹಾಗೂ ರಾಮನಬೈಲ್‌ನ ರಿಹಾನ್ ಅಬ್ದುಲ್ ಸಮ್ಮದ್ ಮುಲ್ಲಾ (27) ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಜುಲೈ 5ರಂದು ರಾತ್ರಿ ಸುಮಾರು 1 ಗಂಟೆಯ ವೇಳೆಗೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಎ.ಎಸ್.ಐ ಸುರೇಶ ಗೊಂಜಾಳಿ ಹಾಗೂ ಹೋಂ ಗಾರ್ಡ್ ನವೀನ ಶಾಸ್ತ್ರಿ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಸ್ಥಳಕ್ಕೆ ಬಂದ ನಾಲ್ವರು ಆರೋಪಿತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

ಇದಷ್ಟೇ ಅಲ್ಲದೆ, ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಕೈಯಿಂದ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ಆರೋಪಿಸಲಾಗಿದೆ. ಘಟನೆಯ ವೇಳೆ ಪೊಲೀಸ್ ಇಲಾಖೆಯ ಸರ್ಕಾರಿ ಜೀಪ್‌ಗೂ ಹಾನಿ ಉಂಟುಮಾಡಿ ಜಖಂಗೊಳಿಸಿರುವುದಾಗಿ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣದ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಮುಂದಿನ ತನಿಖೆ ಮುಂದುವರಿದಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0