ತಾಳಗುಪ್ಪ–ಶಿರಸಿ–ಹುಬ್ಬಳ್ಳಿ ರೈಲು ಮಾರ್ಗಕ್ಕೆ ಹೊಸ ನಿರೀಕ್ಷೆ: ಸರ್ವೇ ಕಾರ್ಯ ಪ್ರಗತಿಯಲ್ಲಿ, DPR ಬಳಿಕ ರೈಲ್ವೆ ಬೋರ್ಡ್‌ಗೆ!
ಆಪ್ತ ನ್ಯೂಸ್ ಶಿರಸಿ:
ಉತ್ತರ ಕನ್ನಡ ಹಾಗೂ ಮಲೆನಾಡಿನ ಬಹುಕಾಲದ ರೈಲು ಸಂಪರ್ಕದ ಬೇಡಿಕೆಗೆ ಇದೀಗ ಮತ್ತೊಮ್ಮೆ ಆಶಾಕಿರಣ ಮೂಡಿದೆ. ತಾಳಗುಪ್ಪ–ಸಿದ್ದಾಪುರ–ಶಿರಸಿ–ಮುಂಡಗೋಡ–ತಡಸ್–ಹುಬ್ಬಳ್ಳಿ ರೈಲು ಮಾರ್ಗದ ಸರ್ವೇ ಕಾರ್ಯ ಪ್ರಗತಿಯಲ್ಲಿದ್ದು, ಸರ್ವೇ ಪೂರ್ಣಗೊಂಡ ಬಳಿಕ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸಿ ರೈಲ್ವೆ ಬೋರ್ಡ್‌ಗೆ ಸಲ್ಲಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಉತ್ತರ ಕನ್ನಡ ಮತ್ತು ಮಲೆನಾಡು ಪ್ರದೇಶಗಳ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈ ರೈಲು ಮಾರ್ಗವನ್ನು ರಾಷ್ಟ್ರೀಯ ಆದ್ಯತೆಯ ಪ್ರವಾಸೋದ್ಯಮ ಸಂಪರ್ಕ ಯೋಜನೆಯಾಗಿ ಪರಿಗಣಿಸಿ, ತ್ವರಿತ ಅನುಷ್ಠಾನಕ್ಕೆ ರೈಲ್ವೆ ಸಚಿವಾಲಯಕ್ಕೆ ಶಿಫಾರಸು ಮಾಡುವಂತೆ ಶಿರಸಿಯ ವೈದ್ಯ ಡಾ. ರವಿಕಿರಣ ಪಟವರ್ಧನ ಅವರು ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ದೂರು ಸಲ್ಲಿಸಿದ್ದರು.
2026ರ ಜುಲೈ 16ರಂದು ನೋಂದಾಯಿಸಲಾದ DTOUR/E/2026/0001420 ದೂರಿನಲ್ಲಿ, ಸುಮಾರು 167 ಕಿ.ಮೀ. ಉದ್ದದ ತಾಳಗುಪ್ಪ–ಸಿದ್ದಾಪುರ–ಶಿರಸಿ–ಮುಂಡಗೋಡ–ತಡಸ್–ಹುಬ್ಬಳ್ಳಿ ರೈಲು ಮಾರ್ಗವನ್ನು ಕೇವಲ ರೈಲ್ವೆ ಯೋಜನೆಯಾಗಿ ನೋಡದೆ, ‘ರಾಷ್ಟ್ರೀಯ ಪ್ರವಾಸೋದ್ಯಮ ಸಂಪರ್ಕ ಕಾರಿಡಾರ್’ ಆಗಿ ಪರಿಗಣಿಸಬೇಕು ಎಂದು ಮನವಿ ಮಾಡಲಾಗಿತ್ತು.
ಪ್ರವಾಸೋದ್ಯಮಕ್ಕೆ ದೊಡ್ಡ ಬಲ
ಜೋಗ ಜಲಪಾತ, ಶಿರಸಿ ಮಾರಿಕಾಂಬಾ ದೇವಸ್ಥಾನ, ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಬನವಾಸಿಯ ಮಧುಕೇಶ್ವರ ದೇವಸ್ಥಾನ, ಸಹಸ್ರಲಿಂಗ, ಯಾಣ, ಮಗೋಡ ಮತ್ತು ಉಂಚಳ್ಳಿ ಜಲಪಾತಗಳು, ದಾಂಡೇಲಿ–ಕಾಳಿ ಹುಲಿ ಸಂರಕ್ಷಿತ ಪ್ರದೇಶ ಸೇರಿದಂತೆ ಉತ್ತರ ಕನ್ನಡ ಹಾಗೂ ಮಲೆನಾಡಿನ ಹಲವು ಪ್ರಮುಖ ಪ್ರವಾಸಿ ತಾಣಗಳನ್ನು ಈ ರೈಲು ಸಂಪರ್ಕವು ಪರೋಕ್ಷವಾಗಿ ಅಥವಾ ನೇರವಾಗಿ ಸಂಪರ್ಕಿಸುವ ಸಾಮರ್ಥ್ಯ ಹೊಂದಿದೆ.
ಅದೇ ರೀತಿ ಗೋಕರ್ಣ, ಮುರುಡೇಶ್ವರ ಹಾಗೂ ಕಾರವಾರದ ಯಾತ್ರಾ ಮತ್ತು ಕಡಲತೀರ ಪ್ರವಾಸೋದ್ಯಮಕ್ಕೂ ಈ ಮಾರ್ಗ ಪೂರಕವಾಗಲಿದೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
‘ಅಂತಿಮ ಮಂಜೂರಾತಿ’ ಇನ್ನೂ ಇಲ್ಲ
ಆದರೆ ರೈಲ್ವೆ ಇಲಾಖೆಯ ಉತ್ತರದಲ್ಲಿ ಯೋಜನೆಗೆ ಅಂತಿಮ ಮಂಜೂರಾತಿ ದೊರೆತಿದೆ ಎಂದು ಎಲ್ಲಿಯೂ ಹೇಳಲಾಗಿಲ್ಲ ಎಂಬುದು ಗಮನಾರ್ಹ.
ಪ್ರಸ್ತುತ ಸರ್ವೇ ಕಾರ್ಯ ನಡೆಯುತ್ತಿದೆ. ಸರ್ವೇ ಪೂರ್ಣಗೊಂಡ ನಂತರ DPR ಸಿದ್ಧಪಡಿಸಿ ರೈಲ್ವೆ ಬೋರ್ಡ್‌ಗೆ ಸಲ್ಲಿಸುವುದು ಮುಂದಿನ ಹಂತವಾಗಿದೆ. ಹೀಗಾಗಿ ಈ ರೈಲು ಮಾರ್ಗ ಇನ್ನೂ ಅನುಮೋದನೆ ಹಾಗೂ ಅನುಷ್ಠಾನದ ಹಂತ ತಲುಪಿಲ್ಲ.
ಇತ್ತ ಕೇಂದ್ರ ಪ್ರವಾಸೋದ್ಯಮ ಇಲಾಖೆಯಲ್ಲಿ ದಾಖಲಾಗಿದ್ದ ಡಾ. ರವಿಕಿರಣ ಪಟವರ್ಧನ ಅವರ ದೂರು ಆಗಸ್ಟ್ 6ರಂದು ಪ್ರಕರಣ ಮುಕ್ತಾಯಗೊಳಿಸಲಾಗಿದೆ ಎಂದು ದಾಖಲಿಸಲಾಗಿದೆ. ಆದರೆ ರೈಲ್ವೆ ಇಲಾಖೆಯ ಉತ್ತರದಲ್ಲಿ ಸರ್ವೇ ಕಾರ್ಯ ಮುಂದುವರಿದಿರುವುದರಿಂದ, ಈ ಮಹತ್ವಾಕಾಂಕ್ಷಿ ರೈಲು ಮಾರ್ಗದ ಮುಂದಿನ ಬೆಳವಣಿಗೆ ಇದೀಗ ಸರ್ವೇ ಫಲಿತಾಂಶ ಮತ್ತು DPR ಮೇಲೆ ಅವಲಂಬಿತವಾಗಿದೆ.
ಬಹುಕಾಲದ ಬೇಡಿಕೆಯಾಗಿರುವ ಈ ರೈಲು ಮಾರ್ಗ ನಿಜಕ್ಕೂ ಕಾರ್ಯರೂಪಕ್ಕೆ ಬಂದರೆ, ಉತ್ತರ ಕನ್ನಡ–ಮಲೆನಾಡಿನ ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕತೆ ಹಾಗೂ ಸಾರಿಗೆ ಸಂಪರ್ಕಕ್ಕೆ ಮಹತ್ವದ ಬದಲಾವಣೆ ತರಬಲ್ಲ ಸಾಧ್ಯತೆ ಇದೆ.
What's Your Reaction?
Like
1
Dislike
0
Love
1
Funny
0
Angry
0
Sad
0
Wow
0