ಶಾಲಾ ಆವರಣದ ಸುತ್ತ ಉಪ್ಪಿನಕಾಯಿ ಮಾರಾಟಕ್ಕೆ ನಿಯಂತ್ರಣ ಹೇರುವಂತೆ ಡಾ. ರವಿಕಿರಣ ಪಟವರ್ಧನ ಮನವಿ ಮಾಡಿದ್ದೇಕೆ ಗೊತ್ತೇ?

Sep 30, 2026 - 21:58
 0  81
ಶಾಲಾ ಆವರಣದ ಸುತ್ತ ಉಪ್ಪಿನಕಾಯಿ ಮಾರಾಟಕ್ಕೆ ನಿಯಂತ್ರಣ ಹೇರುವಂತೆ ಡಾ. ರವಿಕಿರಣ ಪಟವರ್ಧನ ಮನವಿ ಮಾಡಿದ್ದೇಕೆ ಗೊತ್ತೇ?

ಆಪ್ತ ವಿಶೇಷ

ಆಪ್ತ ನ್ಯೂಸ್ ಶಿರಸಿ:

ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲಾ ಕ್ಯಾಂಟೀನ್‌ಗಳು ಹಾಗೂ ಶಾಲಾ ಆವರಣದ ಸುತ್ತಮುತ್ತಲಿನ ಅಂಗಡಿಗಳಲ್ಲಿ ಉಪ್ಪಿನಕಾಯಿ ಮಾರಾಟವನ್ನು ನಿಯಂತ್ರಿಸುವುದು ಸೇರಿದಂತೆ, ಬಿಸಿಯೂಟದಲ್ಲಿ ಉಪ್ಪಿನಕಾಯಿ ವಿತರಣೆಗೆ ಪ್ರಮಾಣ ನಿಗದಿಪಡಿಸುವಂತೆ ಡಾ. ರವಿಕಿರಣ ಪಟವರ್ಧನ ಅವರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಶಾಲೆಯಿಂದ ಮನೆಗೆ ಬಂದ ಬಾಲಕನೊಬ್ಬನ ಕಿಸೆಯಲ್ಲಿ 15ಕ್ಕೂ ಹೆಚ್ಚು ಮಾವಿನಕಾಯಿ ಮಿಡಿಗಳು ಪತ್ತೆಯಾದ ಘಟನೆಯನ್ನು ಉಲ್ಲೇಖಿಸಿರುವ ಅವರು, ಸಾಮಾನ್ಯವಾಗಿ ಕಂಡುಬರುವ ಇಂತಹ ಘಟನೆ ಮಕ್ಕಳ ಆಹಾರ ಪದ್ಧತಿ ಹಾಗೂ ಆರೋಗ್ಯದ ಕುರಿತು ಗಂಭೀರವಾಗಿ ಚಿಂತಿಸುವಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಉಪ್ಪಿನಕಾಯಿ ರುಚಿಕರವಾದ ಆಹಾರವಾದರೂ, ಅದರಲ್ಲಿ ಉಪ್ಪು ಮತ್ತು ಸೋಡಿಯಂ ಪ್ರಮಾಣ ಹೆಚ್ಚಿರುವ ಸಾಧ್ಯತೆ ಇದೆ. ಊಟದೊಂದಿಗೆ ಸಣ್ಣ ಪ್ರಮಾಣದಲ್ಲಿ ಸೇವಿಸುವುದು ಮತ್ತು ಅದನ್ನೇ ತಿಂಡಿಯಂತೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು ಒಂದೇ ಅಲ್ಲ. ಬಾಲ್ಯದಲ್ಲಿಯೇ ಹೆಚ್ಚಿನ ಉಪ್ಪಿನ ರುಚಿಗೆ ಮಕ್ಕಳು ಒಗ್ಗಿಕೊಂಡರೆ, ಮುಂದಿನ ದಿನಗಳಲ್ಲಿ ಕಡಿಮೆ ಉಪ್ಪಿನ ಆರೋಗ್ಯಕರ ಆಹಾರವನ್ನು ಸ್ವೀಕರಿಸುವಲ್ಲಿ ಸಮಸ್ಯೆಯಾಗಬಹುದು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಬಿಸಿಯೂಟದಲ್ಲೂ ಪ್ರಮಾಣಕ್ಕೆ ಕಡಿವಾಣ

ಕೆಲವು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆಯಲ್ಲಿ ವಿದ್ಯಾರ್ಥಿಗಳೇ ಸಹಾಯ ಮಾಡುವ ಸಂದರ್ಭಗಳಿದ್ದು, ಈ ವೇಳೆ ಆಪ್ತ ಸ್ನೇಹಿತರಿಗೆ ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನಕಾಯಿ ನೀಡುವ ಸಾಧ್ಯತೆಯಿದೆ ಎಂಬ ವಿಚಾರವನ್ನು ಅವರು ಪ್ರಸ್ತಾಪಿಸಿದ್ದಾರೆ.

ಇದು ಎಲ್ಲ ಶಾಲೆಗಳಲ್ಲೂ ನಡೆಯುತ್ತದೆ ಎಂದು ಹೇಳಲಾಗದು. ಆದರೆ ಇಂತಹ ಸಾಧ್ಯತೆಗಳನ್ನು ತಪ್ಪಿಸಲು ಉಪ್ಪಿನಕಾಯಿ ವಿತರಣೆಯನ್ನು ಪ್ರಮಾಣಬದ್ಧವಾಗಿ ಹಾಗೂ ಮೇಲ್ವಿಚಾರಣೆಯೊಂದಿಗೆ ನಡೆಸುವ ವ್ಯವಸ್ಥೆ ಅಗತ್ಯ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಾಲೆಯ ಬಿಸಿಯೂಟವು ಕೇವಲ ಮಕ್ಕಳ ಹಸಿವು ನೀಗಿಸುವ ಯೋಜನೆಯಲ್ಲ. ಸಮತೋಲನ ಆಹಾರ, ಸಮಾನತೆ ಹಾಗೂ ಆರೋಗ್ಯಕರ ಆಹಾರ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸುವ ಪ್ರಮುಖ ವೇದಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

5 ಪ್ರಮುಖ ಬೇಡಿಕೆಗಳು

ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಉಪ್ಪಿನಕಾಯಿ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿ ರೂಪಿಸುವಂತೆ ಡಾ. ರವಿಕಿರಣ ಪಟವರ್ಧನ ಅವರು ಒತ್ತಾಯಿಸಿದ್ದಾರೆ.

  • ಶಾಲಾ ಕ್ಯಾಂಟೀನ್‌ಗಳಲ್ಲಿ ಉಪ್ಪಿನಕಾಯಿಯನ್ನು ಪ್ಯಾಕೆಟ್ ಅಥವಾ ತಿಂಡಿ ರೂಪದಲ್ಲಿ ಮಾರಾಟ ಮಾಡುವುದನ್ನು ನಿಯಂತ್ರಿಸುವುದು ಅಥವಾ ನಿಷೇಧಿಸುವುದು.

  • ಬಿಸಿಯೂಟದಲ್ಲಿ ಉಪ್ಪಿನಕಾಯಿ ನೀಡುವುದಾದರೆ ನಿಗದಿತ ಸಣ್ಣ ಪ್ರಮಾಣದಲ್ಲಿ ಮಾತ್ರ ವಿತರಿಸಲು ಮಾರ್ಗಸೂಚಿ ರೂಪಿಸುವುದು.

  • ವಿದ್ಯಾರ್ಥಿಗಳು ಸ್ನೇಹಿತರಿಗೆ ಹೆಚ್ಚುವರಿ ಪ್ರಮಾಣದಲ್ಲಿ ಉಪ್ಪಿನಕಾಯಿ ಬಡಿಸುವುದನ್ನು ತಪ್ಪಿಸಲು ಆಹಾರ ವಿತರಣೆಯಲ್ಲಿ ಮೇಲ್ವಿಚಾರಣೆ ಕಲ್ಪಿಸುವುದು.

  • ಶಾಲಾ ಕ್ಯಾಂಟೀನ್‌ಗಳಲ್ಲಿ ಹೆಚ್ಚಿನ ಉಪ್ಪು, ಸಕ್ಕರೆ ಹಾಗೂ ಕೊಬ್ಬು ಹೊಂದಿರುವ ಆಹಾರಗಳ ಕುರಿತು ಸ್ಪಷ್ಟ ಮಾರ್ಗಸೂಚಿ ರೂಪಿಸುವುದು.

  • ಮಕ್ಕಳು ಹಾಗೂ ಪೋಷಕರಲ್ಲಿ ಆರೋಗ್ಯಕರ ಆಹಾರ ಪದ್ಧತಿ ಕುರಿತು ಜಾಗೃತಿ ಮೂಡಿಸುವುದು.

“ಇದು ಉಪ್ಪಿನಕಾಯಿಯ ವಿರುದ್ಧದ ಮನವಿಯಲ್ಲ”

ಮಕ್ಕಳ ಆಹಾರ ಪದ್ಧತಿ ಬಾಲ್ಯದಲ್ಲಿಯೇ ರೂಪುಗೊಳ್ಳುವುದರಿಂದ ಶಾಲೆಯಲ್ಲಿ ಅವರಿಗೆ ನೀಡುವ ಆಹಾರವು ಅವರ ಮುಂದಿನ ಆಹಾರ ಆಯ್ಕೆಗಳ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಈ ಮನವಿ ಯಾವುದೇ ಆಹಾರ ಪದಾರ್ಥದ ವಿರುದ್ಧವಲ್ಲ; ಮಕ್ಕಳ ಆರೋಗ್ಯದ ಪರವಾಗಿದೆ ಎಂದು ಡಾ. ರವಿಕಿರಣ ಪಟವರ್ಧನ ಸ್ಪಷ್ಟಪಡಿಸಿದ್ದಾರೆ.

“ಪ್ರೀತಿಯಿಂದ ಹೆಚ್ಚಾಗಿ ಹಾಕುವುದು ಸಹಜ. ಆದರೆ ಶಾಲಾ ಆಹಾರ ವ್ಯವಸ್ಥೆಯಲ್ಲಿ ಪ್ರೀತಿ ಇರಲಿ, ಪಕ್ಷಪಾತ ಇರಬಾರದು; ಹಂಚಿಕೊಳ್ಳುವ ಮನಸ್ಸಿರಲಿ, ಆದರೆ ಪ್ರಮಾಣ ಆರೋಗ್ಯಕ್ಕೆ ತಕ್ಕಂತಿರಲಿ” ಎಂದು ಅವರು ಮನವಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

“ಉಪ್ಪಿನಕಾಯಿ ರುಚಿಗೆ ಇರಲಿ, ಆರೋಗ್ಯಕರ ಆಹಾರ ಬದುಕಿಗೆ ಇರಲಿ”

ಕರ್ನಾಟಕದ ಎಲ್ಲಾ ಶಾಲೆಗಳಿಗೂ ಮಕ್ಕಳ ಆರೋಗ್ಯಕ್ಕೆ ಅನುಗುಣವಾದ ವೈಜ್ಞಾನಿಕ ಆಹಾರ ಮಾರ್ಗಸೂಚಿ ರೂಪಿಸಿ, ಶಾಲಾ ಕ್ಯಾಂಟೀನ್ ಹಾಗೂ ಬಿಸಿಯೂಟ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದ ಉಪ್ಪಿನಕಾಯಿ ಮತ್ತು ಇತರ ಹೆಚ್ಚಿನ ಉಪ್ಪಿನ ಆಹಾರಗಳ ಬಳಕೆಯನ್ನು ನಿಯಂತ್ರಿಸಲು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡುವಂತೆ ಅವರು ಮನವಿ ಮಾಡಿದ್ದಾರೆ.

“ಒಂದು ದಿನ ಮಗುವಿನ ಕಿಸೆಯಲ್ಲಿ ಸಿಕ್ಕ 15 ಮಾವಿನಮಿಡಿಗಳು ಕಾಯಿಲೆಯ ಸಾಕ್ಷಿಯಲ್ಲ. ಆದರೆ ಅದು ನಮ್ಮ ಶಿಕ್ಷಣ ವ್ಯವಸ್ಥೆಗೆ ಕೇಳುವ ಪ್ರಶ್ನೆ—ನಮ್ಮ ಮಕ್ಕಳಿಗೆ ನಾವು ಯಾವ ಆಹಾರ ಸಂಸ್ಕೃತಿಯನ್ನು ಕಲಿಸುತ್ತಿದ್ದೇವೆ?” ಎಂದು ಪ್ರಶ್ನಿಸಿರುವ ಅವರು, “ಉಪ್ಪಿನಕಾಯಿ ರುಚಿಗೆ ಇರಲಿ; ಆರೋಗ್ಯಕರ ಆಹಾರ ಬದುಕಿಗೆ ಇರಲಿ” ಎಂಬ ಸಂದೇಶದೊಂದಿಗೆ ಮನವಿಯನ್ನು ಸಲ್ಲಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0