ಮರಕ್ಕೆ ಡಿಕ್ಕಿ ಹೊಡೆದ ಬೈಕ್: ಭಜರಂಗದಳದ ಯುವ ಕಾರ್ಯಕರ್ತ ದುರ್ಮರಣ

Jun 28, 2026 - 19:00
 0  212
ಮರಕ್ಕೆ ಡಿಕ್ಕಿ ಹೊಡೆದ ಬೈಕ್: ಭಜರಂಗದಳದ ಯುವ ಕಾರ್ಯಕರ್ತ ದುರ್ಮರಣ

ಆಪ್ತ ನ್ಯೂಸ್ ಭಟ್ಕಳ:

ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದ ಬೈಕ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬಂದರ ರಸ್ತೆ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ಮಧುರ ಮಂಜುನಾಥ ನಾಯ್ಕ (24), ಸಬ್ಬತ್ತಿ ನಿವಾಸಿ ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಬೈಕ್ ಸವಾರ ಸುಮೇದ ನಾರಾಯಣ ನಾಯ್ಕ, ಗರಡಿಹಿತ್ಲು-ಬೆಳಕೆ ನಿವಾಸಿಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೇಗೆ ಸಂಭವಿಸಿತು ಅಪಘಾತ?

ಪೊಲೀಸರ ಮಾಹಿತಿ ಪ್ರಕಾರ, ಜೂನ್ 26ರಂದು ರಾತ್ರಿ ಸುಮಾರು 11.45 ಗಂಟೆ ವೇಳೆಗೆ ಸುಮೇದ ನಾಯ್ಕ ಅವರು ಟಿವಿಎಸ್ ಅಪಾಚೆ ಬೈಕ್‌ನಲ್ಲಿ ಹಿಂಬದಿಯಲ್ಲಿ ಮಧುರ ನಾಯ್ಕ ಅವರನ್ನು ಕೂರಿಸಿಕೊಂಡು ಸಂಶುದ್ದೀನ್ ಸರ್ಕಲ್‌ನಿಂದ ಬಂದರ ರಸ್ತೆಯತ್ತ ತೆರಳುತ್ತಿದ್ದರು.

ಈ ವೇಳೆ ಬೈಕ್ ಅನ್ನು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ ಪರಿಣಾಮ ಬಂದರ ರಸ್ತೆ 2ನೇ ಕ್ರಾಸ್ ಸಮೀಪ ರಸ್ತೆ ಬದಿಯಲ್ಲಿದ್ದ ಮರಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಮಧುರ ನಾಯ್ಕ ಅವರ ಎದೆ, ಸೊಂಟ ಹಾಗೂ ಕೈ ಭಾಗಗಳಿಗೆ ತೀವ್ರ ಗಾಯಗಳಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸವಾರ ಸುಮೇದ ನಾಯ್ಕ ಅವರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಭಜರಂಗದಳದ ಸಕ್ರಿಯ ಕಾರ್ಯಕರ್ತನಾಗಿದ್ದ ಮಧುರ

ಮೃತ ಮಧುರ ನಾಯ್ಕ ಅವರು ತಾಲೂಕಿನ ಭಜರಂಗದಳದ ಸಕ್ರಿಯ ಕಾರ್ಯಕರ್ತರಾಗಿದ್ದರು. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಶನಿವಾರ ಬೆಳಿಗ್ಗೆ ನೂರಾರು ಮಂದಿ ಭಟ್ಕಳ ಸರ್ಕಾರಿ ಆಸ್ಪತ್ರೆ ಎದುರು ಜಮಾಯಿಸಿ ಅಂತಿಮ ದರ್ಶನ ಪಡೆದರು.

ಪ್ರಕರಣ ದಾಖಲು

ಈ ಸಂಬಂಧ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0