ಪೆಟ್ರೋಲ್ ಬಂಕ್ ಬಳಿ ಯುವಕನಿಗೆ ಹಲ್ಲೆ: ಆರೋಪಿ ಬಂಧನ
ಊಟಕ್ಕೆ ತೆರಳುತ್ತಿದ್ದ ವೇಳೆ ಅಡ್ಡಗಟ್ಟಿ ಜಾತಿ ನಿಂದನೆ, ಮಾರಕಾಸ್ತ್ರದಿಂದ ಹಲ್ಲೆ ಆರೋಪ
ಆಪ್ತ ನ್ಯೂಸ್ ಶಿರಸಿ:
ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿರ್ಜಾನಕರ ಪೆಟ್ರೋಲ್ ಬಂಕ್ ಸಮೀಪ ಯುವಕನೊಬ್ಬನನ್ನು ಅಡ್ಡಗಟ್ಟಿ ಜಾತಿ ನಿಂದನೆ ಮಾಡಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಶಿರಸಿ ನಗರ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 25ರಂದು ರಾತ್ರಿ ಸುಮಾರು 10.45ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶಿರಸಿ ನಗರದ ನಿವಾಸಿ ಆದರ್ಶ ಆನಂದ ಮರಾಠಿ (21) ಅವರು ಸ್ನೇಹಿತರೊಂದಿಗೆ ಊಟಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿಯು ಅವರನ್ನು ಅಡ್ಡಗಟ್ಟಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಆರೋಪಿ ಗಿರೀಶ ವಾಮನ ನಾಯ್ಕ್, ಗುಡೇಅಂಗಡಿ, ಕುಮಟಾ, ಎಂಬಾತ ಆದರ್ಶ ಅವರನ್ನು ಜಾತಿ ನಿಂದನೆ ಮಾಡಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ ಹಾಗೂ ಬಳಿಕ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯಿಂದ ಗಾಯಗೊಂಡ ಆದರ್ಶ ಅವರು ನೀಡಿದ ದೂರಿನ ಆಧಾರದ ಮೇಲೆ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದರು.
ಪೊಲೀಸರ ಕಾರ್ಯಾಚರಣೆ
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜೆ., ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ ಹಾಗೂ ವೃತ್ತ ನಿರೀಕ್ಷಕ ಸಂಪತ್ ಈ.ಸಿ. ಅವರ ಮಾರ್ಗದರ್ಶನದಲ್ಲಿ ಆರೋಪಿಯ ಬಂಧನಕ್ಕೆ ತಂಡ ರಚಿಸಲಾಗಿತ್ತು.
ಪಿಎಸ್‌ಐಗಳಾದ ನರಸಿಂಹಲು ಮತ್ತು ಟಿ. ನಾರಾಯಣ ರಾಥೋಡ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಸವರಾಜ ಹಗರಿ, ರಾಮಯ್ಯ ಪೂಜಾರಿ, ಹನುಮಂತ ಮಾಕಾಪುರ, ಹನುಮಂತ ಕಬಾಡಿ, ಚೆನ್ನಪ್ಪ, ಸುನೀಲ್, ಪ್ರಶಾಂತ ಹಾಗೂ ರಾಜಶೇಖರ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಶಿರಸಿ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0