ಅಕ್ಟೋಬರ್ ೩೧ರಂದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಟಾನದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ

Oct 30, 2025 - 18:50
 0  8
ಅಕ್ಟೋಬರ್ ೩೧ರಂದು ಮಾರಿಕಾಂಬಾ ದೇವಸ್ಥಾನ ನ್ಯಾಸ ಪ್ರತಿಷ್ಟಾನದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ

ಆಪ್ತ ನ್ಯೂಸ್ ಸಾಗರ:

ಸಾಗರದ ಮಾರಿಕಾಂಬಾ ದೇವಸ್ಥಾನದ ಹೊಸ ಆಡಳಿತ ಮಂಡಳಿ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಸಹಕಾರಿ ಸಂಘದ ರೀತಿಯಲ್ಲೇ ನವೆಂಬರ್ ೨೩ರಂದು ಚುನಾವಣೆ ನಡೆಸುವುದಾಗಿ ಜಿಲ್ಲಾ ನೋಂದಣಾಧಿಕಾರಿ ಪತ್ರ ಬರೆದಿದ್ದಾರೆ. ಇದರ ನಡುವೆಯೇ ಹಾಲಿ ನ್ಯಾಸ ಪ್ರತಿಷ್ಟಾನದ ವಿರುದ್ಧ ದಾಖಲಾಗಿರುವ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯೂ ಅಕ್ಟೋಬರ್ ೩೧ರಂದು ನಡೆಯಲಿದೆ.
ಹೌದು, ಕಳೆದ ಜುಲೈ ೧೧ರಂದು ಮುಂದಿನ ಮೂರು ತಿಂಗಳೊಳಗೆ ಚುನಾವಣೆ ನಡೆಸಿಹೊಸ ಆಡಳಿತ ಮಂಡಳಿ ಆಯ್ಕೆ ಮಾಡುವಂತೆ ಕಟ್ಟಪ್ಪಣೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಹಾಲಿ ನ್ಯಾಸ ಪ್ರತಿಷ್ಟಾನದ ಆಡಳಿತ ಮಂಡಳಿಯವರು ಜಾತ್ರೆಯ ಲೆಕ್ಕಪತ್ರವನ್ನ ಆಂತರಿಕ ಲೆಕ್ಕ ಪರಿಶೋಧಕರಿಂದ ತಪಾಸಣೆ ಮಾಡಿಸಿದ್ದರು.. ಅಲ್ಲದೆ ನಿಯಮದಂತೆ ವಾರ್ಷಿಕ ಮಹಾಸಭೆ ನಡೆಸಿ ಅದರ ವಿವರವನ್ನು ಮಂಡಿಸಿ, ಸರ್ವರ ಒಪ್ಪಿಗೆ ಪಡೆದುಕೊಂಡಿದ್ದರು.  ಅಂದಿನ ವರದಿಯನ್ನು ಡಿಆರ್‌ರವರಿಗೆ ತಲುಪಿಸಿ ಶೀಘ್ರದಲ್ಲಿ ಚುನಾವಣೆ ನಡೆಸುವಂತೆ ವಿನಂತಿಸುವುದಾಗಿಯೂ ಸಭೆಯಲ್ಲಿ ಹೇಳಿದ್ದರು.
ಇದಕ್ಕೆ ಅಂದು ಒಪ್ಪಿಕೊಂಡು ಬಂದಿದ್ದ ಮಾರಿಕಾಂಬಾ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಅಕ್ಟೋಬರ್ ೧೧ ಆಗುತ್ತಿದ್ದಂತೆ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನ್ಯಾಸಪ್ರತಿಷ್ಟಾನದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಕುರಿತು ಮಾತನಾಡಿದ ಮಾರಿಕಾಂಬ ನ್ಯಾಸ ಪ್ರತಿಷ್ಟಾನದ ಪ್ರಧಾನ ಕಾರ್ಯದರ್ಶಿ ಗಿರಿಧರ ಭಟ್, ೨೦೧೩ರಲ್ಲಿ ನಾವು ಅಧಿಕಾರಕ್ಕೆ ಬರುವ ಮೊದಲು ಮಾರಿಗುಡಿಯಲ್ಲಿ ನವರಾತ್ರಿ ಆಚರಣೆ ಮಾಡಿ ಗೊತ್ತಿರಲಿಲ್ಲ. ಮೂರು ಲಕ್ಷ ರೂಪಾಯಿ ತಂದು ಅದರಲ್ಲೂ ಒಂದು ಲಕ್ಷದ ಮೂವತ್ತು ಸಾವಿರದಷ್ಟನ್ನು  ಸಾಲದಲ್ಲೇ  ಮುಗಿಸಲಾಗುತ್ತಿತ್ತು. ಈ ಪದ್ಧತಿ ಬದಲಾಗಿದ್ದು, ನವರಾತ್ರಿಗೂ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬರುತ್ತಿದ್ದು, ವಾರ್ಷಿಕ ೨೦ ಲಕ್ಷಕ್ಕೂ ಹೆಚ್ಚು ಆದಾಯ ಬರುವಂತಾಗಿದೆ. ಜನರಿಗೂ ನಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಕಾರ್ಯ ಗೊತ್ತಾಗಿದೆ. ಲೆಕ್ಕ ಪತ್ರವೂ ಪಾರದರ್ಶಕವಾಗಿದೆ. ಕಚೇರಿಯನ್ನೂ ಶಿಸ್ತು ಬದ್ಧವಾಗಿಸಿದ್ದೇವೆ. ಕಳೆದ ೧೩ವರ್ಷದಿಂದ ಅಧಿಕಾರ ನಡೆಸಿದ್ದೇವೆ. ಆದರೆ ಅವ್ಯವಹಾರ ಮಾಡಿಲ್ಲ. ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ನಾವು ಏನು ತಪ್ಪು ಮಾಡಿದ್ದೇವೆಂದು ದಾಖಲೆ ಸಹಿತತೋರಿಸಲಿ. ಅದು ಬಿಟ್ಟು ಬರೀ ಮಾಧ್ಯಮಗಳೆದುರು ಬಂದು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಬೊಬ್ಬೆ ಹೊಡೆಯುವುದು ಒಳ್ಳೆಯ ನಡೆಯಲ್ಲ.  ಇವರೂ ಸಾರ್ವಜನಿಕ ಜೀವನದಲ್ಲಿರುವವರು.  ಸಂಘ-ಸAಸ್ಥೆಗಳಲ್ಲಿ ಹೇಗೆ ಕೆಲಸ ನಡೆಯುತ್ತೆ ಅನ್ನೋದೆಲ್ಲ ಗೊತ್ತಿದೆ. ನಡೆ-ನುಡಿಯಲ್ಲಿ ಬದ್ಧತೆ ಬೆಳೆಸಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದರು.
ಅಲ್ಲದೆ ನಾವು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿಲ್ಲ. ಅವರು ಹೇಳಿದಂತೆಯೇ ನಡೆದುಕೊಂಡಿದ್ದೇವೆ. ಮೂರು ತಿಂಗಳೊಳಗೆ ಲೆಕ್ಕ ಪತ್ರ ಪರಿಶೀಲನೆ, ಸರ್ವ ಸದಸ್ಯರ ಸಭೆ ನಡೆದಿದೆ. ಚುನಾವಣೆಗೂ ದಿನಾಕ ನಿಗದಿಯಾಗಿದೆ. ಇದಕ್ಕೆ ಪೂರಕವಾಗಿ ಹಲವು ಕೆಲಸಗಳನ್ನು ಎಲ್ಲ ಪದಾಧಿಕಾರಿಗಳು ಶಿರಸಾವಹಿಸಿ ಮಾಡುತ್ತಿದ್ದೇವೆ. ನಮ್ಮ ವಕೀಲರು ನ್ಯಾಯಾಲಯದಲ್ಲಿ ಸಮರ್ಪಕ ಉತ್ತರ ನೀಡುತ್ತಾರೆ. ಮುಂದೆ ಕೋರ್ಟ್ ನೀಡುವ ತೀರ್ಮಾನಕ್ಕೆ ಬದ್ಧರಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಷ್ಟಾನದ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷ ಸುಂದರ್ ಸಿಂಗ್ ಮೊದಲಾದವರಿದ್ದರು. 

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0