ಮಾರಿಕಾಂಬಾ ಸಮಿತಿ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

Oct 15, 2025 - 18:59
 0  12
ಮಾರಿಕಾಂಬಾ ಸಮಿತಿ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

ಆಪ್ತ ನ್ಯೂಸ್ ಸಾಗರ:

ಮಾರಿಕಾಂಬಾ ಸಮಿತಿ ವಿರುದ್ದ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಮೂರು ತಿಂಗಳಿನೊಳಗೆ ಚುನಾವಣೆ ನಡೆಸಿ ಹೊಸ ಸಮಿತಿ ರಚನೆ ಮಾಡಿ ನ್ಯಾಯಾಲಯಕ್ಕೆ ಪಟ್ಟಿ ನೀಡುವಂತೆ ನ್ಯಾಯಾಲಯ ನೀಡಿದ ಆದೇಶವನ್ನು ಸಮಿತಿ ಗಾಳಿಗೆ ತೂರಿ, ನ್ಯಾಯಾಂಗ ನಿಂದನೆ ಮಾಡಿದೆ ಎಂದು ಮಾರಿಕಾಂಬಾ ಹಿತರಕ್ಷಣಾ ಸಮಿತಿ ಸಂಚಾಲಕ ಎಂ. ಡಿ. ಆನಂದ್ ತಿಳಿಸಿದರು. 
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಿತಿಯು ನ್ಯಾಯಾಲಯದ ಆದೇಶಕ್ಕೆ ಮನ್ನಣೆ ನೀಡದೆ ೯೪ ದಿನ ಕಳೆದರೂ ಈತನಕ ಚುನಾವಣೆ ನಡೆಸಿಲ್ಲ ಎಂದು ದೂರಿದರು.
ನ್ಯಾಯಾಲಯವು ದಿನಾಂಕ ೧೧-೦೭-೨೦೨೫ರಿಂದ ೧೧-೧೦-೨೦೨೫ರೊಳಗಿನ ಮೂರು ತಿಂಗಳು ಚುನಾವಣೆ ನಡೆಸಲು ಅವಕಾಶ ನೀಡಿತ್ತು. ಮೂರು ತಿಂಗಳು ಮುಕ್ತಯವಾಗಿದ್ದು ಹೊಸ ಸಮಿತಿ ರಚನೆ ಮಾಡಲು ಚುನಾವಣೆ ಪ್ರಕ್ರಿಯೆ ಈತನಕ ಪ್ರಾರಂಭ ಮಾಡಿಲ್ಲ. ತಾವೆ ಅಧಿಕಾರದಲ್ಲಿ ಮುಂದುವರೆಯಲು ಸಮಿತಿ ಸಂಚು ರೂಪಿಸಿದಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಹಿತರಕ್ಷಣಾ ಸಮಿತಿಯಿಂದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ೩೨ ಸದಸ್ಯರ ವಿರುದ್ದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಅಕ್ಟೋಬರ್ ೧೪ರಂದು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದ ವಿಚಾರಣೆಯು ದಿನಾಂಕ ೩೧-೧೦-೨೦೨೫ಕ್ಕೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಚುನಾವಣೆ ನಡೆಯುವವರೆಗೂ ದೇವಸ್ಥಾನಕ್ಕೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಲೀ, ಜಿಲ್ಲಾಧಿಕಾರಿಗಳನ್ನಾಗಲಿ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ಅವರ ಮೂಲಕ ಚುನಾವಣೆ ನಂತರ ಬರುವ ಹೊಸ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಮತ್ತೊಂದು ಅರ್ಜಿ ಸಲ್ಲಿಸಲಾಗಿದ್ದು, ಈ ಎರಡೂ ಅರ್ಜಿಗಳಿಗೂ ಉಳಿದ ಎಲ್ಲಾ ಪ್ರತಿವಾದಿಗಳು ಸಮ್ಮತಿ ಸೂಚಿಸಿದ್ದಾರೆ. ದೇವಸ್ಥಾನ ಸಮಿತಿಯವರು ಸುಳ್ಳು ಮಾಹಿತಿ ಪ್ರಚುರ ಪಡಿಸುತ್ತಾ ೩ ವರ್ಷಕ್ಕೆ ನೇಮಕವಾದವರು ೧೨ ವರ್ಷವಾದರೂ ಅಧಿಕಾರ ಬಿಟ್ಟು ಕೆಳಗೆ ಇಳಿಯುತ್ತಿಲ್ಲ. ಮಹಾಸಭೆ ಆದೇಶವಾಗಲೀ, ನ್ಯಾಯಾಲಯದ ಆದೇಶವಾಗಲೀ ಇಲ್ಲದೆ ಅನಧಿಕೃತವಾಗಿ ಸಮಿತಿ ಅಧಿಕಾರದಲ್ಲಿ ಮುಂದುವರೆದುಕೊಂಡು ಬರುತ್ತಿದೆ. ಇದು ಬೈಲಾ ಮತ್ತು ನ್ಯಾಯಕ್ಕೆ ವಿರುದ್ದವಾದದ್ದು ಎಂದು ಹೇಳಿದರು.
ಗೋಷ್ಟಿಯಲ್ಲಿ ನಿತ್ಯಾನಂದ ಶೆಟ್ಟಿ, ರಾಮಪ್ಪ ಟಿ., ಜನಾರ್ದನ ಆಚಾರಿ, ಗುರುಬಸವನ ಗೌಡ, ಪದ್ಮನಾಭ, ಮಂಜುನಾಥ, ಭೈರಪ್ಪ, ರಾಜೇಂದ್ರ ಸಿಂಗ್, ಮಂಜಪ್ಪ, ಪ್ರಜ್ವಲ್, ಸದಾನಂದ ಇನ್ನಿತರರು ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0