ಶಾಲೆಯ ತರಗತಿ ಕೊಠಡಿಗೆ ನುಗ್ಗಿದ ನಾಗರಹಾವು; ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಸುನೀಲ್ ಹೊನ್ನಾವರ
ಆಪ್ತ ನ್ಯೂಸ್ ಮುಂಡಗೋಡ:
ತಾಲೂಕಿನ ಕಾತೂರು ವಲಯದ ಭದ್ರಾಪುರ ಶಾಖೆಯ ವ್ಯಾಪ್ತಿಯ ಕೊಳಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಶಾಲೆಯ ತರಗತಿ ಕೊಠಡಿಯೊಳಗೆ ವಿಷಕಾರಿ ನಾಗರಹಾವು ಕಾಣಿಸಿಕೊಂಡ ಪರಿಣಾಮ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೆಲಕಾಲ ಭಯಭೀತರಾಗಿದ್ದರು.
ಶಾಲೆಯ ಸಮೀಪದ ನಿವಾಸಿ ವಿನಯ್ ಎಸ್. ಪಾಟೇಲ್ ಅವರು ಈ ಕುರಿತು ಅರಣ್ಯ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ಮಾಹಿತಿ ದೊರೆಯುತ್ತಿದ್ದಂತೆಯೇ ಗಸ್ತು ವನಪಾಲಕರಾದ ಮಂಜು ಕೆ.ವಿ. ಹಾಗೂ ರಾಮಕೃಷ್ಣ ಮಕ್ಕೋಜಿ ಅವರ ಉಪಸ್ಥಿತಿಯಲ್ಲಿ ಪಾಳಾ ಉಪ ವಲಯ ಅರಣ್ಯಾಧಿಕಾರಿ ಸುನೀಲ್ ಹೊನ್ನಾವರ ಅವರು ತಕ್ಷಣ ಸ್ಥಳಕ್ಕೆ ಧಾವಿಸಿದರು.
ಶಾಲೆಯ ತರಗತಿ ಕೊಠಡಿಯಲ್ಲಿ ಅಡಗಿದ್ದ ನಾಗರಹಾವನ್ನು ಅತ್ಯಂತ ಎಚ್ಚರಿಕೆಯಿಂದ ಹಾಗೂ ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಲಾಯಿತು. ಬಳಿಕ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಹಾವನ್ನು ಅದರ ಸಹಜ ವಾಸಸ್ಥಾನವಾದ ಸಮೀಪದ ಅರಣ್ಯ ಪ್ರದೇಶದಲ್ಲಿ ಸುರಕ್ಷಿತವಾಗಿ ಬಿಡಲಾಯಿತು.
ಅರಣ್ಯ ಇಲಾಖೆಯ ಸಿಬ್ಬಂದಿಯ ಸಮಯೋಚಿತ ಕಾರ್ಯಾಚರಣೆಯಿಂದ ಯಾವುದೇ ಅನಾಹುತ ಸಂಭವಿಸದೆ ತಪ್ಪಿದ್ದು, ಶಾಲೆಯ ಶಿಕ್ಷಕರು ಹಾಗೂ ಗ್ರಾಮಸ್ಥರು ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಂ.ಎಸ್. ಬಾಳಣ್ಣವರ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಿ ಅತ್ತಿಕಟ್ಟಿ, ರಾಜು ಬಾಳಂಬೀಡ್, ವಿನಾಯಕ ಮಲಗುಂದ, ರಾಮಣ್ಣ ಸಮ್ಮಸಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದ್ದು, ಹಾವುಗಳು ಕಂಡುಬಂದಲ್ಲಿ ಅವುಗಳನ್ನು ಕೊಲ್ಲಲು ಅಥವಾ ಹಿಡಿಯಲು ಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದೆ. ಇದರಿಂದ ಮಾನವ ಜೀವಕ್ಕೂ, ವನ್ಯಜೀವಿಗಳ ಸಂರಕ್ಷಣೆಗೂ ಸಹಕಾರಿಯಾಗಲಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



