ಮೀನು ಹಿಡಿಯಲು ತೆರಳಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವು

Aug 16, 2026 - 16:07
 0  143
ಮೀನು ಹಿಡಿಯಲು ತೆರಳಿದ್ದ ಯುವಕ ಕೆರೆಯಲ್ಲಿ ಮುಳುಗಿ ಸಾವು

ಆಪ್ತ ನ್ಯೂಸ್ ಹಳಿಯಾಳ:

ಮೀನು ಹಿಡಿಯಲು ಕೆರೆಗೆ ತೆರಳಿದ್ದ 24 ವರ್ಷದ ಯುವಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಹಳಿಯಾಳ ತಾಲೂಕಿನ ಜತಗಾ-ಗೌಳಿವಾಡ ಗ್ರಾಮದಲ್ಲಿ ನಡೆದಿದೆ.

ಮೃತ ಯುವಕನನ್ನು ಹೊಸೂರು (ಪಾಂಡರವಾಳ) ಗ್ರಾಮದ ಗೋಕುಲ ವಿಠಲ ಕುಂಬಾರ (24) ಎಂದು ಗುರುತಿಸಲಾಗಿದೆ. ಗೋಕುಲ ಅವರು ಮೀನು ಹಿಡಿಯುವ ಉದ್ದೇಶದಿಂದ ಜತಗಾ-ಗೌಳಿವಾಡ ಗ್ರಾಮದ ಕೆರೆಗೆ ತೆರಳಿದ್ದರು ಎನ್ನಲಾಗಿದೆ.

ಕೆರೆಗೆ ತೆರಳಿ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಕೆಲ ಸಮಯದ ಬಳಿಕ ವಿಷಯ ತಿಳಿದು ಸ್ಥಳೀಯರು ಹಾಗೂ ಸಂಬಂಧಿಕರು ಕೆರೆಯ ಬಳಿ ತೆರಳಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗೋಕುಲ ಅವರ ಮೃತದೇಹ ಪತ್ತೆಯಾಗಿದೆ.

ಯುವಕನ ಅಕಾಲಿಕ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಮೀನು ಹಿಡಿಯಲು ತೆರಳಿದ್ದ ಯುವಕನ ಬದುಕು ಕೆರೆಯ ನೀರಿನಲ್ಲೇ ದುರಂತ ಅಂತ್ಯ ಕಂಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಘಟನೆಗೆ ಸಂಬಂಧಿಸಿದಂತೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಘಟನೆಯ ನಿಖರ ಕಾರಣ ಹಾಗೂ ಸಂದರ್ಭಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0