ಹೆತ್ತವಳು ಕೆಟ್ಟವಳಾದರೆ...........? ಹುಟ್ಟಿದವರ ತಪ್ಪೇನು
~ಮೋಹನ ನಾಯ್ಕ
(ಕೊನೆಯಸಾಲು)
ಬದುಕಿನಲ್ಲಿ ನಮ್ಮವರು ಯಾರು ಪರರು ಯಾರು ಎಂದು ಅರ್ಥಮಾಡಿಕೊಳ್ಳುವುದು ಈಗಿನ ಸಮಯದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿ ಉಳಿದು ಹೋಗಿದೆ. ನಾವು ಯಾರನ್ನೂ ನಮ್ಮವರು ಅಂತ ಅಂದುಕೊಂಡಿರುತ್ತೇವೋ ಅವರ ನಿಜವಾಗಿ ನಮ್ಮವರ ಅಥವಾ ಅವರು ನಮ್ಮವರ ತರ ನಾಟಕ ಮಾಡುತ್ತಾ ಇದ್ದಾರ ಎನ್ನುವ ಪ್ರಶ್ನೆ ಮನದಲ್ಲಿ ಮೂಡುವುದು ಸಹಜ.
ಕೆಲವೊಮ್ಮೆ ನಾವು ಕೆಲವೊಂದು ಘಟನೆಗಳನ್ನು ಕೇಳಿದಾಗ ನಮ್ಮ ಮನಸ್ಸಿಗೆ ಇಂತ ಭಾವನೆಗಳು, ಅಥವಾ ಆಲೋಚನೆಗಳು ಬರುವುದು ಸಹಜ ಗುಣ ಎಂದಾದರೂ ನೀವು ಕೇಳಿದ್ದೀರಾ ? ತಾಯಿ ಮಗಳಿಗೆ ನೀನು ಬೇಗ ಸತ್ತರೆ ಒಳ್ಳೆಯದಿತ್ತು, ನೀನು ನಡತೆ ಕೆಟ್ಟವಳು, ನೀನು ಯಾವುದಾದರೂ ವಾಹನದ ಅಡಿಯಾಗಿ ಸಾಯಿ, ನೀನು ನನಗೆ ಕಂಟಕ ಎಂದು ಹಿಡಿ ಶಾಪ ಹಾಕುವುದನ್ನು ? ನಾನೂ ಎಲ್ಲೂ ಕೇಳಿಲ್ಲ .ಏಕೆಂದರೆ ಯಾವ ತಂದೆ ತಾಯಿ ತಾನೇ ತನ್ನ ಮಗಳಿಗೆ ಕೆಟ್ಟದಾಗಲಿ ಎಂದು ಹಾರೈಸುತ್ತಾರೆ, ಪ್ರತಿಯೊಂದು ತಂದೆ ತಾಯಿಗಳು ಕೂಡ ತನ್ನ ಮಗ ಅಥವಾ ಮಗಳು ಒಂದು ಒಳ್ಳೆ ಸಂಸ್ಕಾರವನ್ನು ಕಲಿಯಲಿ ಮುಂದೆ ಒಳ್ಳೆಯ ಕೆಲಸಕ್ಕೆ ಸೇರಿಕೊಳ್ಳಲಿ ಅದರಿಂದ ನಮ್ಮ ಜೀವನವನ್ನು ಮುಂದೆ ನೋಡಿಕೊಳ್ಳುತ್ತಾರೆ, ನಾವು ಅವರಿಗೆ ಒಂದು ಒಳ್ಳೆ ಭವಿಷ್ಯವನ್ನು ನೀಡಿದ ಹಾಗೆ ಆಗುತ್ತದೆ ಎಂದು ಮನದಲ್ಲಿ ತಮ್ಮ ಮಕ್ಕಳ ಬಗ್ಗೆ ನೂರಾರು ಆಸೆಗಳ ದೊಡ್ಡ ಪರ್ವತವನ್ನು ಕಟ್ಟಿಕೊಂಡು ಇರುತ್ತಾರೆ. ಆದರೆ ನನ್ನ ಪ್ರಶ್ನೆ ಎಲ್ಲಾ ತಂದೆ ತಾಯಿಗಳು ಹಾಗೆ ಇರುತ್ತಾರೆಯೇ, ಮಗಳ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹೇಳುವುದನ್ನು ಕೇಳಿದ್ದೀರಾ, ತಾಯಿಗೆ ಮಗಳು ಕ್ರೂರಿಯಾಗಿ ಕಂಡದ್ದನ್ನು ನೀವು ಕೇಳಿದ್ದೀರಾ, ಇಲ್ಲ ಅಲ್ಲವೇ...... ನೂರರಲ್ಲಿ 95% ಜನ ನೀವು ಕೇಳಿರಲೂ ಸಾಧ್ಯವಿಲ್ಲ .... ಇನ್ನೂ ಉಳಿದ 5% ಜನರು ಒಂದು ಎರಡು ಗುಣವನ್ನು ಮಾತ್ರ ಕೇಳಿರುತ್ತೀರಿ ಆದರೆ ಎಲ್ಲಾ ಗುಣವನ್ನು ಹೊಂದಿರುವ ತಾಯಿಯನ್ನು ನೀವು ಕಂಡಿರುವುದು ತೀರಾ ಕಡಿಮೆ.
ಗಂಡು ಮಗುವಿನ ಮೋಹ:
ಕೆಲವೊಮ್ಮೆ ಕೆಲವು ತಂದೆ ತಾಯಿಗಳಿಗೆ ಗಂಡು ಮಕ್ಕಳ ಮೇಲೆ ಅತಿಯಾದ ಮೋಹ ಇರುತ್ತದೆ , ತಮಗೆ ಹುಟ್ಟುವ ಮೊದಲ ಮಗು ಗಂಡು ಮಗು ಆಗಿರಲಿ ಎನ್ನುವ ಒಂದು ಆಸೆ ಕೂಡ ಇರುತ್ತದೆ, ಆದರೆ ಅವರ ಆಸೆಗೆ ತಣ್ಣಿರಂತೆ ಅವರಿಗೆ ಹೆಣ್ಣು ಮಗುವಿನ ಜನನ ಆಗುತ್ತದೆ, ಕೆಲವರು ಗಂಡು ಮಗುವಿನ ಆಸೆಗೆ ಆಸ್ಪತ್ರೆಯಲ್ಲೇ ಮಕ್ಕಳನ್ನು ಬದಲಾಯಿಸಿಕೊಳ್ಳುವವರು ಇದ್ದಾರೆ, ಇನ್ನೂ ಕೆಲವರು ಆ ಮಕ್ಕಳನ್ನು ಅಲ್ಲೇ ಸಾಯಿಸುವವರು ಇದ್ದಾರೆ. ಇನ್ನು ಕೆಲವರಂತೂ ಆ ಮಗುವನ್ನು ತಂದು ಎಲ್ಲಾದರೂ ಅನಾಥವಾಗಿ ಎಸೆಯುವ ಹೀನ ಮನಸ್ಥಿತಿಯವರು ಕೂಡ ನಮ್ಮ ಜಗತ್ತಿನಲ್ಲಿ ಇದ್ದಾರೆ, ಆದರೆ ಇನ್ನೂ ಕೆಲವರಿದ್ದಾರೆ ಹುಟ್ಟಿದ್ದಾಳಲ್ಲ ದಂಡಪಿಂಡ ಹಾಗೆ ಇದ್ದು ಸಾಯಲಿ ಎಂದು ಹೇಳುವವರು, ಅವರ ಮನಸ್ಥಿತಿ ಹೇಗೆಂದರೆ ಇವಳು ನಮಗೆ ಹುಟ್ಟಿದ ಮಗಳು ಎಂದು ಹೇಳಿಕೊಳ್ಳಲು ಸಹ ಅವರಿಗೆ ಮುಜುಗರ ಆ ರೀತಿಯಾಗಿ ಅವರನ್ನು ದೂರುವುದು, ಅವರು ಮಾಡದೆ ಇರುವ ತಪ್ಪಿಗೆ ಅವರನ್ನು ದೂರುವುದು, ಅತಿಯಾದ ಹಿಂಸೆ ನೀಡುವುದು ಇದೆಲ್ಲ ಆಗಲು ಮೂಲ ಕಾರಣ ಗಂಡು ಮಗುವಿನ ಮೇಲೆ ಇರುವ ಅತಿಯಾದ ಒಲವು.
ಹಣದ ಪೊರೆ:
ಕೆಲವೊಮ್ಮೆ ಈ ಕಣ್ಣಿಗೆ ಪೊರೆ ಕಟ್ಟಿದಾಗ ಸರಿಯಾಗಿ ಏನು ಸಹ ಕಾಣುವುದಿಲ್ಲ ಹಾಗೆ ಇದು ಕೂಡ ಹಣದ ಪೊರೆ ಮನುಷ್ಯನ ಮನುಷ್ಯತ್ವವನ್ನು ಸಹ ಅಲ್ಲಿ ಸಾಯಿಸಿ ಬಿಡುತ್ತದೆ, ಮನುಷ್ಯನನ್ನು ಕ್ರೂರಿಯಾಗಿ ಪರಿವರ್ತಿಸಲು ಹಣ ಸಹ ಮುಖ್ಯ ಕಾರಣ ಆಗುತ್ತದೆ. ಕೆಲವೊಮ್ಮೆ ತಂದೆ ಕಡಿಮೆ ಸಂಪಾದನೆ ಮಾಡುತ್ತಿದ್ದು ತಾಯಿ ತಂದೆಗಿಂತ ಜಾಸ್ತಿ ಹಣ ಸಂಪಾದನೆ ಮಾಡುತ್ತಿದ್ದಾರೆ, ಅಥವಾ ತಾಯಿ ಸರಕಾರಿ ನೌಕರಿಯಲ್ಲಿ ಇದ್ದರೆ ಅವರಿಗೆ ಹಣ ಹಾಗೂ ಅಧಿಕಾರದ ಮದ ಹೆಚ್ಚಾಗಿರುತ್ತದೆ, ಅದು ಮಕ್ಕಳನ್ನು ಸಹ ಕೆಲಸಕ್ಕೆ ಬಾರದವರು ಎಂದು ದೂರುವ ಸ್ಥಿತಿಗೂ ಬರುತ್ತದೆ, ಕೆಲವೊಮ್ಮೆ ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಮೊದಲೇ ಇವರ ಹಿಂಸೆಯನ್ನು ತಡೆದುಕೊಂಡು ಬದುಕ್ಕಿತ್ತಿರುವ ಮಗಳು ಇವರ ಅಧಿಕಾರದ ದಾಹಕ್ಕೆ ನೆಮ್ಮದಿಯಾಗಿ ಊಟ ಮಾಡುವ ಹಾಗೂ ಸಹ ಇರುವುದಿಲ್ಲ ಮಾತುಗಳು ಎಷ್ಟು ಕಟುವಾಗಿರುತ್ತದೆ ಅಂದರೆ . ಅದನ್ನು ಮಗಳಿಗೆ ಹೆತ್ತವರು ಬಳಸುವ ಪದವ ಅಥವಾ ಯಾರೋ ಮಲತಾಯಿ ದೂರುವ ಹಾಗೆ ದೂರುವುದು, ಇದೆಲ್ಲಾ ಸಾಧ್ಯವಾಗುವುದು ಹಣದ ಪೊರೆ ಯಾವಾಗ ಕಣ್ಣಿಗೆ ಕಟ್ಟಿರುತ್ತದೆ ಆಗ ಮಾತ್ರ ಸಾಧ್ಯ.
ಕೆಲವೊಮ್ಮೆ ಅಂದುಕೊಳ್ಳುವುದು ತಾಯಿ ಕೂಡ ಮಗಳಿಗೆ ಇಷ್ಟೊಂದು ಕಟುವಾಗಿ ದುರುವಾಗ ಮಗಳು ಯಾರ ಬಳಿ ತನ್ನ ನೋವನ್ನ ಹೇಳಿಕೊಳ್ಳುವುದು. ಮಗಳಿಗೆ ಮದುವೆಗೆ ಮುನ್ನ ಯಾವ ಸ್ನೇಹಿತರು ಇಲ್ಲದಿದ್ದರೂ ತಾಯಿ ಮಾತ್ರ ಎಂದು ಜೊತೆಯಾಗಿ ಇರುತ್ತಾಳೆ ಅನ್ನುವ ಮಾತಿದೆ. ನನಗೆ ಕೆಲವೊಮ್ಮೆ ಆ ಮಾತು ನಿಜವೇ ಸುಳ್ಳ ಅನ್ನುವ ಪ್ರಶ್ನೆಯು ಅತಿಯಾಗಿ ಕಾಡುತ್ತದೆ.
ಜಗದಲ್ಲಿ ಯಾವ ತಾಯಿ ಕ್ರೂರಿಯಾಗಿ ತನ್ನ ಮಕ್ಕಳ ಮೇಲೆ ಸ್ವಲ್ಪವೂ ಪ್ರೀತಿ, ವಾತ್ಸ್ಯಲವನ್ನು ಇಟ್ಟುಕೊಳ್ಳದೆ ವರ್ತನೆ ತೋರುವಳೊ ಅವಳಿಗೂ ಪೂತನಿಗೂ ಯಾವುದೇ ವ್ಯತ್ಯಾಸ ಇಲ್ಲ ಪೂತನಿ ತಾಯಿಯ ರೂಪದಲ್ಲಿ ಬಂದು ಕೃಷ್ಣನಿಗೆ ವಿಷದ ಎದೆಹಾಲು ಕುಡಿಸಿದಳು, ಆದರೆ ಕೆಲವೊಮ್ಮೆ ನಿಜ ಜೀವನದಲ್ಲಿ ಪೂತನಿಯ ತರಹ ಮನಸ್ಸಿನಲ್ಲಿ ವಿಷ ತುಂಬಿಕೊಂಡು ಉಣ ಬಡಿಸುವವರು ತುಂಬಾ ಜನರಿದ್ದಾರೆ.
ತಾಯಿಯನ್ನು ದೇವರಾಗಿ ಕಾಣು ಎನ್ನುವ ಮಾತಿದೆ ಇಂತ ಸಂದರ್ಭದಲ್ಲಿ ಆ ಮಕ್ಕಳು ತಾಯಿಯನ್ನು ಯಾವ ರೀತಿಯಲ್ಲಿ ಕಾಣಬೇಕು, ಅವರಿಗೆ ತಾಯಿಯೇ ಸಾವ ಬಯಸುವವಳಾಗಿದ್ದರೆ.
What's Your Reaction?
Like
22
Dislike
0
Love
3
Funny
0
Angry
0
Sad
4
Wow
8



