ಬೇಡ್ತಿ-ವರದಾ ಯೋಜನೆ: ಮಲೆನಾಡಿನ ಗುಪ್ತಗಾಮಿಗಳ 'ಗೇಮ್ ಪ್ಲಾನ್' ? NWDA ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡುತ್ತಿರುವ ವ್ಯಕ್ತಿ ಯಾರು?

May 1, 2026 - 08:38
 0  177
ಬೇಡ್ತಿ-ವರದಾ ಯೋಜನೆ: ಮಲೆನಾಡಿನ ಗುಪ್ತಗಾಮಿಗಳ 'ಗೇಮ್ ಪ್ಲಾನ್' ? NWDA ಅಧಿಕಾರಿಗಳಿಗೆ ಮಾಹಿತಿ ರವಾನೆ ಮಾಡುತ್ತಿರುವ ವ್ಯಕ್ತಿ ಯಾರು?

ಆಪ್ತ ವಿಶೇಷ
(ನಮ್ಮಲ್ಲಿ ಮಾತ್ರ)

****

ಆಪ್ತ ನ್ಯೂಸ್ ಶಿರಸಿ:

ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ಬೇಡ್ತಿ ನದಿಯನ್ನು ತಿರುಗಿಸುವ 'ಬೇಡ್ತಿ-ವರದಾ ನದಿ ಜೋಡಣೆ' ಯೋಜನೆಗೆ ಸಂಬಂಧಿಸಿದಂತೆ ಈಗ ಹೊಸ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ತಾಂತ್ರಿಕ ಸ್ಥಳ ಪರಿಶೀಲನೆಗೆ ಇಳಿದಿದ್ದ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಮತ್ತು KERS ಅಧಿಕಾರಿಗಳ ತಂಡವು, ಜನಪ್ರತಿನಿಧಿಗಳಿಗೂ ತಿಳಿಯದಂತೆ ನಡೆಸಿದ 'ಸೀಕ್ರೆಟ್ ಆಪರೇಷನ್' ಈಗ ತೀವ್ರ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. 

ಸಾಮಾಜಿಕ ಜಾಲತಾಣದಿಂದ ಮಾಹಿತಿ ಡಿಲೀಟ್: ಏನಿದು ನಿಗೂಢ?

'ಆಪ್ತ ನ್ಯೂಸ್' ಸೇರಿದಂತೆ ಪ್ರಮುಖ ಮಾಧ್ಯಮಗಳಲ್ಲಿ ಅಧಿಕಾರಿಗಳ ಭೇಟಿಯ ಬಗ್ಗೆ ಸವಿಸ್ತಾರವಾದ ವರದಿ ಪ್ರಕಟವಾಗುತ್ತಿದ್ದಂತೆಯೇ ಎಚ್ಚೆತ್ತ NWDA ಅಧಿಕಾರಿಗಳು, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಸರ್ವೆ ವಿವರಗಳು ಮತ್ತು ಫೋಟೋಗಳನ್ನು ದಿಢೀರ್ ಆಗಿ ಡಿಲೀಟ್ ಮಾಡಿದ್ದಾರೆ.

  • ಪ್ರಶ್ನೆ ಏನೆಂದರೆ: ಅರಣ್ಯ ನಾಶವಾಗುವುದಿಲ್ಲ, ಯೋಜನೆಯಲ್ಲಿ ಪಾರದರ್ಶಕತೆ ಇದೆ ಎಂದು ಹೇಳುವ ಅಧಿಕಾರಿಗಳು, ಸಾರ್ವಜನಿಕ ಡೊಮೇನ್‌ನಲ್ಲಿದ್ದ ಫೋಟೋಗಳನ್ನು ಅಳಿಸಿಹಾಕಿದ್ದೇಕೆ?

  • ಯಾರ ಒತ್ತಡಕ್ಕೆ ಮಣಿದು ಈ ಗುಟ್ಟು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆ? ಈ 'ಡಿಲೀಟ್' ಕಾರ್ಯಾಚರಣೆಯ ಹಿಂದೆ ಮಲೆನಾಡಿನ ಪರಿಸರಕ್ಕೆ ಕೊಡಲಿ ಏಟು ಹಾಕುವ ಯಾವುದೋ ರಹಸ್ಯ ಅಡಗಿದೆಯೇ ಎನ್ನುವ ಪ್ರಶ್ನೆ ಸ್ಥಳೀಯರಲ್ಲಿ ಮೂಡಿದೆ.

ಸ್ವರ್ಣವಲ್ಲಿ ಮಠದ ಕೃಷಿ ಜಯಂತಿಯಂದೇ ಸರ್ವೆ: ಸ್ಕೆಚ್ ಹಾಕಿದವರು ಯಾರು?

ಈ ಇಡೀ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ ಅಧಿಕಾರಿಗಳು ಭೇಟಿ ನೀಡಿದ ಸಮಯ. ಶಿರಸಿಯ ಪ್ರತಿಷ್ಠಿತ ಸ್ವರ್ಣವಲ್ಲಿ ಮಠದಲ್ಲಿ 'ಕೃಷಿ ಜಯಂತಿ' ಕಾರ್ಯಕ್ರಮ ನಡೆಯುವ ದಿನಾಂಕದಂದೇ ಅಧಿಕಾರಿಗಳು ಕಾಡಿಗೆ ನುಗ್ಗಿರುವುದು ಕಾಕತಾಳೀಯವೇ? ಖಂಡಿತ ಅಲ್ಲ ಎನ್ನುತ್ತಿವೆ ಮೂಲಗಳು.

"ಮಲೆನಾಡಿನ ಹೋರಾಟಗಾರರು, ರೈತರು ಮತ್ತು ಪರಿಸರ ಪ್ರೇಮಿಗಳು ಮಠದ ಧಾರ್ಮಿಕ ಮತ್ತು ಕೃಷಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುತ್ತಾರೆ. ಈ ವೇಳೆ ಸರ್ವೆ ನಡೆಸಿದರೆ ಯಾವುದೇ ಪ್ರತಿರೋಧ ಎದುರಾಗುವುದಿಲ್ಲ" ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಆ 'ಕೈಗೊಂಬೆ' ಯಾರು? ಮಲೆನಾಡಿಗರ ಎದೆಯ ಮೇಲೆ ಕಾಲಿಟ್ಟು, ಇಲ್ಲಿನ ಜನರಿಗೆ ಗೊತ್ತಾಗದಂತೆ ಕೆಲಸ ಮಾಡುತ್ತಿರುವ ಆ ವ್ಯಕ್ತಿ ಯಾರಿರಬಹುದು ಎನ್ನುವ ಚರ್ಚೆ ಇದೀಗ ಶುರುವಾಗಿದೆ.

ಸ್ಥಳೀಯರ ಮನಸ್ಸಿನ ಜೊತೆ ಚೆಲ್ಲಾಟವಾಡುವ ಆ 'ಗುಪ್ತ ವ್ಯಕ್ತಿ' ಯಾರು?

ಯೋಜನೆಯ ಪರವಾಗಿ ಅಧಿಕಾರಿಗಳಿಗೆ ರಹದಾರಿ ಮಾಡಿಕೊಡುತ್ತಿರುವ, ಮಲೆನಾಡಿನ ಒಳಗೇ ಇದ್ದುಕೊಂಡು ಈ ನೆಲದ ವಿರುದ್ಧವೇ ಸಂಚು ರೂಪಿಸುತ್ತಿರುವ ಆ 'ಅನಾಮಧೇಯ' ವ್ಯಕ್ತಿಯ ಬಗ್ಗೆ ಈಗ ವ್ಯಾಪಕ ಚರ್ಚೆ ಶುರುವಾಗಿದೆ.

  1. ಸ್ಥಳೀಯ ಮಾಹಿತಿ ಸರಬರಾಜು: ಅರಣ್ಯದ ಒಳಗಿನ ದಾರಿಗಳು, ಹೋರಾಟಗಾರರ ಚಲನವಲನ ಮತ್ತು ಜನರ ಭಾವನೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿರುವವರು ಯಾರು?

  2. ಒಳಸಂಚಿನ ಅನುಮಾನ: ಮಲೆನಾಡಿನ ಅಡಿಕೆ ತೋಟಗಳು ಮತ್ತು ಜೀವವೈವಿಧ್ಯದ ಮೇಲೆ ಪರಿಣಾಮ ಬೀರುವ ಯೋಜನೆಯನ್ನು ಹೇಗಾದರೂ ಮಾಡಿ ಜಾರಿಗೊಳಿಸಲು ಸ್ಥಳೀಯರ ಮನಸ್ಸಿನ ಜೊತೆ ಆಟವಾಡುತ್ತಿರುವ ಆ ವ್ಯಕ್ತಿ ಯಾವ ಲಾಭಕ್ಕಾಗಿ ಈ ಕೆಲಸ ಮಾಡುತ್ತಿದ್ದಾನೆ?

  3. ಆ ವ್ಯಕ್ತಿ ರಾಜಕೀಯ ಹಿನ್ನೆಲೆ ಇರುವವನೇ? ಆಡಳಿತದಲ್ಲಿರುವ ಜನಪ್ರತಿನಿಧಿಯೇ? ಅಥವಾ ಅಧಿಕಾರಿಯೇ? ಅಥವಾ ಪರಿಸರ ಹೋರಾಟಗಾರನೇ? ಅಥವಾ ಜನಸಾಮಾನ್ಯನೇ? ಒಳ್ಳೆಯ ವ್ಯಕ್ತಿಯ ಸೋಗಿನಲ್ಲಿರುವ ಈ "ಮೋಸಗಾರ" ಯಾರು ಎನ್ನುವ ಚರ್ಚೆ ಕೂಡ ಶುರುವಾಗಿದೆ.
  4. ಯಾವುದಾದರೂ ವ್ಯಕ್ತಿ ಈ ಹೋರಾಟದ ನೆಪದಲ್ಲಿ ತನ್ನ ರಾಜಕೀಯ ಭವಿತವ್ಯವನ್ನು ಕಂಡುಕೊಳ್ಳುವ ಹವಣಿಕೆಯಲ್ಲಿದ್ದು, ಆ ವ್ಯಕ್ತಿಯೇ ಮಲೆನಾಡಿನಲ್ಲಿ ನಡೆಯುವ ಮಾಹಿತಿಯನ್ನು ರವಾನೆ ಮಾಡುತ್ತಿರಬಹುದೇ ಎನ್ನುವ ಪ್ರಶ್ನೆಯೂ ಉದ್ಭವವಾಗಿದೆ.

ಬಿಗುವಿನ ವಾತಾವರಣ: ಹೋರಾಟದ ಕಿಡಿ

ಅಧಿಕಾರಿಗಳ ಭೇಟಿಯ ಬೆನ್ನಲ್ಲೇ 'ಬೇಡ್ತಿ ಉಳಿಸಿ' ಸಮಿತಿಯ ಸದಸ್ಯರು ಅರಣ್ಯದೊಳಗೆ ನುಗ್ಗಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. "ಟೊಪೊಗ್ರಾಫಿಕಲ್ ಸರ್ವೆ" ಹೆಸರಿನಲ್ಲಿ ಲಿಫ್ಟ್ ಇರಿಗೇಶನ್ ಮಾದರಿಯನ್ನು ತೋರಿಸಿ, ಒಟ್ಟಾರೆಯಾಗಿ ಪಶ್ಚಿಮ ಘಟ್ಟಗಳ ಮರಣಶಾಸನ ಬರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಕೇವಲ 8-10% ನೀರು ಎನ್ನುವ ಲೆಕ್ಕಾಚಾರವೂ ಕೇವಲ ಕಣ್ಣೊರೆಸುವ ತಂತ್ರ ಎಂದು ಹೋರಾಟಗಾರರು ದೂರಿದ್ದಾರೆ.

ಮುಂದಿನ ಹಂತ: ಎಚ್ಚರಿಕೆ

ಒಂದೆಡೆ ಬಯಲು ಸೀಮೆಗೆ ನೀರು ಕೊಡುವ ಹಠದಲ್ಲಿ ಸರ್ಕಾರವಿದ್ದರೆ, ಇನ್ನೊಂದೆಡೆ ಮಲೆನಾಡಿನ ಅಸ್ತಿತ್ವದ ಪ್ರಶ್ನೆಯಿದೆ. ಆದರೆ, ಈ ನಡುವೆ ಅಧಿಕಾರಿಗಳ ಮಾಹಿತಿ ಮುಚ್ಚಿಡುವ ತಂತ್ರ ಮತ್ತು ಸ್ಥಳೀಯ 'ಗುಪ್ತ ವ್ಯಕ್ತಿ'ಗಳ ಸಂಚು ಬಯಲಾದಲ್ಲಿ ಹೋರಾಟವು ಉಗ್ರ ಸ್ವರೂಪ ಪಡೆಯುವುದು ಖಚಿತ.

NWDA ಮತ್ತು KERS ಅಧಿಕಾರಿಗಳೇ ಕೇಳಿ... ಜನರಿಂದ ಮಾಹಿತಿ ಅಡಗಿಸಿ ನಡೆಸುವ ಯಾವುದೇ ಯೋಜನೆಗೆ ಮಲೆನಾಡಿಗರ ಒಪ್ಪಿಗೆಯಿಲ್ಲ. ಆ 'ಗುಪ್ತ ವ್ಯಕ್ತಿ' ಯಾರೆಂಬುದು ಬಯಲಾಗುವ ಕಾಲ ಹತ್ತಿರದಲ್ಲಿದೆ!

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1