ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಭಸ್ಮ: ಬೆಳೆಗಾರರಿಗೆ ವಿಶೇಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಅನಂತಮೂರ್ತಿ ಹೆಗಡೆ ಆಗ್ರಹ

Jun 28, 2026 - 18:39
 0  120
ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಅಡಿಕೆ ಭಸ್ಮ: ಬೆಳೆಗಾರರಿಗೆ ವಿಶೇಷ ಪರಿಹಾರ ನೀಡುವಂತೆ ಸರ್ಕಾರಕ್ಕೆ ಅನಂತಮೂರ್ತಿ ಹೆಗಡೆ ಆಗ್ರಹ

ಆಪ್ತ ನ್ಯೂಸ್‌ ಕಾನಸೂರು:

ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿದಂಟಕಲ್ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಅಡಿಕೆ ಬೆಳೆಗಾರರೊಬ್ಬರು ಭಾರೀ ನಷ್ಟ ಅನುಭವಿಸಿರುವ ಘಟನೆ ನಡೆದಿದೆ. ಗ್ರಾಮದ ವಿನಾಯಕ ಹೆಗಡೆಯವರ ಮನೆಯಲ್ಲಿ ಶೇಖರಿಸಿಡಲಾಗಿದ್ದ 70ಕ್ಕೂ ಅಧಿಕ ಚೀಲ ಸಿಪ್ಪೆ ಅಡಿಕೆ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು. ಬಳಿಕ ಸಂತ್ರಸ್ತ ರೈತನೊಂದಿಗೆ ಮಾತುಕತೆ ನಡೆಸಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅನಂತಮೂರ್ತಿ ಹೆಗಡೆ, "ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಎಲೆ ಚುಕ್ಕಿ ರೋಗದ ಹಾವಳಿಯಿಂದ ಸಾವಿರಾರು ಅಡಿಕೆ ಮರಗಳು ಹಾನಿಗೊಳಗಾಗಿವೆ. ಇದರ ಜೊತೆಗೆ ಕೊಳೆರೋಗವೂ ವ್ಯಾಪಕವಾಗಿ ಕಾಣಿಸಿಕೊಂಡಿದ್ದು, ಅನೇಕ ಪ್ರದೇಶಗಳಲ್ಲಿ ಶೇ.50ರಿಂದ 60ರಷ್ಟು ಇಳುವರಿ ಕುಸಿದಿದೆ. ಈ ಎಲ್ಲ ಕಾರಣಗಳಿಂದ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಮಯದಲ್ಲೇ ಸಂಭವಿಸಿದ ಅಗ್ನಿ ಅವಘಡ ರೈತನಿಗೆ ಮತ್ತೊಂದು ದೊಡ್ಡ ಹೊಡೆತವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ ಮಾನವೀಯತೆ ದೃಷ್ಟಿಯಿಂದ ವಿಶೇಷ ಪರಿಹಾರ ಘೋಷಿಸಿ ಸಂತ್ರಸ್ತ ರೈತನ ನೆರವಿಗೆ ಧಾವಿಸಬೇಕು. ಸರ್ಕಾರ ರೈತರ ಜೊತೆಯಲ್ಲಿದೆ ಎಂಬ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು," ಎಂದು ಒತ್ತಾಯಿಸಿದರು.

ಇದೇ ವೇಳೆ ಸಂತ್ರಸ್ತ ರೈತ ವಿನಾಯಕ ಹೆಗಡೆ ಮಾತನಾಡಿ, "ಬೆಂಕಿ ಅವಘಡದಿಂದ ನನ್ನ ಶೇ.90ರಷ್ಟು ಅಡಿಕೆ ಬೆಳೆ ಸಂಪೂರ್ಣ ನಾಶವಾಗಿದೆ. ಸುಮಾರು 4 ಲಕ್ಷ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ವರ್ಷದ ಶ್ರಮ ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಿದರೆ ಮಾತ್ರ ಈ ಸಂಕಷ್ಟದಿಂದ ಹೊರಬರಲು ಸಾಧ್ಯ," ಎಂದು ತಮ್ಮ ಅಳಲು ತೋಡಿಕೊಂಡರು.

ಅಡಿಕೆ ಬೆಳೆಯೇ ಪ್ರಮುಖ ಜೀವನಾಧಾರವಾಗಿರುವ ಈ ಭಾಗದಲ್ಲಿ ನಿರಂತರವಾಗಿ ಎದುರಾಗುತ್ತಿರುವ ರೋಗಬಾಧೆ, ಇಳುವರಿ ಕುಸಿತ ಹಾಗೂ ಇದೀಗ ಅಗ್ನಿ ಅವಘಡದಿಂದ ಬೆಳೆಗಾರರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ತುರ್ತು ಕ್ರಮ ಕೈಗೊಂಡು ಸಂತ್ರಸ್ತ ರೈತರಿಗೆ ಪರಿಹಾರ ಹಾಗೂ ಅಗತ್ಯ ನೆರವು ಒದಗಿಸಬೇಕೆಂಬ ಆಗ್ರಹ ಸ್ಥಳೀಯರಿಂದಲೂ ವ್ಯಕ್ತವಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 2
Wow Wow 0