ಇದು ನನ್ನ ಸೇವೆ ಮುಗಿಸುವ ಸಮಯ: ಹೋಗಿ ಬರುತ್ತೇನೆ; ನಮಸ್ಕಾರ

Oct 1, 2025 - 21:56
 0  37
ಇದು ನನ್ನ ಸೇವೆ ಮುಗಿಸುವ ಸಮಯ: ಹೋಗಿ ಬರುತ್ತೇನೆ; ನಮಸ್ಕಾರ

ಲೇಖನ- ವಿಂಗ್ ಕಮಾಂಡರ್ ಸುದರ್ಶನ್

****

ಮಿಕೋಯನ್ ಗುರೇವಿಚ್ ( MIkoyan Gurevich) ಕುಟುಂಬಕ್ಕೆ ಸೇರಿದ ನನ್ನನ್ನು ಚುಟುಕಾಗಿ MIG-21 ಎನ್ನುತ್ತಾರೆ. ಅಂದಿನ ಸೋವಿಯತ್ ಒಕ್ಕೂಟದಲ್ಲಿ ಹುಟ್ಟಿದ ನಾನು, ನಿಜ ಹೇಳುಬೇಕೆಂದರೆ ನಾನು ಬೆಳೆದಿದ್ದು, ನನ್ನ ಜೀವನದ ಬಹುತೇಕವನ್ನು ಕಳೆದಿದ್ದು ಭಾರತದಲ್ಲಿ, ಭಾರತೀಯ ವಾಯುಸೇನೆಯಲ್ಲಿ. ಅಂದಿನ ಕಾಲದಲ್ಲಿ ಶಬ್ದದ ವೇಗವನ್ನು ಭೇದಿಸಿ ಹಾರುತ್ತಿದ್ದ ಉಕ್ಕಿನ ಹಕ್ಕಿ ಅಂದ್ರೇ ನಾನೇ ಅಂತಾ ಈಗಲೂ ಎದೆಯುಬ್ಬಿಸಿಕೊಂಡು ಹೇಳ ಬಲ್ಲೆ. 1963 ರ ಸಮಯವದು ಭಾರತದ ಅಂಬಾಲ ವಾಯುನೆಲೆಗೆ ಮೊಟ್ಟ ಮೊದಲ ಸಲ ನಾನು ಬಂದಿಳಿದಾಗ ಅಲ್ಲಿನ ಪೈಲಟ್ಟುಗಳು ನನ್ನನ್ನು ಹೇಗೆ ಆಶ್ಚರ್ಯಭರಿತ ಕಣ್ಣುಗಳಿಂದ ನೋಡಿತ್ತಿದ್ದರು ಅಂದ್ರೇ….ಈಗಲೂ ನೆನಪಿದೆ, ಯಾಕೆ ಅಂದ್ರೇ ಅಷ್ಟೊತ್ತಿಗಾಗಲೇ ನಾನು ಹಾರುವ ಬುಲೆಟ್ ಎನ್ನುವ ಖ್ಯಾತಿ ಪಡೆದಿದ್ದೆ, ಜಗತ್ತಿನ ಶ್ರೇಷ್ಠ ಯುದ್ಧವಿಮಾನಗಳಲ್ಲಿ ಒಂದು ಎಂದು ಹೆಸರವಾಸಿಯಾಗಿದ್ದೆ.
ಇನ್ನೂ ಅದೇ ತಾನೆ ವೈಮಾನಿಕ ತರಬೇತಿ ಮುಗಿಸಿಕೊಂಡು ಬಂದ ಯುವ ಪೈಲಟ್ಟುಗಳು ಮೊಟ್ಟಮೊದಲ ಸಲ ನನ್ನ ಕಾಕ್ಪಿಟ್ಟಿನಲ್ಲಿ ಅಂಜುತ್ತಾ, ಅಳುಕುತ್ತಾ, ಸಣ್ಣಗೆ ಬೆವರುತ್ತಾ ಕುಳಿತಾಗ ನಾನು ಮುಸಿ ಮುಸಿ ನಗುತ್ತ ಸ್ವಾಗತಿಸುತ್ತಿದ್ದೆ. ಯಾವಾಗ ನನ್ನ ಎಂಜಿನ್ ಮತ್ತು Afterburner ಗರ್ಜಿಸಲು ಶುರು ಮಾಡಿದ ಕೂಡಲೇ ರೋಮಾಂಚನಗೊಳ್ಳುತ್ತಿದ್ದರು. ಆಕಾಶಕ್ಕೇರುತ್ತಲೇ ನನ್ನ ಶಕ್ತಿ ಪ್ರದರ್ಶನದಿಂದ ಅವಾಕ್ಕಾಗಿ ಬಿಡುತ್ತಿದ್ದರು. ಹಿರಿಯ ನುರಿತ ಪೈಲಟ್ಟುಗಳು ನನ್ನ ಸಾಮರ್ಥ್ಯದ ಬಗ್ಗೆ ಅರಿವು ಮಾಡುತ್ತಲೇ ಮುಕ್ತವಾಗಿ, ಆತ್ಮವಿಶ್ವಾಸದಿಂದ ಹಾರಿಸತೊಡಗಿದರು. ಜೋರಾಗಿ ಮೇಲೇರುವದು, ಬಲವಾಗಿ ತಿರುಗಿಸುವುದು, ಆಕಾಶದಲ್ಲೇ ಉರುಳಿಸುವುದು, ಏರೋಬಾಟಿಕ್ಸ್ ಮಾಡುವುದು ಎಲ್ಲವನ್ನೂ ಕಲಿತುಕೊಂಡರು. ಇಷ್ಟೆಲ್ಲಾ ಮಾಡಿ ಭೂ ಸ್ಪರ್ಷ ಮಾಡಿದಾಗ ಯುದ್ಧ ಗೆದ್ದು ಬಂದರಂತೆ ಅವರ ಮುಖದಲ್ಲಿನ ಉತ್ಸಾಹ ನೋಡಿದಾಗ ನನಗೂ ಹೆಮ್ಮೆ ಎನಿಸುತ್ತಿತ್ತು , ಅಂತೂ ಚಿಗುರು ಮೀಸೆಯ ಹುಡುಗರು ಆಕಾಶದ ವೀರ ಯೋಧರಾಗಲು ಸಜ್ಜಾಗುತ್ತಿದ್ದಾರೆ ಎನಿಸುತ್ತಿತ್ತು. ಇಳಿದಾಗ ಮತ್ತೊಮ್ಮೆ ನನ್ನ ಮೈದಡವಿ “ ಥ್ಯಾಂಕ್ಯೂ “ ಎಂದು ಹೇಳಿ, ಇತರೆ ಪೈಲಟ್ಟುಗಳಿಗೆ ತಮ್ಮ ಅನುಭವವನ್ನು ಹೇಳಲು ಹೋಗುತ್ತಿದ್ದರು.
ಭಾರತದ ವಾಯುಸೇನೆಯನ್ನು ಸೇರಿಕೊಂಡು ಇನ್ನೂ ಎರಡು ವರ್ಷವಾಗಿತ್ತಷ್ಟೇ ನನ್ನ ಮತ್ತು ನನ್ನ ಪೈಲಟ್ಟುಗಳ ಸಂಪೂರ್ಣ ಸಾಮರ್ಥ್ಯ ವನ್ನು ಪರೀಕ್ಷಿಸುವ ಸಂದರ್ಭ ಬಂದೇಬಿಟ್ಟಿತು, ಅದೇ…ಭಾರತ ಮತ್ತು ಪಾಕಿಸ್ತಾನದ ನಡುವೆ 1965 ರಲ್ಲಿ ನಡೆದ ಯುದ್ಧ. ಈ ಯುದ್ಧದಲ್ಲಿ ಪ್ರಮುಖವಾಗಿ ನಾನು ಮತ್ತು ನನ್ನ ಪೈಲಟ್ಟುಗಳು ಭಾರತದ ವಾಯು ಮಂಡಲದೊಳಗೆ ಯಾವ ಪಾಪಿ ಪಾಕಿಸ್ಥಾನಿಗಳೂ ನುಸುಳದಂತೆ ವಾಯು ರಕ್ಷಣಾ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸಿದೆವು. ಗಡಿ ಉಲ್ಲಂಘನೆ ಮಾಡಿದವರನ್ನು ಶರವೇಗದಲ್ಲಿ ಅಟ್ಟಿಸಿಕೊಂಡು ಹೊಡೆದೋಡಿಸುತ್ತಿದ್ದೆವು. ಈ ಯುದ್ಧದಲ್ಲಿ ನನಗೇ ಆಶ್ಚರ್ಯವಾಗುವಂತೆ ನನ್ನ ಸಾಮರ್ಥ್ಯದ, ಶಕ್ತಿಯ ಪ್ರದರ್ಶನ ನಡೆದು ಹೋಯಿತು. ಇದರಿಂದ ಆಗಿದ್ದ ಲಾಭವೇನೆಂದರೆ ರಷ್ಯಾದಿಂದ ಇನ್ನೂ ಹೆಚ್ಚು ಹೆಚ್ಚಾಗಿ MIG-21 ಗಳು ಬರಲಾರಂಬಿಸಿ ನನ್ನ ಬಳಗ ಹೆಚ್ಚಾಗುತ್ತಾ ಹೋಯಿತು. ಅದೂ ಸಾಕಾಗಲ್ಲಾ ಅಂತಾ ಇಲ್ಲೇ ಭಾರತದ ಬೆಂಗಳೂರು, ನಾಸಿಕ್ ಮತ್ತು ಒಡಿಯಾದ ಕೊರಾಪುಟ್
HAL ಕಾರ್ಖಾನೆಗಳಲ್ಲಿ ನಮ್ಮ ಬಳಗದ ಸೃಷ್ಟಿಯಾಗಲಾರಂಭಿಸುತು. ನೋಡು ನೋಡುತ್ತಲೇ ಎಂಟು ನೂರಕ್ಕೂ ಹೆಚ್ಚು ಸದಸ್ಯರ ಬೃಹತ್ ಕುಟುಂಬವಾಯಿತು ನಮ್ಮ MIG-21 ಗಳದ್ದು.
ಕಾಲಚಕ್ರ ಉರುಳುತ್ತಿದ್ದಂತೆ ಹೊಸ ತಲೆಮಾರಿನ ವಿಮಾನಗಳು ಆಗಮಿಸಲಾರಂಭಿಸಿದವು. ಮಿರಾಜ್ -2000, ಸುಖೋಯ್-30, ರಫೇಲ್ ಮತ್ತು ಆತ್ಮನಿರ್ಭರ ಭಾರತದ ಕನಸಿನ ಕೂಸಾದ ತೇಜಸ್. ಇವುಗಳ ಆಗಮನದಿಂದ ನನಗೇನನ್ನಿಸಿತು? ನನ್ನನ್ನು ಮೂಲೆ ಗುಂಪಾಗಿಸಲಾಗುತ್ತಿದೆಯೇ? ಖಂಡಿತಾ ಇಲ್ಲ. ಹಲವಾರು ದಶಕಗಳ ತನಕ ನಾನು ಭಾರತದ ವಾಯುಮಂಡಲವನ್ನು ರಕ್ಷಿಸಿದ್ದೇನೆ ಎನ್ನುವ ತೃಪ್ತಿ ಇದೆ. ನನ್ನ ಪ್ರಾಯ ಮುಗಿದು ಹೋಯಿತು, ಈ ಇಳಿವಯಸ್ಸಿನಲ್ಲಿ ಇನ್ನೆಷ್ಟು ಹಾರಲೀ, ಇದು ಹೊಸ ಪೀಳಿಗೆಯ ಸಮಯ.
ನಾನು ದಶಕಗಳ ಕಾಲ ಭಾರತದೆ ಆಕಾಶವನ್ನು ಕಾಯುವ ಕೆಲಸ ಮಾಡಿದೆ. ಈಗ ನನ್ನ ಕಾಲ ಮುಗಿಯುತ್ತಿದ್ದೆ. ಇದು ಹೊಸ ತಲೆಮಾರಿಗೆ ಸೇರಿದ ಯುಗ. ಆದರೂ, ನನ್ನ ಕಾಕ್ಪಿಟ್‌ನಲ್ಲಿ ಮೊದಲ ಬಾರಿ ಹಾರಲು ಕಲಿತ ಪೈಲಟ್‌ಗಳು ವಯಸ್ಕರಾದಾಗ — ಏರ್ ಕಮೋಡೋರ್‌ಗಳು, ಏರ್ ಮಾರ್ಷಲ್‌ಗಳಾದಾಗ — ಅವರು ಮರಳಿ ಬಂದು ನನ್ನನ್ನು ನೋಡುತ್ತಿದ್ದಾಗ ಹಳೆಯ ಗುರುವನ್ನು ಭೇಟಿ ಮಾಡಿದವರಂತೆ ಭಾವುಕರಾಗುತ್ತಿದ್ದರು. ಆ ಕ್ಷಣದಲ್ಲಿ, ನನಗೂ ಒಂದು ರೀತಿಯ ಸಾರ್ಥಕತೆಯ ಸಮಾಧಾನದ ಭಾವನೆ ಮೂಡುತ್ತಿತ್ತು.
ನನ್ನನ್ನು “ ಹಾರುವ ಶವಪೆಟ್ಟಿಗೆ” ಎಂದು ಕರೆದರು. ಅದನ್ನು ಕೇಳಿದಾಗ ತುಂಬಾ ನೋವಾಗುತ್ತದೆ. ಮಡಿದ ಕುಟುಂಬದ ಸದಸ್ಯರ ಕಣ್ಣೀರಿನ ಜೊತೆ ನನ್ನ ಕಣ್ಣೀರನ್ನು ಯಾರೂ ನೋಡಲೇ ಇಲ್ಲ. ರಾಜಕೀಯ ಅಸಮರ್ಥತೆ, ಆರ್ಥಿಕ ನಿರ್ಬಂಧಗಳು, ಖಾಲಿ ಭಾಗಗಳ ಕೊರತೆ — ಈ ಎಲ್ಲದರ ಮಧ್ಯೆಯೂ ನಾನು ಹಾರಿದ್ದೇನೆ, ಇನ್ನೆಷ್ಟು ಹಾರಲಿ. ಇಲ್ಲೀವರೆಗೂ ನನ್ನ ಹಾರುವ ಕ್ಷಮತೆಯನ್ನು ಕಾಪಾಡಿಕೊಂಡು ಬಂದ ತಾಂತ್ರಿಕ ತಂಡಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು, ನಿಮ್ಮ ತೆರೆಯಮರೆಯ ಸೇವೆಗೆ ನಾನು ಸದಾಋಣಿ.
ಈಗ ನಾನು ಶಾಶ್ವತವಾಗಿ ನಿರ್ಗಮಿಸುವ ಸಮಯ.
ನನ್ನ ಅಂತಿಮ ವಂದನೆ
ನಾನು ಮಿಗ್-21, ನಾನು ಪರಿಪೂರ್ಣನಲ್ಲ, ನನ್ನಲ್ಲಿ ತಪ್ಪುಗಳು, ತೊಂದರೆಗಳು ಇದ್ದವು, ಅದರಿಂದಾದ ಮಾಯದ ಗಾಯಗಳೂ ಇವೆ. ಭಾರತಕ್ಕೆ ಒಂದು ಶಬ್ದವೇಗಿ ವಿಮಾನದ, ಯುದ್ಧ ಸಾಮರ್ಥ್ಯವುಳ್ಳ ವಿಮಾನದ ಅವಶ್ಯಕತೆ ಇದ್ದಾಗ ನಾನು ಬಂದೆ. ಆರು ದಶಕಗಳ ಕಾಲ ನಾನು ಭಾರತದ ಗಗನವನ್ನು ತಾಯಿಯಂತೆ ಕಾಪಾಡಿದೆ. ಇಲ್ಲೀವರೆಗೂ ನನ್ನ ಹಾರುವ ಕ್ಷಮತೆಯನ್ನು ಕಾಪಾಡಿಕೊಂಡು ಬಂದ ತಾಂತ್ರಿಕ ತಂಡಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು, ನಿಮ್ಮ ತೆರೆಯಮರೆಯ ಸೇವೆಗೆ ನಾನು ಸದಾಋಣಿ.
ಈಗ ನಾನು ಶಾಶ್ವತವಾಗಿ ನಿರ್ಗಮಿಸುವ ಸಮಯ. ನಾನು ಹೊರಟುಹೋಗುತ್ತಿದ್ದೇನೆ —ನಿಶಬ್ದವಾಗಿ ತೆರೆಮರೆ ಸೇರಿಕೊಳ್ಳುತ್ತಿಲ್ಲ, ನನ್ನ ಕರ್ತವ್ಯ ಪೂರೈಸಿದ ಗರ್ಜನೆಯೊಂದಿಗೆ ಹೋಗುತ್ತಿದ್ದೇನೆ
ಜೈ ಹಿಂದ್.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0