ನಾವು ಹುಲಿಗಳಂತೆ ಘರ್ಜನೆ ಮಾಡಬೇಕು, ಯೋಜನೆ ಕೈಬಿಡುವ ತನಕ ಒಗ್ಗಟ್ಟಿನಿಂದ ಹೋರಾಡೋಣ: ಪ್ರೊ. ಬಿ ಎಂ ಕುಮಾರಸ್ವಾಮಿ

ಮುಖ್ಯಾಂಶಗಳು: ಯೋಜನೆಯ ಸ್ವರೂಪ: 53 ಬೃಹತ್ ಅಣೆಕಟ್ಟುಗಳ ನಿರ್ಮಾಣ ಮತ್ತು ಪಶ್ಚಿಮ ವಾಹಿನಿ ನದಿಗಳ ತಿರುವು. ಅವೈಜ್ಞಾನಿಕ ನಿರ್ಧಾರ: ಜಲಚಕ್ರದ ವಿರುದ್ಧವಾದ ನಿಲುವು, ಅಘನಾಶಿನಿಯಂತಹ ಜೀವವೈವಿಧ್ಯ ತಾಣಗಳ ನಾಶ. ಸಾಮಾಜಿಕ ಪರಿಣಾಮ: ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳ ಬೃಹತ್ ಒಕ್ಕಲೆಬ್ಬಿಸುವಿಕೆ. ಜಿಲ್ಲೆಯ ಆಕ್ರೋಶ: ಆಸ್ಪತ್ರೆಯಂತಹ ಮೂಲಭೂತ ಸೌಕರ್ಯ ನೀಡದೆ, ಇರುವ ನೈಸರ್ಗಿಕ ಸಂಪತ್ತಿನ ಲೂಟಿ.

Jan 11, 2026 - 16:11
 0  65
ನಾವು ಹುಲಿಗಳಂತೆ ಘರ್ಜನೆ ಮಾಡಬೇಕು, ಯೋಜನೆ ಕೈಬಿಡುವ ತನಕ ಒಗ್ಗಟ್ಟಿನಿಂದ ಹೋರಾಡೋಣ: ಪ್ರೊ. ಬಿ ಎಂ ಕುಮಾರಸ್ವಾಮಿ

ನದಿ ಜೋಡಣೆ ನೆಪದಲ್ಲಿ ಉತ್ತರ ಕನ್ನಡದ ನದಿಗಳ 'ಕಿಡ್ನ್ಯಾಪ್‌': ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಆಕ್ರೋಶ

ಆಪ್ತ ನ್ಯೂಸ್ ಶಿರಸಿ:

"ನಮ್ಮ ಜಿಲ್ಲೆಯ ಜನರು ಕೇಳದಿದ್ದರೂ ಕೈಗಾ ಅಣುಸ್ಥಾವರ ಕೊಟ್ಟಿರಿ, ನೌಕಾನೆಲೆ ಕೊಟ್ಟಿರಿ. ಆದರೆ, ಬದುಕಲು ಒಂದು ಸುಸಜ್ಜಿತ ಆಸ್ಪತ್ರೆ ಕೇಳಿದರೆ ಕೊಡಲಿಲ್ಲ. ಈಗ ಕುಡಿಯುವ ನೀರು ಮತ್ತು ನೀರಾವರಿ ನೆಪವೊಡ್ಡಿ ಉತ್ತರ ಕನ್ನಡದ ಜೀವನದಿಗಳನ್ನು ಅಪಹರಿಸಲು (ಕಿಡ್ನ್ಯಾಪ್) ಹೊರಟಿದ್ದೀರಿ. ಇದು ಕೇವಲ ಈ ಜಿಲ್ಲೆಯಲ್ಲ, ಸಮಗ್ರ ದಕ್ಷಿಣ ಭಾರತದ ಪರಿಸರಕ್ಕಾಗುವ ಅನಾಹುತ," ಎಂದು ಹಿರಿಯ ಪರಿಸರ ತಜ್ಞ ಪ್ರೊ. ಬಿ. ಎಂ. ಕುಮಾರಸ್ವಾಮಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಎಂ.ಇ.ಎಸ್. ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ನದಿ ಜೋಡಣೆ ಮತ್ತು ನದಿ ತಿರುವು ಯೋಜನೆಗಳು ಹೇಗೆ ಅವೈಜ್ಞಾನಿಕ ಮತ್ತು ಜನವಿರೋಧಿ ಎಂಬುದನ್ನು ಅಂಕಿಅಂಶಗಳ ಸಹಿತ ಎಳೆಎಳೆಯಾಗಿ ಬಿಚ್ಚಿಟ್ಟರು.

ಮಹಾರಾಷ್ಟ್ರದ ಅಣೆಕಟ್ಟು ಮತ್ತು ಬರಗಾಲದ ವಿಪರ್ಯಾಸ

ಭಾರತದ ನದಿ ಜೋಡಣೆ ಯೋಜನೆಯ ಭಾಗವಾಗಿ ನಮ್ಮ ಪಶ್ಚಿಮ ವಾಹಿನಿ ನದಿಗಳಿಗೆ ಅಣೆಕಟ್ಟು ಕಟ್ಟುವ ಸಂಚು ನಡೆದಿದೆ. ದೇಶದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವುದು ಮಹಾರಾಷ್ಟ್ರ ರಾಜ್ಯ. ವಿಪರ್ಯಾಸವೆಂದರೆ, ದೇಶದಲ್ಲಿ ಅತಿ ಹೆಚ್ಚು ಬರಗಾಲ ಪೀಡಿತ ರಾಜ್ಯವೂ ಮಹಾರಾಷ್ಟ್ರವೇ ಆಗಿದೆ. ಹೀಗಿರುವಾಗ ಅಣೆಕಟ್ಟುಗಳಿಂದ ಜಲಸಮೃದ್ಧಿ ಸಾಧ್ಯ ಎಂಬುದು ಸುಳ್ಳು. 246 ನೀರಾವರಿ ಯೋಜನೆಗಳಲ್ಲಿ 65 ಪೂರ್ಣಗೊಂಡಿದ್ದರೂ, ರೈತರಿಗೆ ಇವುಗಳಿಂದ ಯಾವುದೇ ಲಾಭವಾಗಿಲ್ಲ ಎಂದು ಅವರು ವಿಷಾದಿಸಿದರು.

6 ಕೋಟಿ ಜನರ ಬದುಕು ಅತಂತ್ರ

"ಅಭಿವೃದ್ಧಿಯ ಹೆಸರಿನಲ್ಲಿ ಜಾರಿಗೆ ಬಂದ ಇಂತಹ ಯೋಜನೆಗಳಿಂದ ದೇಶದಲ್ಲಿ ಇದುವರೆಗೆ ಸುಮಾರು 6 ಕೋಟಿ ಜನರು ನಿರಾಶ್ರಿತರಾಗಿದ್ದಾರೆ. ಇವರಲ್ಲಿ ಕೇವಲ 1.5 ಕೋಟಿ ಜನರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಉಳಿದ 4.5 ಕೋಟಿ ಜನರಿಗೆ ಚಿಕ್ಕಾಸಿನ ಪರಿಹಾರವೂ ಸಿಕ್ಕಿಲ್ಲ. ಹೀಗೆ ನಿರ್ಗತಿಕರಾದವರಲ್ಲಿ ಬಹುತೇಕರು ಬುಡಕಟ್ಟು ಜನಾಂಗದವರು, ದಲಿತರು ಮತ್ತು ಹಿಂದುಳಿದ ವರ್ಗದವರು. ನರ್ಮದಾ ನದಿ ಯೋಜನೆಯಂತೆ, ಈ ಯೋಜನೆಗಳೂ ಬಡವರನ್ನು ಮತ್ತು ಅರಣ್ಯವಾಸಿಗಳನ್ನು ಗುಡಿಸಿ ಗುಂಡಾಂತರ ಮಾಡುವ, ಮೋಸ ಮಾಡುವ ತಂತ್ರಗಳಾಗಿವೆ," ಎಂದು ಅವರು ಹರಿಹಾಯ್ದರು.

ಪ್ರಕೃತಿಗೆ ಸವಾಲು ಹಾಕುವ ಮೂರ್ಖತನ

ನದಿ ನೀರು ಸಮುದ್ರಕ್ಕೆ ಸೇರುವುದು ವ್ಯರ್ಥ ಎಂದು ಹೇಳುವ ವಿಜ್ಞಾನಿ ಯಾರಿದ್ದಾರೆ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, "ನದಿ ನೀರು ಸಮುದ್ರ ಸೇರುವುದು ನಿಸರ್ಗದ ಸಹಜ ಜಲಚಕ್ರ (Water Cycle). ಆದರೆ ನಮ್ಮ ರಾಜಕಾರಣಿಗಳು ತಮಗೇ ನೀರು ಸೇರಬೇಕೆಂದು ಹಟ ಹಿಡಿದಿದ್ದಾರೆ. ಪ್ರಕೃತಿಗಿಂತ ತಾವೇ ಬುದ್ಧಿವಂತರು ಎಂದುಕೊಂಡಿರುವ ಇಂತಹ ಅವೈಜ್ಞಾನಿಕ ಧುರೀಣರನ್ನು ಪಡೆದಿರುವುದೇ ನಮ್ಮ ದುರ್ದೈವ," ಎಂದರು.

ಅಘನಾಶಿನಿ: ಮುಕ್ತವಾಗಿ ಹರಿಯುವ ಏಕೈಕ ನದಿ

ಯಾವುದೇ ಅಣೆಕಟ್ಟುಗಳಿಲ್ಲದೆ ಸ್ವತಂತ್ರವಾಗಿ ಹರಿಯುತ್ತಿರುವ ಏಕೈಕ ನದಿ ಅಘನಾಶಿನಿ. ಇದರ ಅಳಿವೆ ಪ್ರದೇಶ ಅಂತಾರಾಷ್ಟ್ರೀಯ ಮನ್ನಣೆ ಪಡೆದ 'ರಾಮಸರ್‌ ತಾಣ'ವಾಗಿದೆ. ಇಂತಹ ಫಲವತ್ತಾದ ನದಿಗೂ ಸರ್ಕಾರ ಸಂಚಕಾರ ತರಲು ಹೊರಟಿದೆ. 35 ವರ್ಷಗಳ ಹಿಂದಿನ ಹಳೆಯ ಮತ್ತು ಅವೈಜ್ಞಾನಿಕ ಚಿಂತನೆಯನ್ನು ಮತ್ತೆ ಮುನ್ನೆಲೆಗೆ ತರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಉತ್ತರ ಕನ್ನಡಕ್ಕೆ ನಿಮ್ಮ ಕೊಡುಗೆ ಏನು?

ಸರ್ಕಾರವನ್ನು ನೇರವಾಗಿ ಪ್ರಶ್ನಿಸಿದ ಕುಮಾರಸ್ವಾಮಿ, "ನಮ್ಮ ನದಿಗಳನ್ನು ಬಯಲುಸೀಮೆಗೆ ತಿರುಗಿಸುತ್ತೀರಿ, ಸರಿ. ಆದರೆ ನಮ್ಮ ಜಿಲ್ಲೆಯ ಕುಡಿಯುವ ನೀರು ಮತ್ತು ನೀರಾವರಿಗೆ ನಿಮ್ಮ ಪರ್ಯಾಯ ವ್ಯವಸ್ಥೆ ಏನು? ಬಯಲುಸೀಮೆಯ ನದಿಯನ್ನು ಇಲ್ಲಿಗೆ ತಿರುಗಿಸುತ್ತೀರಾ? ನಾವು ತಾಜ್‌ಮಹಲ್ ಕೇಳಲಿಲ್ಲ, ಕೇವಲ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೇಳಿದೆವು, ಅದನ್ನೂ ಕೊಡಲಿಲ್ಲ. ಮಂಗನ ಕಾಯಿಲೆಗೆ ದಶಕಗಳಿಂದ ಶಾಶ್ವತ ಪರಿಹಾರ ಕೇಳುತ್ತಿದ್ದೇವೆ, ಅದಕ್ಕೂ ಸ್ಪಂದಿಲ್ಲ. ಆದರೆ ಕೇಳದ ಅಣುಸ್ಥಾವರ, ನೌಕಾನೆಲೆಗಳನ್ನು ನಮ್ಮ ತಲೆಯಲ್ಲಿ ಹೇರಿದ್ದೀರಿ," ಎಂದು ಕಿಡಿಕಾರಿದರು.

ಜನಪ್ರತಿನಿಧಿಗಳಿಗೆ ಎಚ್ಚರಿಕೆ

"ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಅಸೆಂಬ್ಲಿ ಮತ್ತು ಪಾರ್ಲಿಮೆಂಟ್‌ನಲ್ಲಿ ಪಕ್ಷದ ಪ್ರತಿನಿಧಿಗಳಾಗಿ ಮಾತನಾಡಬಾರದು, ಜನರ ಪ್ರತಿನಿಧಿಗಳಾಗಿ ಧ್ವನಿ ಎತ್ತಬೇಕು. ನಿಮ್ಮನ್ನು ನಂಬಿ ಮತ ಹಾಕಿದ ಜನರ ಜೊತೆ ನಿಲ್ಲಿ, ಈ ಯೋಜನೆಯನ್ನು ವಿರೋಧಿಸಿ," ಎಂದು ಪ್ರೊ. ಬಿ.ಎಂ. ಕುಮಾರಸ್ವಾಮಿ ಕರೆ ನೀಡಿದರು.


What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0