ಅತ್ತಿಗೆಯೊಂದಿಗೆ ಅಕ್ರಮ ಸಂಬಂಧದ ಶಂಕೆ; ಅಣ್ಣನಿಂದಲೇ ತಮ್ಮನ ಭೀಕರ ಕೊಲೆ!? ಆರೋಪಿ ಪರಾರಿ

Jun 26, 2026 - 10:34
 0  211
ಅತ್ತಿಗೆಯೊಂದಿಗೆ ಅಕ್ರಮ ಸಂಬಂಧದ ಶಂಕೆ; ಅಣ್ಣನಿಂದಲೇ ತಮ್ಮನ ಭೀಕರ ಕೊಲೆ!? ಆರೋಪಿ ಪರಾರಿ

ಆಪ್ತ ನ್ಯೂಸ್ ಶಿರಸಿ:

ತಾಲೂಕಿನ ಇಟಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಡ್ತಳ್ಳಿ–ಶಿಂಗಣಮನೆ ನಡುವಿನ ಅರಣ್ಯ ಪ್ರದೇಶದಲ್ಲಿ ನಡೆದ ಹತ್ಯೆ ಕುರಿತು ಬಿಗ್‌ ಟ್ವಿಸ್ಟ್‌ ಹೊರಬಿದ್ದಿದೆ.
ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಅಣ್ಣನೇ ತನ್ನ ಸಂಬಂಧದ ತಮ್ಮನನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಮೃತ ಮತ್ತು ಆರೋಪಿ ಯಾರು?

ಈ ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯನ್ನು ಪರಮೇಶ್ವರ ಬಾಬು ನಾಯ್ಕ್ (35) ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪರಮೇಶ್ವರ ತಿಮ್ಮಾ ನಾಯ್ಕ್ (27) ಘಟನೆಯ ಬಳಿಕ ತಲೆಮರೆಸಿಕೊಂಡಿದ್ದಾನೆ.

ಮೃತ ಮತ್ತು ಆರೋಪಿ ಇಬ್ಬರೂ ಚಿಕ್ಕಮ್ಮ–ದೊಡ್ಡಮ್ಮನ ಮಕ್ಕಳಾಗಿದ್ದು, ಸಂಬಂಧದಲ್ಲಿ ಅಣ್ಣ–ತಮ್ಮಂದಿರಾಗಿದ್ದರು ಎಂದು ತಿಳಿದುಬಂದಿದೆ.

ಅಕ್ರಮ ಸಂಬಂಧದ ಶಂಕೆಯೇ ಕೊಲೆಗೆ ಕಾರಣ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಳೆದ ಒಂದೆರಡು ವರ್ಷಗಳಿಂದ ಆರೋಪಿ ಪರಮೇಶ್ವರ ತಿಮ್ಮಾ ನಾಯ್ಕ್, ಮೃತ ಪರಮೇಶ್ವರ ಬಾಬು ನಾಯ್ಕ್ ಅವರ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನ ಕುಟುಂಬದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ವಿಷಯವಾಗಿ ಇಬ್ಬರ ನಡುವೆ ಆಗಾಗ್ಗೆ ವಾಗ್ವಾದ, ಮನಸ್ತಾಪ ಹಾಗೂ ವೈಷಮ್ಯ ಉಂಟಾಗುತ್ತಿದ್ದು, ಇದೇ ದ್ವೇಷ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿರುವ ಶಂಕೆ ವ್ಯಕ್ತವಾಗಿದೆ.

'ಮಾತನಾಡಬೇಕು' ಎಂದು ಕರೆದು ಕಾಡಿನಲ್ಲಿ ಹತ್ಯೆ

ಗುರುವಾರ ರಾತ್ರಿ ಆರೋಪಿ, "ಸ್ವಲ್ಪ ಮಾತನಾಡಬೇಕು, ಹೊರಗೆ ಬಾ" ಎಂದು ಮೃತನನ್ನು ಮನೆಯ ಹೊರಗೆ ಕರೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಬಳಿಕ ಸಮೀಪದ ಅರಣ್ಯ ಪ್ರದೇಶದಲ್ಲಿ ಇಬ್ಬರ ನಡುವೆ ಮತ್ತೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಈ ವೇಳೆ ಆರೋಪಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಪರಮೇಶ್ವರ ಬಾಬು ನಾಯ್ಕ್ ಅವರನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಧಾವಿಸಿದ ಪೊಲೀಸರು

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಬಲೆ ಬೀಸಿದ್ದು, ಕೊಲೆಯ ನಿಖರ ಕಾರಣ, ಘಟನೆಯ ಹಿನ್ನೆಲೆ ಹಾಗೂ ಇತರ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0