ಅ.3೦ ರಂದು ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ-ಪ್ರತಿಭಟನೆ
ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ.ಶ್ರೀನಿವಾಸ್ ಘೋಷಣೆ
ಆಪ್ತ್ಯ ನ್ಯೂಸ್ ಸಾಗರ(ಶಿವಮೊಗ್ಗ):
ಶಿವಮೊಗ್ಗ ಜಿಲ್ಲಾಡಳಿತ ರೈತರು ಹಾಗೂ ಜನಸಾಮಾನ್ಯರ ಪಾಲಿಗೆ ಸತ್ತು ಹೋಗಿದೆ. ಆದ್ದರಿಂದ ಅ.30ರಂದು ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಸಾಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲೆಯ ಜನಸಾಮಾನ್ಯರು ತಾಲ್ಲೂಕು ಕಚೇರಿಗೆ ಮತ್ತು ಉಪವಿಭಾ ಗಾಧಿಕಾರಿಗಳ ಕಚೇರಿಗೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಯಾವ ಸಮಸ್ಯೆಯ ಕುರಿತು ಎಷ್ಟೇ ಮನವಿ ಸಲ್ಲಿಸಿದರೂ ಕನಿಷ್ಠ ಸ್ಪಂದಿಸುವುದಿಲ್ಲ ಎಂದರು.
ತಾಲ್ಲೂಕು ಕಚೇರಿಯಲ್ಲಿ ಜನರ ಕೆಲಸ ಆಗುತ್ತಿಲ್ಲ ಎಂದು ಶಾಸಕರೇ ಅಸಮಾಧಾನ ವ್ಯಕ್ತಪಡಿಸಿರುವುದು ಆಡಳಿತ ನಿಷ್ಕ್ರಿಯಗೊಂಡಿರುವುದಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದರು.
ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮಲೆನಾಡು ರೈತ ಹೋರಾಟ ಸಮಿತಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಕೆಪಿಸಿ ಭೂಮಿ ಸಾಗುವಳಿ ಮಾಡುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ಥರುಗಳಿಗೆ ಭೂಸ್ವಾದೀನ ಕಾಯ್ದೆಯ ಪ್ರಕಾರ ಯಾವ ಉದ್ದೇಶಕ್ಕೆ ಭೂಮಿ ಸ್ವಾದೀನ ಮಾಡಿಕೊಂಡಿದ್ದಾರೋ ಸದರಿ ಉದ್ದೇಶಕ್ಕೆ 5 ವರ್ಷಗಳವರೆಗೂ ಬಳಕೆ ಮಾಡಿಕೊಳ್ಳದಿದ್ದಾಗ ಸದರಿ ಭೂಮಿಯನ್ನು ರೈತರಿಗೆ ಹಿಂತಿರುಗಿಸಬೇಕು ಎಂಬ ನಿಯಮದ ಪ್ರಕಾರ ಕೆಪಿಸಿ ಬಳಸದ ಭೂಮಿ ಹಿಂತಿರುಗಿಸುವಂತೆ ಇದುವರೆಗೂ ಕ್ರಮವಹಿಸಲಿಲ್ಲ ಎಂದು ದೂರಿದರು.
ಆದರೇ ಜಿಲ್ಲಾಧಿಕಾರಿಗಳು ೨೯-೧೧-೨೦೨೪ ರಂದು ಹಾಗೂ ೦೪-೦೭-೨೦೨೫ ರಂದು ಸಾಗರ-ಹೊಸನಗರ -ಸೊರಬ-ಶಿಕಾರಿಪುರ ತಹಶಿಲ್ದಾರರಿಗೆ ಪತ್ರ ಮುಖೇನ ಪರಿಶೀಲಿಸಿ ಕ್ರಮವಹಿಸುವಂತೆ ಲಿಖಿತ ಪತ್ರ ಕಳುಹಿಸಿದ್ದರೂ ಇದುವರೆಗೂ ತಾಲ್ಲೂಕು ಅಡಳಿತಗಳು ಯಾವುದೇ ಕ್ರಮವಹಿಸದೇ ರೈತ ವಿರೋಧಿ ವರ್ತನೆ ಪ್ರದರ್ಶಿಸುತ್ತಿವೆ ಎಂದು ದೂರಿದರು.
ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ಥರುಗಳ ಸಮಸ್ಯೆಗಳ ಕುರಿತು ದೇಶದ ಪ್ರಧಾನಿಯವರ ಕುಂದು ಕೊರತೆ ವಿಭಾಗಕ್ಕೆ ಪತ್ರ ಬರೆಯುವ ಮೂಲಕ ಕೇಂದ್ರ ಸರ್ಕಾರದ ಗಮನಸೆಳೆಯಲಾಗಿದೆ. ಪ್ರಧಾನಿ ಕಚೇರಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಕ್ರಮವಹಿಸುವಂತೆ ಪತ್ರ ಬಂದಿದ್ದರೂ ಜಿಲ್ಲಾಡಳಿತದಿಂದ ಸ್ಪಂದನೆಯಿಲ್ಲ ಎಂದರು.
ಜಿಲ್ಲೆಯ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಾಮರ್ಥ್ಯ ಹೊಂದಿಲ್ಲವಾದ್ದರಿಂದ ಅಧಿಕಾರಿಗಳ ತಾಳಕ್ಕೆ ಕುಣಿಯುವ ಕಾರಣ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದರು.
ರೈತರ ಹಾಗೂ ಸಂತ್ರಸ್ಥರುಗಳ ಕುರಿತು ದಿವ್ಯ ನಿರ್ಲಕ್ಷ್ಯ ವಹಿಸುತ್ತಿರುವ ಆಡಳಿತದ ವಿರುದ್ಧ ಕೆಪಿಸಿ ಬಳಕೆಯಾಗದ ಭೂಮಿ ಹಿಂತಿರುಗಿಸುವಂತೆ ಆಗ್ರಹಿಸಿ ಅ.೩೦ ರಂದು ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹೇಶ್, ದಯಾನಂದ, ಮಂಜಪ್ಪ, ಅಶೋಕ್ ಕೊಡ್ಸ, ಹೆಚ್.ಪಿ.ರಾಜಪ್ಪ, ರವಿ, ಮೋಹನ್,ರವಿಚಂದ್ರ ಬೇಸೂರು, ರಾಜ, ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



