ಅರ್ಜಿ ಸಲ್ಲಿಸಿದವರಿಗೆಲ್ಲ ಪ್ರತ್ಯೇಕ ನಿವೇಶನ ಕೊಡುವುದು ಕಷ್ಟ: ಗೋಪಾಲಕೃಷ್ಣ

ಆಪ್ತ ನ್ಯೂಸ್ ಸಾಗರ:
ಆಶ್ರಯ ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಪ್ರತ್ಯೇಕ ನಿವೇಶನ ಕೊಡಲು ಕಷ್ಟ. ಹೀಗಾಗಿ ಅಂಥವರಿಗೆ ನಿವೇಶನ ಜೊತೆಗೆ ಗುಂಪು ಮನೆ ನಿರ್ಮಾಣಕ್ಕೆ ಚಿಂತಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಶಾಸಕರ ಅಧ್ಯಕ್ಷತೆಯಲ್ಲಿ ನಗರಸಭೆಯಲ್ಲಿ ಗುರುವಾರ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿ, ಹಿಂದೆ ಆಶ್ರಯ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರ ಅರ್ಜಿಯನ್ನು ನಿವೇಶನ ಕೊಡುವ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ಎಲ್ಲರಿಗೂ ಪ್ರತ್ಯೇಕ ಮನೆ ಸಿಗದಿದ್ದರೂ ಗುಂಪು ಮನೆ ನಿರ್ಮಿಸಿ, ಎಲ್ಲರಿಗೂ ಸೂರು ಕಲ್ಪಿಸುವ ಉದ್ದೇಶ ಹೊಂದಿದ್ದೇವೆ. ಅಂಥವರಿಗೆ ನಿವೇಶನ ನೀಡಲು ಕೆಲವೆಡೆ ಅಗತ್ಯವಾದ ಜಾಗ ಗುರುತಿಸಲಾಗಿದ್ದು, ಮಂಜೂರಾತಿಗೆ ಕಳಿಸಲಾಗುತ್ತದೆ ಎಂದರು.
ಈ ಮೊದಲು ಆಶ್ರಯ ನಿವೇಶನ ಪಡೆದಿದ್ದು ಮನೆಕಟ್ಟದೆ ನಿವೇಶನ ಹಾಗೆ ಬಿಟ್ಟಿದ್ದಾರೆ. ಆಶ್ರಯ ನಿವೇಶನ ಪಡೆದು ಯರ‍್ಯಾರು ಮನೆ ಕಟ್ಟಿಲ್ಲವೋ ಅಂತಹವರಿಗೆ ನೋಟಿಸ್ ನೀಡಲು ತೀರ್ಮಾನಿಸಲಾಗಿದೆ. ಸರ್ಕಾರ ನೀಡಿದ ಉದ್ದೇಶ ಈಡೇರಿಸದೆ ಹೋದಲ್ಲಿ ಅಂತಹವರಿಗೆ ನಿವೇಶನ ಏಕೆ. ವಾಯಿದೆಯೊಳಗೆ ಮನೆ ಕಟ್ಟದೆ ಇದ್ದರೆ ಅದನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಆಶ್ರಯ ಸಮಿತಿ ಸದಸ್ಯ ಮಕ್ಬೂಲ್, ಪರಿಮಳ, ಶಿವಕುಮಾರ್ ಮೊದಲಾದವರಿದ್ದರು.
What's Your Reaction?






