ಆಪ್ತ ನ್ಯೂಸ್ ಶಿರಸಿ
ಯಲ್ಲಾಪುರದಲ್ಲಿ ಇಂದು ನಡೆದ ದಲಿತ ಮಹಿಳೆ ರಂಜಿತಾ ಮಲ್ಲಪ್ಪ ಬನ್ಸೋಡೆ ಅವರ ಧಾರುಣ ಕೊಲೆ ಕೃತ್ಯವು ಅತ್ಯಂತ ಖೇದಕರ ಮತ್ತು ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಯಾಗಿದೆ. ಈ ಭೀಕರ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಂಸದ ಕಾಗೇರಿ ತಿಳಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ತಡೆಯುವುದು ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾನು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ (SP) ಮಾತನಾಡಿದ್ದೇನೆ,
ಸಾರ್ವಜನಿಕರ ರಕ್ಷಣೆ ಮತ್ತು ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಶೀಘ್ರವಾಗಿ ತನಿಖೆ ಮಾಡಿ, ನ್ಯಾಯ ಒದಗಿಸಬೇಕು ಎಂದು ಸೂಚಿಸಿದ್ದೇನೆ.
ಈ ಭೀಕರ ಕೃತ್ಯವೆಸಗಿದ ಆರೋಪಿ ರಫಿಕ್ ನನ್ನು ಕೂಡಲೇ ಬಂಧಿಸಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಬೇಕು ಎಂದು ನಾನು ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತಿದ್ದೇನೆ.
ಶೋಕದಲ್ಲಿರುವ ಆ ಕುಟುಂಬದ ಸದಸ್ಯರಿಗೆ ಈ ಆಘಾತವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
************
ನಾಳೆ ಯಲ್ಲಾಪುರ ಬಂದ್
ಮಹಿಳೆಯ ಕೊಲೆ ಖಂಡಿಸಿ ವಿವಿಧ ಹಿಂದು ಸಂಘಟನೆಗಳು, ಹಿಂದೂಪರ ದಲಿತ ಸಂಘಟನೆಗಳು ಜ.4 ರಂದು ಯಲ್ಲಾಪುರ ಬಂದ್ ಗೆ ಕರೆ ನೀಡಿವೆ. ಬೆಳಗ್ಗೆ 9 ಕ್ಕೆ ಬಸವೇಶ್ವರ ಸರ್ಕಲ್ ಬಳಿ ಪ್ರತಿಭಟನೆ ಆರಂಭವಾಗಲಿದ್ದು, ಕೊಲೆ ಮಾಡಿದ ವ್ಯಕ್ತಿಯನ್ನು ಬಂಧಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ. ಎಲ್ಲಾ ಅಂಗಡಿಕಾರರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡಬೇಕೆಂದು ವಿ.ಹಿಂ.ಪ ಅಧ್ಯಕ್ಷ ಗಜಾನನ ನಾಯ್ಕ ಮನವಿ ಮಾಡಿದ್ದಾರೆ.
***************
ಯಲ್ಲಾಪುರದಲ್ಲಿ ಹಿಂದೂ ಯುವತಿ/ಮಹಿಳೆಯರ ಮೇಲಿನ ದೌರ್ಜನ್ಯ - ಹತ್ಯೆ ಘಟನೆಗಳು ಖಂಡನೀಯ: ಎನ್ ಎಸ್ ಹೆಗಡೆ ಕರ್ಕಿ
ಶಾಂತಿಯುತ ಮತ್ತು ಸಂಸ್ಕಾರ-ವೈಚಾರಿಕತೆಗೆ ಹೆಸರಾದ ಯಲ್ಲಾಪುರದಲ್ಲಿ ಪದೇ ಪದೇ ಹಿಂದೂ ದಲಿತ ಯುವತಿಯರು ಮತ್ತು ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ನಮ್ಮನ್ನು ಆಘಾತಗೊಳಿಸಿವೆ. ಇತ್ತೀಚೆಗೆ ಮದನೂರು ಭಾಗದಲ್ಲಿ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಈಗ ಯಲ್ಲಾಪುರ ನಗರದಲ್ಲಿ ಹಿಂದೂ ಮಹಿಳೆಯೊಬ್ಬರ ಕುತ್ತಿಗೆ ಕತ್ತರಿಸಿ ನಡೆದ ಬರ್ಬರ ಹತ್ಯೆ ನಿಜಕ್ಕೂ ಭಯ ಹುಟ್ಟಿಸುವಂತಿದೆ.
ಬಿಜೆಪಿ ಈ ದುರ್ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸುತ್ತದೆ.
ನಾಳೆ ಯಲ್ಲಾಪುರ ಬಂದ್‌ಗೆ ಸಮಸ್ತ ಹಿಂದೂ ಸಂಘಟನೆಗಳು ಕರೆ ನೀಡಿವೆ. ಈ ಪ್ರತಿಭಟನೆಗೆ ಬಿಜೆಪಿಯು ಸಂಪೂರ್ಣ ಬೆಂಬಲ ನೀಡುತ್ತದೆ ಹಾಗೂ ಸ್ತ್ರೀಯರ ಸುರಕ್ಷತೆ ಮತ್ತು ನ್ಯಾಯಕ್ಕಾಗಿ ಜೊತೆಗೆ ನಿಲ್ಲುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಕರ್ಕಿ ಹೇಳಿದ್ದಾರೆ.