ಬ್ಯಾಡ್ಮಿಂಟನ್ ಆಡುತ್ತಿದ್ದಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು
ಆಪ್ತ ನ್ಯೂಸ್ ಸಿದ್ದಾಪುರ:
ಆರೋಗ್ಯಕರ ಜೀವನಶೈಲಿಗಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಶಿಕ್ಷಕರೊಬ್ಬರು ಬ್ಯಾಡ್ಮಿಂಟನ್ ಆಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ಹಾರ್ಸಿಕಟ್ಟಾದ ಅಶೋಕ ಪ್ರೌಢಶಾಲೆಯ ಸಹ ಶಿಕ್ಷಕ ಸುಬ್ರಹ್ಮಣ್ಯ ಪರಮೇಶ್ವರ ಗೌಡ (47) ಎಂದು ಗುರುತಿಸಲಾಗಿದೆ. ಮೂಲತಃ ಕುಮಟಾ ತಾಲೂಕಿನ ಗೋಕರ್ಣ ಗೊನೇಹಳ್ಳಿ, ಕಡಿಮೆ ಗ್ರಾಮದವರಾಗಿದ್ದ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಆಗಸ್ಟ್ 13ರಂದು ಸಂಜೆ ಎಂದಿನಂತೆ ಬ್ಯಾಡ್ಮಿಂಟನ್ ಆಡಲು ಸಿದ್ದಾಪುರದ ಎಪಿಎಂಸಿ ಅಡಿಕೆಮನೆಗೆ ತೆರಳಿದ್ದ ಸುಬ್ರಹ್ಮಣ್ಯ ಗೌಡ ಅವರು ಸಹ ಆಟಗಾರರೊಂದಿಗೆ ಬ್ಯಾಡ್ಮಿಂಟನ್ ಆಡುತ್ತಿದ್ದರು. ಆಟದ ನಡುವೆಯೇ ಏಕಾಏಕಿ ಅಸ್ವಸ್ಥಗೊಂಡ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಸ್ಥಳದಲ್ಲಿದ್ದವರು ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಪರಿಶೀಲಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕ್ರೀಡೆಯಲ್ಲಿ ಸಕ್ರಿಯರಾಗಿದ್ದ ಶಿಕ್ಷಕರು ಆಟವಾಡುತ್ತಲೇ ದಿಢೀರ್ ಸಾವನ್ನಪ್ಪಿರುವ ಸುದ್ದಿ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಪರಿಚಿತರಲ್ಲಿ ಆಘಾತ ಮೂಡಿಸಿದೆ. ಶಿಕ್ಷಕರ ಅಕಾಲಿಕ ನಿಧನಕ್ಕೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



