ಚರ್ಚುಗಳೂ ಸರ್ಕಾರದ ಸುಪರ್ದಿಗೆ ಬರುತ್ತಾ? ಏನಿದು FCRA 2026 ಕಾಯ್ದೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ

Aug 6, 2026 - 11:25
 0  34
ಚರ್ಚುಗಳೂ ಸರ್ಕಾರದ ಸುಪರ್ದಿಗೆ ಬರುತ್ತಾ? ಏನಿದು  FCRA 2026 ಕಾಯ್ದೆ? ಇಲ್ಲಿದೆ ನೋಡಿ ಸಂಪೂರ್ಣ ವಿವರ
ಆಪ್ತ ವಿಶೇಷ

~ಕೃಷ್ಣ ಭಟ್

****

235 ವರ್ಷಗಳ ಹಿಂದೆ ಟಿಪ್ಪು ಸುಲ್ತಾನ ಶುರು ಮಾಡಿದ್ದ ಮುಜರಾಯಿ ಇಲಾಖೆಯನ್ನು ನಾವು ಇಂದಿಗೂ ಸ್ವಾತಂತ್ರ್ಯ ಬಂದ ನಂತರವೂ ಹೇರಿಕೊಂಡು, ನಮ್ಮ ದೇವಸ್ಥಾನಗಳಿಗೆ ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ, ಇದೇ ಮೊದಲ ಬಾರಿಗೆ, ಚರ್ಚುಗಳಿಗೂ ಆಡಳಿತಾಧಿಕಾರಿ ನೇಮಕ ಮಾಡುವ ಧೈರ್ಯವನ್ನು ಕೇಂದ್ರ ಸರ್ಕಾರ ಮಾಡಿದೆ. ಇದೇ ಕಾರಣಕ್ಕೆ ಇಡೀ ಎಡಚರು ಹಾಗೂ ಮತಾಂತರ ಮಿಷನ್‌ನ ಎಕೋಸಿಸ್ಟಮ್‌ ಎದ್ದೆದ್ದು ಕುಣಿಯುತ್ತಿದೆ!
ಈ FCRA 2026 ಸುದ್ದಿ ಎತ್ತಿದ್ದೇ, ಇದರ ಬಿಸಿ ಅಮೆರಿಕದ ಜನಪ್ರತಿನಿಧಿಗಳವರೆಗೆ ತಟ್ಟಿದೆ!
FCRA ಕಾನೂನಿನ ತಿದ್ದುಪಡಿ ಕ್ರಿಶ್ಚಿಯನ್ನರ ಮೇಲೆ ಮಾಡುತ್ತಿರುವ ದಾಳಿ ಎಂದು ಅಮೆರಿಕದ ಜನಪ್ರತಿನಿಧಿ ರೈಲೇ ಮೂರ್ ಹೇಳಿದ್ದಾರೆ! ಸಂಸತ್ತಿನಲ್ಲಿ ಇಂದು ಈ ಮಸೂದೆ ಮಂಡನೆಯಾಗಲಿದೆ.
ಹಾಗಂತ ಇದು ಚರ್ಚ್‌ಗಳಿಗೆ ಮಾತ್ರ ಅನ್ವಯ ಆಗುವುದಿಲ್ಲ ಎಂಬುದೇನೋ ನಿಜ. ಬಿಜೆಪಿ ಹಾಗೂ ಸರ್ಕಾರದ ವಕ್ತಾರರು ಇದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಆದರೆ, ಈ ಮಸೂದೆ ಕಾನೂನಾಗಿ ಜಾರಿಗೆ ಬಂದರೆ, ನಮ್ಮ ಕಣ್ಣಿಗೆ ತಟ್ಟನೆ ಬೀಳುವ ಮತ್ತು ನಮ್ಮ ಕಣ್ಣಿಗೆ ಕಾಣಿಸುವಂತೆ ಆಗುವ ಬದಲಾವಣೆ ಇದೇ...! ಇದರ ಜೊತೆಗೆ, ಕ್ರಿಶ್ಚಿಯನ್ ಸಂಸ್ಥೆಗಳು ವಿದೇಶಿ ಹಣದಿಂದ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳೂ ಸರ್ಕಾರದ ವಶಕ್ಕೆ ಹೋಗಲಿದೆ.
ಏನಿದು ಮಸೂದೆ?
FCRA ಒಂದು ಸರಳ ಮಸೂದೆ. ನಮ್ಮ ದೇಶದಲ್ಲಿರುವ ಯಾವುದೇ ಸಂಸ್ಥೆ ವಿದೇಶದಿಂದ ಹಣ ಪಡೆಯುತ್ತದೆ ಎಂದಾದರೆ ಮೊದಲು ಸರ್ಕಾರದ ಬಳಿ ನೋಂದಣಿ ಮಾಡಿಸಿಕೊಳ್ಳಬೇಕು. ನೋಂದಣಿ ಮಾಡುವಾಗ ಯಾವ ಉದ್ದೇಶಕ್ಕೆ ಈ ಹಣ ಬಳಕೆಯಾಗುತ್ತದೆ ಎಂದು ನಮೂದಿಸಲಾಗಿದೆಯೋ ಅದೇ ಉದ್ದೇಶಕ್ಕೇ ಆ ಹಣ ಬಳಕೆ ಮಾಡಬೇಕು. ಬೇರೆ ಉದ್ದೇಶಕ್ಕೆ ಬಳಕೆ ಮಾಡಿದರೆ ನೋಂದಣಿ ರದ್ದಾಗುತ್ತದೆ. ಐದು ವರ್ಷಕ್ಕೊಮ್ಮೆ ಸಂಸ್ಥೆಗಳು ನೋಂದಣಿ ನವೀಕರಿಸಿಕೊಳ್ಳಬೇಕು. ನವೀಕರಿಸಿಕೊಳ್ಳದಿದ್ದರೂ ರದ್ದಾಗುತ್ತದೆ.

ಮಸೂದೆ ಇರುವುದು ಇಷ್ಟೇ... ಆದರೆ ಅದರ ಒಳಗುಟ್ಟು ಬೇರೆಯದೇ ಕಥೆಯನ್ನು ಹೇಳುತ್ತದೆ!
ವಿದೇಶದಿಂದ ಹಣ ಯಾವುದಕ್ಕೆಲ್ಲ ಬರುತ್ತದೆ ಎಂದು ನಮಗೆ ಗೊತ್ತಿದೆ. 2019 ರಿಂದ 2022 ರ ಅವಧಿಯಲ್ಲಿ 52 ಸಾವಿರ ಕೋಟಿ ರೂ. ವಿದೇಶಗಳಿಂದ ಭಾರತಕ್ಕೆ ಬಂದಿದೆ. ಭಾರತದಲ್ಲಿ ಸದ್ಯ 14,435 ಸಂಸ್ಥೆಗಳು ಎಫ್‌ಸಿಆರ್‌ಎ ನೋಂದಣಿ ಮಾಡಿಕೊಂಡಿವೆ. ಆದರೆ, 15,225 ಅವಧಿ ಮೀರಿದ್ದರೆ, 22,496 ಸಂಸ್ಥೆಗಳ FCRA ರದ್ದು ಮಾಡಲಾಗಿದೆ. ಅತಿ ಹೆಚ್ಚು ಎಫ್‌ಸಿಆರ್‌ಎ ಪರವಾನಗಿ ಪಡೆದಿರುವ ರಾಜ್ಯಗಳ ಪೈಕಿ ತಮಿಳುನಾಡು (ಸಕ್ರಿಯ FCRA ಪರವಾನಗಿ - 2101) ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರದ (ಸಕ್ರಿಯ FCRA ಪರವಾನಗಿ - 1578) ನಂತರ ಕರ್ನಾಟಕ ಸಕ್ರಿಯ FCRA ಪರವಾನಗಿ – 1350) ಮೂರನೇ ಸ್ಥಾನದಲ್ಲಿದೆ.
1970 ರ ಕಾಲದಲ್ಲೇ ರಚನೆಯಾದ ಈ ಮಸೂದೆಗೆ ಕಾಲಕಾಲಕ್ಕೆ ಹಲವು ತಿದ್ದುಪಡಿ ಮಾಡಲಾಗಿದೆ. ಆದರೆ, ಈ ಬಾರಿ ಮಾಡುತ್ತಿರುವ ತಿದ್ದುಪಡಿ ಇದೆಯಲ್ಲ... ಇದು ಭವಿಷ್ಯದಲ್ಲಿ ಇಡೀ ಮತಾಂತರದ ಮಿಷನ್‌, ಲಾಬಿ ಸಿಸ್ಟಮ್, ವ್ಯವಸ್ಥೆಯನ್ನು ಬುಡಮೇಲು ಮಾಡುವ ಕುತಂತ್ರಗಳನ್ನೆಲ್ಲ ಮಟ್ಟ ಹಾಕಲಿದೆ.

ಈ ಬಾರಿ ಬದಲಾವಣೆ ಏನು?
ಈ ಬಾರಿಯ ಮಸೂದೆಯಲ್ಲಿ ಅತಿ ದೊಡ್ಡ ಬದಲಾವಣೆಯೇ ಆಡಳಿತಾಧಿಕಾರಿ ನೇಮಿಸುವ ವಿಚಾರ! ಅಂದರೆ, ಸಂಸ್ಥೆಯೊಂದು ಎಫ್‌ಸಿಆರ್‌ಎ ಅಡಿಯಲ್ಲಿ ವಿದೇಶದಿಂದ ದುಡ್ಡು ಪಡೆದು ನಮ್ಮ ದೇಶದಲ್ಲಿ ಒಂದಷ್ಟು ಆಸ್ತಿ ಖರೀದಿ ಮಾಡಿದೆ, ಅಥವಾ ಕಟ್ಟಡ ಕಟ್ಟಿದೆ, ಸಲಕರಣೆ, ಉಪಕರಣಗಳನ್ನು ಖರೀದಿ ಮಾಡಿದೆ ಎಂದುಕೊಳ್ಳಿ. ಯಾವುದೋ ಕಾರಣಕ್ಕೆ ಈ ಸಂಸ್ಥೆ FCRA ಪರವಾನಗಿಯನ್ನು ಕಳೆದುಕೊಳ್ಳುತ್ತದೆ. ಸರ್ಕಾರವೇ ರದ್ದು ಮಾಡಿರಬಹುದು ಅಥವಾ ಈ ಸಂಸ್ಥೆ ನೋಂದಣಿಯನ್ನು ನವೀಕರಿಸದೇ ಇರಬಹುದು. ಆಗ ಈ ಆಸ್ತಿ ಇದೆಯಲ್ಲ... ಇದನ್ನು ಸರ್ಕಾರ ವಶಪಡಿಸಿಕೊಳ್ಳಬಹುದು! ಅಂದರೆ, ಈ ಸ್ವತ್ತನ್ನು ನಿರ್ವಹಿಸುವುದಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಬಹುದು. ಜೊತೆಗೆ, ಈಗಾಗಲೇ ಬಳಕೆಯಾಗದೇ ಉಳಿದ ಹಣವೂ ಕೂಡಾ ಆಸ್ತಿ ಎಂದೇ ಪರಿಗಣನೆಯಾಗುತ್ತದೆ.
ಒಂದು ವೇಳೆ ನಿಗದಿತ ಅವಧಿಯಲ್ಲಿ ಸಂಸ್ಥೆ FCRA ಲೈಸೆನ್ಸ್‌ ನವೀಕರಿಸಿಕೊಳ್ಳದಿದ್ದರೆ, ಆ ಆಸ್ತಿ ಸಂಪೂರ್ಣವಾಗಿ ಆಡಳಿತಾಧಿಕಾರಿಯ ವಶಕ್ಕೇ ಹೋಗುತ್ತದೆ! ಹೀಗೆ, ಒಂದು ವೇಳೆ ಶಾಶ್ವತವಾಗಿ ಆಡಳಿತಾಧಿಕಾರಿಯ ವಶಕ್ಕೆ ಹೋದ ಆಸ್ತಿಯನ್ನು ಸರ್ಕಾರಕ್ಕೆ ವರ್ಗ ಮಾಡಬಹುದು ಅಥವಾ ಮಾರಾಟ ಮಾಡಬಹುದು. ಮಾರಾಟ ಮಾಡಿದಾಗ ಮತ್ತೆ ಅದೇ ಸಂಸ್ಥೆಗಳು ಖರೀದಿ ಮಾಡುವಂತಿಲ್ಲ. ಮಾರಾಟ ಮಾಡಿದಾಗ ಬರುವ ಹಣವೂ ಸರ್ಕಾರವೇ ಸ್ಥಾಪಿಸಿದ ಒಂದು ಫಂಡ್‌ಗೆ ಹೋಗುತ್ತದೆ!
ಅಲ್ಲಿಗೆ ಎಫ್‌ಸಿಆರ್‌ಎ ಹಣ ಪಡೆಯುತ್ತಿದ್ದ ಚರ್ಚ್‌ಗಳು ಒಂದು ವೇಳೆ ಹಣವನ್ನು ಮತಾಂತರಕ್ಕೆ ಬಳಸಿದರೆ, ಆ ಇಡೀ ಚರ್ಚ್‌ನ ಎಫ್‌ಸಿಆರ್‌ಎ ಪರವಾನಗಿ ರದ್ದು ಮಾಡಿ, ಆ ಚರ್ಚ್‌ ಅನ್ನೇ ಸರಕಾರ ಸುಪರ್ದಿಗೆ ತೆಗೆದುಕೊಳ್ಳಬಹುದು. ಈ ಹಿಂದೆ ದೇವಸ್ಥಾನದ ವಿಷಯದಲ್ಲಿ ಆಗುತ್ತಿದ್ದುದೂ ಅದೇ ಅಲ್ಲವೇ? ಆಡಳಿತ ಮಂಡಳಿಯಲ್ಲಿ ಯಾವುದೇ ವಿವಾದ ಆದರೂ ಸರಿ, ಅದನ್ನು ನೇರವಾಗಿ ಮುಜರಾಯಿ ಇಲಾಖೆಗೆ ಹಸ್ತಾಂತರಿಸಿಬಿಡುತ್ತಿದ್ದರು. ಈಗಂತೂ, ಸರ್ಕಾರಕ್ಕೆ ಆದಾಯ ಹೆಚ್ಚಿದೆ ಎಂದು ಅನಿಸಿದ ಯಾವುದೇ ದೇವಸ್ಥಾನವನ್ನಾದರೂ ತನ್ನ ವಶಕ್ಕೆ ಪಡೆಯಬಹುದು.

ಆದರೆ, ಚರ್ಚ್ ವಿಷಯದಲ್ಲಿ ಹೀಗಲ್ಲ. ಅದು ಎಫ್‌ಸಿಆರ್‌ಎ ಲೈಸೆನ್ಸ್ ಕಳೆದುಕೊಂಡರೆ ಮಾತ್ರ ಈ ನಿಯಮಕ್ಕೆ ಒಳಪಡುತ್ತದೆ.
ಇನ್ನೊಂದು ವಿಷಯವನ್ನು ನಾವು ಗಮನಿಸಬೇಕು, ಇದು ಬರಿ ಚರ್ಚ್‌ ಒಂದನ್ನೇ ಗಮನದಲ್ಲಿಟ್ಟುಕೊಂಡು ಮಾಡಿದ ಮಸೂದೆಯಲ್ಲ. ಎಲ್ಲ ವಿಷಯಕ್ಕೂ ಇದು ಅನ್ವಯವಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ಇದಕ್ಕೆ ಹೆಚ್ಚು ಹಣ ಬರುತ್ತಿರುವುದು ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿರುವ ಸಂಸ್ಥೆಗಳಿಗೆ ಹಾಗೂ ಎನ್‌ಜಿಒಗಳಿಗೆ...
ಇದೇ ರೀತಿಯ ಕಾನೂನುಗಳು ವಿದೇಶದಲ್ಲೂ ಇವೆ. ನಮ್ಮಲ್ಲಿ ಮಾತ್ರವೇ ಅಲ್ಲ. ಅಷ್ಟಕ್ಕೂ ಯುರೋಪ್ ದೇಶಗಳಲ್ಲಿ ಈ ಕಾನೂನುಗಳು ಇನ್ನೂ ಬಿಗಿಯಾಗಿವೆ.
ಆದರೆ, ಈ ನಿಯಮ ಬಿಗಿಯಾದ ತಕ್ಷಣ ಎಲ್ಲವೂ ಸರಿ ಹೋಗುತ್ತದೆ ಎಂದೇನಿಲ್ಲ. ಕಳೆದ 12 ವರ್ಷಗಳಿಂದಲೂ ಈ ಎಫ್‌ಸಿಆರ್‌ಎ ಮೇಲೆ ಸರ್ಕಾರ ಒಂದಲ್ಲ ಒಂದು ಕಠಿಣ ನಿಯಮವನ್ನು ಜಾರಿಗೆ ತರುತ್ತಲೇ ಇದೆ. 2020 ರಲ್ಲಿ 2024 ರಲ್ಲಿ ಕೂಡಾ ಈ ನಿಯಮಕ್ಕೆ ತಿದ್ದುಪಡಿ ತಂದು ಬಿಗಿ ಮಾಡಲಾಗಿತ್ತು. ಹೀಗಾಗಿ, ಈಗಾಗಲೇ ಸಂಸ್ಥೆಗಳು ಎಫ್‌ಸಿಆರ್‌ಎ ನಿಯಮವನ್ನು ಬೈಪಾಸ್ ಮಾಡುವುದಕ್ಕೆ ಕಲಿತಿದ್ದಾರೆ.
ಇದು ಈಗಾಗಲೇ ಬಂದ ಹಣ ಹಾಗೂ ಈಗಾಗಲೇ ನಿಂತು ಹೋದ ಹಣದಿಂದ ನಿರ್ಮಾಣವಾದ ಸ್ವತ್ತನ್ನು ನಿಯಂತ್ರಣ ಮಾಡುತ್ತದೆಯೇ ಹೊರತು, ಹಣ ಬರುವುದನ್ನು ಈಗಾಗಲೇ ನಿಯಂತ್ರಿಸುವ ಕ್ರಮ ಆಗಿದೆ. ಕಂಪನಿಗಳು ಈಗ ಸಿಎಸ್‌ಆರ್‌ ಫಂಡ್‌ ಮೂಲಕ ಬರುತ್ತಿವೆ. ಸತ್ತುಹೋದ ಕಂಪನಿಗಳಿಗೆ ಲಾಭ ತೋರಿಸಿ, ಆ ಲಾಭದಲ್ಲಿನ ಒಂದು ಪ್ರಮಾಣವನ್ನು ಸಾಮಾಜಿಕ ಸೇವೆಗೆ ಬಳಸುತ್ತೇವೆ ಎಂದು ನೆಪ ತೋರಿಸಿ, ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಮೊನ್ನೆ ಸಿಜೆಪಿ ಪ್ರತಿಭಟನೆ ನಡೆದಾಗ ಬಂದ ಅಷ್ಟೂ ಹಣ ಎಫ್‌ಸಿಆರ್‌ಎಯದ್ದಲ್ಲ. ಬದಲಿಗೆ ಸಿಎಸ್‌ಆರ್ ಫಂಡ್‌ನದ್ದು ಎಂಬುದು ನೆನಪಿರಲಿ!
ಎಫ್‌ಸಿಆರ್‌ಎ ನಿಯಮವನ್ನು ಬದಲಿಸುತ್ತಾ ಇರೋದು ಈಗಾಗಲೇ ಸೂತ್ರಧಾರರಿಲ್ಲದ ಸ್ವತ್ತಿಗೆ ಒಂದು ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಸರ್ಕಾರಕ್ಕೆ ಅವಕಾಶ ನೀಡುತ್ತದೆ. ಈವರೆಗೆ ಸುಮಾರು 37 ಸಾವಿರ ಸಂಸ್ಥೆಗಳ ಎಫ್‌ಸಿಆರ್‌ಎ ನೋಂದಣಿ ರದ್ದಾಗಿದೆ. ಈ ಸಂಸ್ಥೆಗಳು ಯಾವ್ಯಾವುದೋ ಉದ್ದೇಶಕ್ಕೆ ಸಾವಿರಾರು ಕೋಟಿ ರೂ. ಹಣ ತಂದಿದ್ದವು. ಇದರಿಂದ ಇವರು ಕಟ್ಟಡ ಕಟ್ಟಿದ್ದಿರಬಹುದು, ಆಸ್ತಿ ಖರೀದಿ ಮಾಡಿದ್ದಿರಬಹುದು. ಈ ಆಸ್ತಿಯನ್ನೆಲ್ಲ ಏನು ಮಾಡಬೇಕು ಎಂಬ ಗೊಂದಲ ಕಳೆದ 2-3 ವರ್ಷಗಳಿಂದ ಶುರುವಾಗಿತ್ತು. ಇದಕ್ಕೊಂದು ಪರಿಹಾರವಾಗಿ ಈ ಮಸೂದೆ ಬಂದಿದೆ.
ಭಾರತದ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಜನರ ಸುಪರ್ದಿಗೇ ಒದಗಿಸುವ ನಿಯಮದ ಜೊತೆಗೆ, ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಬುಡಮೇಲು ಮಾಡುವುದಕ್ಕೆ ಪ್ರಯತ್ನಿಸುವ ಸಿಎಸ್‌ಆರ್ ಫಂಡ್ ಬಳಕೆಯನ್ನು ನಿಯಂತ್ರಿಸುವ ಮಸೂದೆಯೂ ಇದರೊಟ್ಟಿಗೆ ಬರಬೇಕಿದೆ. ಆಗ ಮಾತ್ರ ವಿದೇಶಿ ಶಕ್ತಿಗಳು ಭಾರತದ ಒಳಗೆ ಹೊಕ್ಕು ಬುಡಮೇಲು ಮಾಡುವ ಪ್ರಯತ್ನಕ್ಕೆ ಹೊಡೆತ ಕೊಟ್ಟಂತಾಗುತ್ತದೆ.

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 0
Wow Wow 0