ಮಲೆನಾಡಿನ ಹಳ್ಳಿಗಳು ಸ್ವರ್ಗಕ್ಕಿಂತ ಮಿಗಿಲು: ಚಿತ್ರನಟ ದೊಡ್ಡಣ್ಣ

*ಗೋವಿನ ಆರಾಧನೆ ಮಹತ್ವ ಸಾರಿದ ರೂಪಕ * ಮನಸ್ಸುಗಳ ಬೆಸೆದ ನಮ್ಮನೆ ಹಬ್ಬ

Dec 7, 2025 - 17:26
Dec 7, 2025 - 17:26
 0  123
ಮಲೆನಾಡಿನ ಹಳ್ಳಿಗಳು ಸ್ವರ್ಗಕ್ಕಿಂತ ಮಿಗಿಲು: ಚಿತ್ರನಟ ದೊಡ್ಡಣ್ಣ

ಆಪ್ತ ನ್ಯೂಸ್‌ ಶಿರಸಿ:

ಶುದ್ಧ ಪರಿಸರ ಹೊಂದಿರುವ ಹಳ್ಳಿಗಳು, ಇಲ್ಲಿ ನಡೆಯುವ ಸಾಂಸ್ಕೃತಿಕ ಹಬ್ಬಗಳು ಸ್ವರ್ಗಕ್ಕೆ ಸಮಾನವಾದ ವಾತಾವರಣ ಸೃಷ್ಟಿಸುತ್ತವೆ ಎಂದು ಪ್ರಸಿದ್ಧ ಚಲನಚಿತ್ರ ನಟ  ಎಸ್.ದೊಡ್ಡಣ್ಣ ಬಣ್ಣಿಸಿದರು.
ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಆಯೋಜಿಸಿದ್ದ ವಿಶ್ವಶಾಂತಿ ಸರಣಿಯ ೧೧ನೇ ಯಕ್ಷನೃತ್ಯ ರೂಪಕ ವಂದೇ ಗೋವಿಂದಮ್ ಲೋಕಾರ್ಪಣೆ, ನಮ್ಮನೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಕಾರ್ಯಕ್ರಮ ಒಳಗೊಂಡ ೧೪ನೇ ವರ್ಷದ ನಮ್ಮನೆ ಉದ್ಘಾಟಿಸಿ ಅವರು ಮಾತನಾಡಿದರು. ಬೆಂಗಳೂರಿನಂತಹ ಮಹಾನಗರಗಳು ಸಂಚಾರ ದಟ್ಟಣೆ,  ವಾಯಮಾಲಿನ್ಯದ ಕಾರಣಗಳಿಂದ ನರಕವಾಗುತ್ತಿವೆ. ಆ ನರಕದಿಂದ ಹೊರಬರಲು ಹಳ್ಳಿಗೆ ಬರಬೇಕು. ಹಳ್ಳಿಯ ವಾತಾವರಣದಲ್ಲೇ ನೆಮ್ಮದಿ ಲಭ್ಯ ಎಂದರು.  
ಜಗತ್ತಿನ ಮೂರೇ ಮೂರು ಸರ್ವಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಒಂದು. ಮಾತನಾಡಿದಂತೆ ಬರೆಯುವ ಲಿಪಿಯುಳ್ಳ, ಬರೆದಿದ್ದನ್ನು ಯಥಾವತ್ತಾಗಿ ಮಾತನಾಡುವ ಶಕ್ತಿಯುಳ್ಳ, ಸಂಧಿ, ಸಮಾಸ, ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ ಇರುವ ಶ್ರೀಮಂತ ಭಾಷೆ ಅದುವೇ ಕನ್ನಡ. ಹೀಗಿರುವಾಗ ಇಂಗ್ಲಿಷ ಹಾವಳಿಯಲ್ಲಿ ನಮ್ಮ ಮಾತಿನಲ್ಲಿ ಕನ್ನಡ ಶಬ್ದಗಳನ್ನು  ಹುಡುಕಾಡುವ ಸಂದರ್ಭ ಬರಬಾರದು ಎಂದರು.  


ಪ್ರಸಿದ್ಧ ರಂಗಭೂಮಿ ಕಲಾವಿದೆ, ಗಾಯಕಿ ಬಿ.ಜಯಶ್ರೀ ಮಾತನಾಡಿ, ಹಳ್ಳಿಗರಿಗೆ ಟಿವಿನೇ ಬೇಕು ಅಂತಿಲ್ಲ. ಇಂತಹ ಸಂಸ್ಕೃತಿಯುಕ್ತ ಕಾರ್ಯಕ್ರಮ ಸಂಘಟಿಸಿದರೆ ಮನಃಸ್ಪೂರ್ತಿಯಾಗಿ ಪಾಲ್ಗೊಳ್ಳುತ್ತಾರೆ. ಇದಕ್ಕೆ ಬೆಟ್ಟಕೊಪ್ಪದಲ್ಲಿ ಆಯೋಜಿಸಿರುವ ನಮ್ಮನೆ ಹಬ್ಬವೇ ಉದಾಹರಣೆ.  ಹಳ್ಳಿಗರನ್ನೆಲ್ಲ ಒಂದೆಡೆ ಸೇರುವಂತಹ ಇಂಥ ನಮ್ಮನೆ ಹಬ್ಬವನ್ನು ನಮ್ಮೂರಿನಲ್ಲೂ ಮಾಡಬೇಕು ಅನಿಸಿದೆ ಎಂದರು.
ತುಳಸಿ ಹೆಗಡೆ ಪ್ರದರ್ಶಿಸಿದ ಯಕ್ಷನೃತ್ಯ ರೂಪಕದಲ್ಲಿ ಮದ್ದಲೆ, ಚಂಡೆ, ಹಾಡುಗಾರಿಕೆ ಜತೆಯಲ್ಲಿ ಅದಕ್ಕಿಂತ ಹೆಚ್ಚಾಗಿ ಸೊಗಸಾದ ಅಭಿನಯ, ಹೆಜ್ಜೆ ಮನಸ್ಸನ್ನು ಹಿಡಿದುಕೊಂಡಿತು ಎಂದು ಶ್ಲಾಘಿಸಿದರು.
ನಂದು ಕೆಮಿಕಲ್ಸ್ ಸಂಸ್ಥಾಪಕ ರಾಮನಂದನ ಹೆಗಡೆ ಮಾತನಾಡಿ, ಯಾವುದೇ ಉದ್ಯಮ ಆರಂಭಿಸಿದಾಗ ಸೋಲು ಬಂದರೆ ಧೈರ್ಯಗೆಡಬಾರದು. ಕ್ಷಮತೆ ಹೆಚ್ಚಿಸಿಕೊಳ್ಳಬೇಕು. ಮೌಲ್ಯ ಆಧಾರಿತವಾಗಿ ಉದ್ಯಮ ನಡೆಸಿದರೆ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಇಂಥ ನಮ್ಮನೆ ಹಬ್ಬ ಅರ್ಥಪೂರ್ಣವಾಗಿ ನಮ್ಮ ನಮ್ಮ ಮನೆಹಬ್ಬ ಎಂದರು. ಕಿಶೋರ ಪುರಸ್ಕಾರ ಪಡೆದ  ತೇಜಸ್ವಿ ಗಾಂವಕರ್ ಮಾತನಾಡಿದರು.
ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿದರು. ತುಳಸಿ ಹೆಗಡೆ, ರಮೇಶ ಹೆಗಡೆ ಹಳೆಕಾನಗೋಡ, ನಾಗರಾಜ ಜೋಶಿ ಸೋಂದಾ ಸನ್ಮಾನಪತ್ರ ವಾಚಿಸಿದರು.  ಚಿನ್ಮಯ ಕೆರೆಗದ್ದೆ ಪ್ರಾರ್ಥಿಸಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ವಂದಿಸಿದರು. ನಾರಾಯಣ ಭಾಗ್ವತ ನಿರೂಪಿಸಿದರು.
ಇದಕ್ಕೂ ಮೊದಲು ಕಲಾವಿದೆ ತುಳಸಿ ಹೆಗಡೆ ಇವಳಿಂದ ವಿಶ್ವಶಾಂತಿಯ   ೧೧ನೇ ಯಕ್ಷನೃತ್ಯ ರೂಪಕ ಪ್ರದರ್ಶನ ಗೊಂಡಿತು.
ಶ್ರೀಧರರ ಕುರಿತು ನಡೆದ ಭಕ್ತಿಸಂಗೀತದಲ್ಲಿ ವಿಶ್ವೇಶ್ವರ ಭಟ್ಟ ಖರ್ವಾ ಗಾಯನ ಭಕ್ತಿಭಾವ ಮೂಡಿಸಿತು. ಗುರುರಾಜ ಆಡುಕಳ ತಬಲಾ, ಅಜಯ ವರ್ಗಾಸರ ಹಾರ್ಮೊನಿಯಂ, ಅನಂತಮೂರ್ತಿ ಹೆಗಡೆ ತಾಳದ ಸಾಥ್ ನೀಡಿದರು. 


ಗೋವಿನ ಮಹತ್ವ ಸಾರಿದ ನೃತ್ಯಾಭಿನಯ....

ವೇದಿಕೆಯಲ್ಲಿ ಒಂದೂವರೆ ತಾಸು ಕಾಲ ನಿರಂತರವಾಗಿ ಯಕ್ಷನೃತ್ಯರೂಪಕ ಪ್ರದರ್ಶಿಸಿದವಳು ಯುವ ವಯಸ್ಸಿನಲ್ಲಿಯೇ ಉನ್ನತ ಸಾಧನೆ ಮಾಡಿದ  ಪ್ರತಿಭಾವಂತ ಕಲಾವಿದೆ ತುಳಸಿ ಹೆಗಡೆ. ಗೋವಿನ ಮಹತ್ವ ಸಾರುವ ವಂದೇ ಗೋವಿಂದಮ್ ನೃತ್ಯ ರೂಪಕದ ಮೂಲಕ ನೃತ್ಯ ಅಭಿನಯವನ್ನು ಪ್ರಬುದ್ಧವಾಗಿ ತೋರ್ಪಡಿಸಿ ಮನಗೆದ್ದಳು.  ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ ಯಲ್ಲಾಪುರ, ವಿಘ್ನೇಶ್ವರ ಗೌಡ ಕೆಸರಕೊಪ್ಪ, ಪ್ರಸಾಧನದಲ್ಲಿ ವೆಂಕಟೇಶ ಬೊಗ್ರಿಮಕ್ಕಿ ಸಹಕರಿಸಿದರು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜರ ಸಾಹಿತ್ಯದಲ್ಲಿ ರೂಪಕ ಮೂಡಿಬಂತು. ರಮೇಶ ಹೆಗಡೆ ಹಳೆಕಾನಗೋಡರ ಮೂಲ ಕಲ್ಪನೆ, ವಿನಾಯಕ ಹೆಗಡೆ ಕಲಗದ್ದೆ ನೃತ್ಯ ನಿರ್ದೇಶನ, ವಿ. ಉಮಾಕಾಂತ ಭಟ್ಟ ಕೆರೇಕೈ ಗದ್ಯ ಸಾಹಿತ್ಯ, ಡಾ. ಶ್ರೀಪಾದ ಭಟ್ ಹಿನ್ನೆಲೆ ಧ್ವನಿ, ಜಿ.ಎಸ್.ಭಟ್ ತಾಳಾಭ್ಯಾಸ,  ಉದಯ ಪೂಜಾರಿ ಧ್ವನಿಗ್ರಹಣ ಒಳಗೊಂಡ ರೂಪಕ ಆಪ್ತವಾಗಿ ಮೂಡಿಬಂತು.ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ ಆಶಯದ ನುಡಿಗಳನ್ನಾಡಿದರು.


ಮೊಬೈಲ್‌ನಿಂದ ದೂರವಾಗಲು ಹಬ್ಬ ಬೇಕು...
ನಾವು ಮೊಬೈಲ್ ಎಂಬ ಚಕ್ರವ್ಯೂಹದಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಅದಿಲ್ಲದೇ ಒಂದು ಕ್ಷಣವೂ ಬದುಕಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಅಕ್ಕಪಕ್ಕ ಕುಳಿತರೂ ಮಾತಿಲ್ಲ ಕಥೆಯಿಲ್ಲ ಎನ್ನುವಂತಾಗಿದೆ. ಅದರಿಂದಾಗುವ ಹಿಂಸೆ ಅಷ್ಟಿಷ್ಟಲ್ಲ. ಮೊಬೈಲ್‌ನಿಂದ ದೂರವಾದರೆ ನಮ್ಮ ಇಡೀ ಸಮಾಜ, ದೇಶ ಬಹುತೇಕ ಸರಿ ಹೋಗುತ್ತದೆ. ಅದಕ್ಕೆ ನಮ್ಮನೆ ಹಬ್ಬ, ನೆಟ್‌ವರ್ಕ ಇಲ್ಲದ ಹಳ್ಳಿಗಳೇ ಜೀವಾಳ.
 ಬಿ.ಜಯಶ್ರೀ, ರಂಗಸಾಧಕಿ


ಆಪ್ತವಾಗಿ ಮೂಡಿಬಂದ ಪ್ರಶಸ್ತಿ ಪ್ರದಾನ...
ಹಬ್ಬದಲ್ಲಿ ವಿಶೇಷವಾಗಿ ನಮ್ಮನೆ ಪ್ರಶಸ್ತಿ, ಪುರಸ್ಕಾರ ಪ್ರದಾನ ಆಪ್ತವಾಗಿ ಮೂಡಿಬಂತು. ರಂಗಭೂಮಿ ಕಲಾವಿದೆ ಬಿ.ಜಯಶ್ರೀ,  ಹುಬ್ಬಳ್ಳಿಯ ನಂದು ಕೆಮಿಕಲ್ಸ್ ಸಂಸ್ಥಾಪಕ ರಾಮನಂದನ ಹೆಗಡೆ ಅವರಿಗೆ ನಮ್ಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯುವ ಲೇಖಕ, ಕಲಾವಿದ ತೇಜಸ್ವಿ ಗಾಂವಕರಗೆ ನಮ್ಮನೆ ಕಿಶೋರ ಪುರಸ್ಕಾರ ನೀಡಲಾಯಿತು. ನಟ ಎಸ್.ದೊಡ್ಡಣ್ಣ ಪ್ರಶಸ್ತಿ ಪ್ರದಾನ ನೆರವೇರಿಸಿದರು.

ನಮ್ಮನೆ ಹಬ್ಬದಲ್ಲಿ ಶಾಸಕ ಭೀಮಣ್ಣ ನಾಯ್ಕ ಎರಡು ತಾಸಿಗೂ ಹೆಚ್ಚು ಕಾಲ ವೇದಿಕೆ ಮುಂಭಾಗದಲ್ಲಿ ಕುಟುಂಬ ಸಮೇತ ಕುಳಿತು ಕಾರ್ಯಕ್ರಮ ವೀಕ್ಷಿಸಿದ್ದು ವಿಶೇಷವಾಗಿತ್ತು.ಶಾಸಕ ಶಿವರಾಮ ಹೆಬ್ಬಾರ, ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ರಾಮಚಂದ್ರಾಪುರ ಮಠದ ಶಾಸನ‌ ತಂತ್ರದ ಅಧ್ಯಕ್ಷ  ಮೋಹನ ಹೆಗಡೆ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ,  ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಗಣ್ಯರು, ಸಾಧಕರು, ಚಿತ್ರದುರ್ಗ, ಕೊಪ್ಪಳ, ಮಂಗಳೂರು, ಗದಗ, ದಾವಣಗೆರೆ, ಸಾಗರ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆಯ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಬಿ.ಜಯಶ್ರೀ ಅವರ ಹಾಡು ಸಮಾರಂಭದ ರಂಗೇರಿಸಿತು.


ನಾವು ರಂಗದಲ್ಲಿ ನಾಟಕ ಮಾಡುವಾಗ ಪಾತ್ರವನ್ನು ನಿಷ್ಠೆಯಿಂದ, ಆಗಿರುವ ಘಟನೆಗಳನ್ನು ನೈಜತೆ, ಸಹಜತೆ, ಭಾವನೆಗಳೊಂದಿಗೆ ಜನರ ಮುಂದಿಡುತ್ತೇವೆ.
ಬಿ.ಜಯಶ್ರೀ, ಹಿರಿಯ ರಂಗಭೂಮಿ ಕಲಾವಿದೆ

**************

ಕೊರೊನಾ ಕಾಲದಲ್ಲಿ ಕೋವಿಶಿಲ್ಡ್ ಲಸಿಕೆ ಉತ್ಪಾದಿಸುವ ಸಂದರ್ಭದಲ್ಲಿ  ಸೀರಂ ಇನ್‌ಸ್ಟಿಟ್ಯೂಟ್‌ನವರು ಇಡೀ ಜಗತ್ತಿನಲ್ಲಿ ಉತ್ತಮ ಗುಣಮಟ್ಟದ ಸೋಡಿಯಂ ಕ್ಲೊರೇಡ್ ಪೂರೈಕೆಗೆ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದರು.
-ರಾಮನಂದನ ಹೆಗಡೆ,
ಸಂಸ್ಥಾಪಕ ನಂದು ಕೆಮಿಕಲ್ಸ್, ಹುಬ್ಬಳ್ಳಿ

*************
ನಮ್ಮನೆ ವೇದಿಕೆ ಅಕ್ಕರೆ, ಅಕ್ಷರ, ಆವಿಷ್ಕಾರದ ಕೇಂದ್ರ‌.. ನಮ್ಮನೆ ಹಬ್ಬ. ಇದು ನನಗೆ ಸ್ಪೂರ್ತಿ, ಪ್ರೇರಣೆ.
-ತೇಜಸ್ವಿ ಗಾಂವಕರ,
ಯುವ ಲೇಖಕ

*****************
ಯಾವುದೇ ಆಡಂಬರವಿಲ್ಲದೇ ಸಾಂಪ್ರದಾಯಿಕವಾಗಿ ಕಳೆದ ಹದಿನಾಲ್ಕು ವರ್ಷಗಳಿಂದ ನಮ್ಮನೆ ಹಬ್ಬ ನಡೆಸಿಕೊಂಡು ಬಂದಿದ್ದೇವೆ. ಈ ಬಾರಿ ಪ್ರದರ್ಶನಗೊಂಡ ವಂದೇ ಗೋವಿಂದಮ್ ರೂಪಕ ಮತ್ತೆ ಹಳ್ಳಿಗೆ ಹೋಗಿ ಎಂಬ ಸಂದೇಶ, ಕರೆಯನ್ನು ಕೊಡುವಂತಿದೆ.
-ರವೀಂದ್ರ ಭಟ್ಟ,
ಅಧ್ಯಕ್ಷ, ವಿಶ್ವಶಾಂತಿ ಸೇವಾ  ಟ್ರಸ್ಟ್

What's Your Reaction?

Like Like 3
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 2