ಪ್ರಚಾರ ಪ್ರಿಯ ಕಾಗೇರಿಗೆ ರಾಜಕೀಯ ಜ್ಞಾನೋದಯ: ಶಿವರಾಂ ಹೆಬ್ಬಾರ್
ಆಪ್ತ ನ್ಯೂಸ್ ಯಲ್ಲಾಪುರ:
ಪ್ರಚಾರ ಪ್ರಿಯ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜಕೀಯ ಜ್ಞಾನೋದಯವು ಬಹು ದಿನಗಳ ಬಳಿಕವಾಗಿರುವುದು ಆಶ್ಚರ್ಯದ ಸಂಗತಿ. ಪ್ರಚಾರದ ನಶೆಯಲ್ಲಿ ರಾಷ್ಟ್ರಗೌರವಕ್ಕೂ ಮೀರಿದ ಅಹಂಕಾರವನ್ನು ತೋರಿಸಿರುವ ಕಾಗೇರಿ ಅವರ ಇತ್ತೀಚಿನ ಹೇಳಿಕೆ, ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಸ್ಪಂದಿಸುವ ರಾಷ್ಟ್ರಗೀತೆಗೆ ನೇರ ಅವಮಾನವಾಗಿದೆ ಎಂದು ಶಾಸಕ ಎಸ್.ಎಂ.ಹೆಬ್ಬಾರ್ ಎಂದಿದ್ದಾರೆ.
ರಾಜಕೀಯ ಬದುಕಿನಲ್ಲಿ ಶಾಸಕರಾಗಿ, ಮಂತ್ರಿಯಾಗಿ ಹಾಗೂ ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ವ್ಯಕ್ತಿಯಿಂದ ಇಂತಹ ಅಪ್ರಭುದ್ಧವಾದ ಮಾತುಗಳು ಹೊರಬರುವುದು ರಾಷ್ಟ್ರಪ್ರೇಮದ ಮುಖವಾಡದ ಹಿಂದೆ ರಾಷ್ಟ್ರ ನಾಯಕರಾಗಲು ಹೊರಟಿರುವುದರ ನಿಜ ಮುಖವನ್ನು ಬಿಚ್ಚಿಡುತ್ತದೆ. ಹಲವು ದಶಕಗಳ ಅನುಭವದ ನಂತರವೂ ರಾಷ್ಟ್ರಭಕ್ತಿ ಎಂಬ ಅಂತರಂಗದ ಶಕ್ತಿ ಅವರಿಗೆ ಪ್ರಚಾರದ ವೇದಿಕೆಯಲ್ಲಿ ಮಾತ್ರ ನೆನಪಾಗುವುದು ದುಃಖಕರ ಸಂಗತಿ ಎಂದಿರುವ ಅವರು ಸ್ವತಃ ರವೀಂದ್ರನಾಥ ಟ್ಯಾಗೂರ್ ಅವರು 1937 ಹಾಗೂ 1939ರಲ್ಲಿ “ಜನಗಣಮನ” ಗೀತೆಯನ್ನು ಸ್ವತಂತ್ರ ಭಾರತದ ಸ್ಫೂರ್ತಿಗಾಗಿ ಬರೆದಿದ್ದೇನೆ, ಅದು ಬ್ರಿಟಿಷರ ಸ್ವಾಗತಕ್ಕಾಗಿ ಅಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದರು. ಅದೇ ಗೀತೆಯನ್ನು ಇಂದು ತಾವು ರಾಜಕೀಯ ಮಾತಿನಾಸೆಯ ಸಾಧನವಾಗಿಸಿಕೊಂಡು ಅವಮಾನಿಸುವುದು ಕೇವಲ ಅಜ್ಞಾನವಲ್ಲ,ರಾಷ್ಟ್ರದ ಗೌರವಕ್ಕೆ ಚುಕ್ಕೆ ತರಿಸುವ ಕೃತ್ಯವಾಗಿದೆ.ಜನ ಗಣ ಮನ" ಇದು ಕೇವಲ ಒಂದು ಗೀತೆ ಅಲ್ಲ; ಇದು ಭಾರತೀಯರ ಹೃದಯದ ಧ್ವನಿ, ನಮ್ಮ ಸಂವಿಧಾನದ ಆತ್ಮ, ಹಾಗೂ ರಾಷ್ಟ್ರದ ಒಗ್ಗಟ್ಟಿನ ಪ್ರತೀಕ. ಈ ಪವಿತ್ರ ರಾಷ್ಟ್ರಗೀತೆಯ ಕುರಿತು ಕಾಗೇರಿ ನೀಡಿರುವ ಅವಿವೇಕಿ ಹೇಳಿಕೆ ಕೇವಲ ರಾಷ್ಟ್ರಗೌರವಕ್ಕೆ ಧಕ್ಕೆ ಹಾಗೂ ಕಾಗೇರಿ ಅವರ ಪ್ರಚಾರ ಪ್ರೀಯತೇಯು ಎದ್ದು ತೋರಿಸುತ್ತದೆ. ನಾನು ಕಾಗೇರಿ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ರಾಷ್ಟ್ರಗೀತೆ, ರಾಷ್ಟ್ರಧ್ವಜ, ಸಂವಿಧಾನ — ಇವುಗಳ ಗೌರವ ಯಾವುದೇ ವ್ಯಕ್ತಿಯ ಪ್ರಚಾರಕ್ಕಿಂತ ಮೇಲು. ಭಾರತೀಯರ ಭಾವನೆಗಳನ್ನು ಮೆಟ್ಟಿಲುಮಾಡಿಕೊಂಡು ಪ್ರಚಾರದ ನಾಟಕ ರಚಿಸುವ ಬದಲು, ಕಾಗೇರಿ ಅವರು ಸ್ವಲ್ಪ ಸಂಯಮವನ್ನು ತೆಗೆದುಕೊಂಡು ರಾಷ್ಟ್ರಭಕ್ತಿಯ ನಿಜ ಅರ್ಥವನ್ನು ಅರಿತುಕೊಳ್ಳುವುದು ಉತ್ತಮ ಎಂದು ಹೆಬ್ಬಾರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



