ಘಟ್ಟ ಹತ್ತಿದ ಮುಂಗಾರು ಜೋರು: ಬಿರುಸಾದ ಆರಿದ್ರಾ ಮಳೆ: ರೈತರ ಮುಖದಲ್ಲಿ ಮಂದಹಾಸ
ಶಿರಸಿ-ಸಿದ್ದಾಪುರ-ಯಲ್ಲಾಪುರ ಭಾಗದಲ್ಲಿ ಎರಡು ದಿನಗಳಿಂದ ಉತ್ತಮ ಮಳೆ; ಇನ್ನೂ ಮೂರು ದಿನ ಭಾರೀ ಮಳೆಯ ಮುನ್ಸೂಚನೆ
ಆಪ್ತ ನ್ಯೂಸ್ ಶಿರಸಿ:
ಈವರೆಗೆ ಘಟ್ಟದ ಕೆಳಭಾಗದ ಕರಾವಳಿ ಪ್ರದೇಶಗಳಲ್ಲಿ ಉತ್ತಮ ಮಳೆ ಸುರಿದಿದ್ದರೂ, ಘಟ್ಟದ ಮೇಲ್ಭಾಗದ ಪ್ರದೇಶಗಳಲ್ಲಿ ಮುಂಗಾರು ಅಷ್ಟಾಗಿ ಚುರುಕುಗೊಂಡಿರಲಿಲ್ಲ. ಆಗೊಮ್ಮೆ-ಈಗೊಮ್ಮೆ ಸುರಿಯುತ್ತಿದ್ದ ಸಾಧಾರಣ ಮಳೆಯಿಂದ ರೈತರು ಆತಂಕದಲ್ಲಿದ್ದರು. ಆದರೆ ಕಳೆದ ಎರಡು-ಮೂರು ದಿನಗಳಿಂದ ಪರಿಸ್ಥಿತಿ ಬದಲಾಗಿದ್ದು, ಆರಿದ್ರಾ ಮಳೆಯ ಪ್ರಭಾವದಿಂದ ಶಿರಸಿ, ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕುಗಳಲ್ಲಿ ಮಳೆ ಬಿರುಸು ಪಡೆದುಕೊಂಡಿದೆ. ಬುಧವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರಲ್ಲಿ ಹೊಸ ಆಶಾಭಾವನೆ ಮೂಡಿದೆ.
ಮಳೆಯ ಪ್ರಮಾಣ ಹೆಚ್ಚಿದ ಪರಿಣಾಮ ಅಡಿಕೆ ತೋಟಗಳಲ್ಲಿ ನೀರಿನ ಕೊರತೆ ನೀಗಿದ್ದು, ತೋಟಗಳು ಸಂಪೂರ್ಣ ತೇವಗೊಂಡಿವೆ. ಭತ್ತದ ಗದ್ದೆಗಳಿಗೂ ಸಮರ್ಪಕ ನೀರು ಲಭ್ಯವಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.
ಮಳೆ ಕೊರತೆಯಿಂದ ಕಂಗಾಲಾಗಿದ್ದ ರೈತರು ಇದೀಗ ನಿಟ್ಟುಸಿರು ಬಿಟ್ಟಿದ್ದು, ಉತ್ತಮ ಮುಂಗಾರು ಮುಂದುವರಿದರೆ ಈ ಬಾರಿಯ ಕೃಷಿ ಹಂಗಾಮು ಉತ್ತಮವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಇನ್ನೂ ಮೂರು ದಿನ ಉತ್ತಮ ಮಳೆ ಸಾಧ್ಯತೆ
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲ್ಭಾಗ ಸೇರಿದಂತೆ ಹಲವೆಡೆ ಮುಂದಿನ ಮೂರು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಜಲಮೂಲಗಳು, ಕೆರೆ-ಕಟ್ಟೆಗಳು ಹಾಗೂ ಕೃಷಿ ಭೂಮಿಗಳಿಗೆ ಇನ್ನಷ್ಟು ಜೀವಕಳೆ ಬರಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.
ಮಳೆರಾಯನ ಈ ಆಗಮನದಿಂದ ಘಟ್ಟದ ಭಾಗದಲ್ಲಿ ಕೃಷಿ ಚಟುವಟಿಕೆಗಳು ಮತ್ತೆ ವೇಗ ಪಡೆದುಕೊಳ್ಳುವ ನಿರೀಕ್ಷೆ ಮೂಡಿದ್ದು, ರೈತರ ಮುಖದಲ್ಲಿ ಮಂದಹಾಸ ಅರಳಿದೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



