ಶಿರಸಿ ಬಸ್ ನಿಲ್ದಾಣ ಕಳ್ಳತನ ಪ್ರಕರಣ: ಅಂತರ ಜಿಲ್ಲಾ ಮಹಿಳಾ ಆರೋಪಿಗಳ ಬಂಧನ; ₹5 ಲಕ್ಷ ಮೌಲ್ಯದ ಚಿನ್ನಾಭರಣ ವಶ

Aug 14, 2026 - 09:18
 0  168
ಶಿರಸಿ ಬಸ್ ನಿಲ್ದಾಣ ಕಳ್ಳತನ ಪ್ರಕರಣ: ಅಂತರ ಜಿಲ್ಲಾ ಮಹಿಳಾ ಆರೋಪಿಗಳ ಬಂಧನ; ₹5 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಆಪ್ತ ನ್ಯೂಸ್ ಶಿರಸಿ:

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ವ್ಯಾನಿಟಿ ಬ್ಯಾಗ್‌ನ ಜಿಪ್‌ ತೆಗೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗಿದ್ದ ಅಂತರ ಜಿಲ್ಲಾ ಮಹಿಳಾ ಆರೋಪಿಗಳನ್ನು ಶಿರಸಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಮಲ್ಲಿಗೇನಹಳ್ಳಿ ನಿವಾಸಿ ಸುಶೀಲಾ ಕೋಂ ಸುರೇಶ್ (39) ಹಾಗೂ ದಾವಣಗೆರೆ ಜಿಲ್ಲೆಯ ಚನ್ನಗಿರಿ ನಿವಾಸಿ ಸಾಯಿಲಕ್ಷ್ಮಿ ಕೋಂ ಪ್ರಭುದಾಸ (36) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು ₹5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ವಿವರದಂತೆ, ಶಿರಸಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನ ಜಿಪ್‌ ತೆಗೆದು, ಅದರೊಳಗಿನ ಬಾಕ್ಸ್‌ನಲ್ಲಿ ಸುರಕ್ಷಿತವಾಗಿ ಇಡಲಾಗಿದ್ದ ಚಿನ್ನಾಭರಣ ಹಾಗೂ ಬೆಳ್ಳಿ ನಾಣ್ಯವನ್ನು ಕಳ್ಳತನ ಮಾಡಲಾಗಿತ್ತು. ಕಳ್ಳತನವಾಗಿದ್ದ ವಸ್ತುಗಳಲ್ಲಿ ಸುಮಾರು 18 ಗ್ರಾಂ ತೂಕದ ಬಂಗಾರದ ಶಾರ್ಟ್ ನೆಕ್ಲೆಸ್, 30 ಗ್ರಾಂ ತೂಕದ ಬಂಗಾರದ ಉದ್ದನೆ ಹಾರ, 2 ಗ್ರಾಂ ತೂಕದ ಬಂಗಾರದ ಉಂಗುರ ಹಾಗೂ 10 ಗ್ರಾಂ ತೂಕದ ಬೆಳ್ಳಿ ನಾಣ್ಯ ಸೇರಿದ್ದು, ಒಟ್ಟು ಅಂದಾಜು ₹3.52 ಲಕ್ಷ ಮೌಲ್ಯ ಹೊಂದಿತ್ತು.

ಈ ಕುರಿತು ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಮೇಲಾಧಿಕಾರಿಗಳ ಸೂಚನೆಯಂತೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಆರಂಭಿಸಿದ್ದರು.

ತಂಡವು ಪ್ರಕರಣದ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಕಳ್ಳತನದ ಹಿಂದೆ ಅಂತರ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿಗಳ ಸುಳಿವು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಸತತ ಕಾರ್ಯಾಚರಣೆಯ ಬಳಿಕ ಇಬ್ಬರು ಆರೋಪಿಗಳನ್ನು ಗುರುತಿಸಿ, ಆಗಸ್ಟ್ 13ರಂದು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ₹5 ಲಕ್ಷ ಮೌಲ್ಯದ 50 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಇದೇ ರೀತಿಯ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸಂಪತ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಶಿರಸಿ ನಗರ ಠಾಣೆಯ ಪಿಎಸ್ಐಗಳಾದ ನರಸಿಂಹಲು ಮತ್ತು ನಾರಾಯಣ ರಾಥೋಡ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುವ ಪ್ರಕರಣಗಳು ನಡೆಯುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0