ಸೆ.3ರಂದು ಗೋಕರ್ಣ–ಕಾರವಾರ–ಅಂಕೋಲಾ ಚಲೋ: ‘ಗಂಗಾವಳಿ–ಕರಾವಳಿ ಉಳಿಸಿ’ ಜಾಗೃತಿ ಜಾಥಾಕ್ಕೆ ಭರದ ಸಿದ್ಧತೆ

Sep 2, 2026 - 18:44
 0  99
ಸೆ.3ರಂದು ಗೋಕರ್ಣ–ಕಾರವಾರ–ಅಂಕೋಲಾ ಚಲೋ: ‘ಗಂಗಾವಳಿ–ಕರಾವಳಿ ಉಳಿಸಿ’ ಜಾಗೃತಿ ಜಾಥಾಕ್ಕೆ ಭರದ ಸಿದ್ಧತೆ

ಆಪ್ತ ನ್ಯೂಸ್ ಶಿರಸಿ/ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ನದಿಗಳು, ಕರಾವಳಿ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿರುವ ಅವೈಜ್ಞಾನಿಕ ಯೋಜನೆಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 3ರಂದು ‘ಗಂಗಾವಳಿ–ಕರಾವಳಿ ಉಳಿಸಿ’ ಜಾಗೃತಿ ಅಭಿಯಾನ ಜಾಥಾ ಹಮ್ಮಿಕೊಳ್ಳಲಾಗಿದೆ.

ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ನಡೆಯಲಿರುವ ಈ ಬೃಹತ್ ಜಾಥಾದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಗೋಕರ್ಣದಿಂದ ಕಾರವಾರ, ಬಳಿಕ ಅಂಕೋಲಾಕ್ಕೆ ಜಾಥಾ

ಸೆಪ್ಟೆಂಬರ್ 3ರಂದು ಬೆಳಿಗ್ಗೆ 9.30ಕ್ಕೆ ಗೋಕರ್ಣಕ್ಕೆ ತಲುಪಿ ಉಪಹಾರ ಸೇವನೆಯ ಬಳಿಕ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸುವ ಕಾರ್ಯಕ್ರಮ ನಿಗದಿಯಾಗಿದೆ. ನಂತರ ಕಾರವಾರಕ್ಕೆ ತೆರಳಿ ನಗರಸಭೆಗೆ ಮನವಿ ಸಲ್ಲಿಕೆ, ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಹಾಗೂ ಬೃಹತ್ ಸಭೆ ನಡೆಯಲಿದೆ. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಕಾರವಾರದ ಪ್ರಮುಖರು ಮಾಡಲಿದ್ದಾರೆ.

ಬಳಿಕ ಮಧ್ಯಾಹ್ನ 3.30ಕ್ಕೆ ಅಂಕೋಲಾ ತಾಲೂಕು ಪಂಚಾಯಿತಿಗೆ ತೆರಳಿ ಮನವಿ ಸಲ್ಲಿಸಿ ಜಾಥಾ ವಾಪಸಾಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

‘ಇದು ಎಲ್ಲರ ಅಳಿವು–ಉಳಿವಿನ ಪ್ರಶ್ನೆ’

ಗಂಗಾವಳಿ–ಕರಾವಳಿ ಪ್ರದೇಶದ ನದಿಗಳು ಹಾಗೂ ಪರಿಸರಕ್ಕೆ ಹಾನಿಯಾಗಬಹುದಾದ ಯೋಜನೆಗಳ ವಿರುದ್ಧ ನಡೆಯುತ್ತಿರುವ ಈ ಅಭಿಯಾನ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಲ್ಲ. ಜಿಲ್ಲೆಯ ಜನಜೀವನ, ನದಿಗಳು, ಕಾಡು, ಕೃಷಿ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆಯಾಗಿದೆ ಎಂದು ಮಹಾಸಂಸ್ಥಾನದ ಕರೆಯೋಲೆಯಲ್ಲಿ ತಿಳಿಸಲಾಗಿದೆ.

16 ಸೀಮೆಗಳ ಶಿಷ್ಯರು ಸೇರಿದಂತೆ ರಾಮಕ್ಷತ್ರಿಯ, ಸಿದ್ಧಿ, ಕುಣಬಿ, ಮರಾಠಿ ಸಮಾಜದ ಬಂಧುಗಳು, ತಾಯಂದಿರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿದೆ.

ಕುಳಿನಾಡು, ಕರೂರು ಹಾಗೂ ಭರತನಹಳ್ಳಿ ಸೀಮೆಗಳು ಈಗಾಗಲೇ ಸಿದ್ಧತೆ ಚುರುಕುಗೊಳಿಸಿದ್ದು, ಪ್ರತಿಯೊಂದು ಸೀಮೆಯಿಂದ ಕನಿಷ್ಠ 15 ವಾಹನಗಳಲ್ಲಿ 75ಕ್ಕೂ ಅಧಿಕ ಮಂದಿ, ಭಾಗೀ ಸೀಮೆಗಳಿಂದ ಕನಿಷ್ಠ 25 ಮಂದಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಒಟ್ಟಾರೆ 500ಕ್ಕೂ ಹೆಚ್ಚು ಮಂದಿ ಒಂದೇ ಕುಟುಂಬದಂತೆ ಜಾಥಾದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಲಾಗಿದೆ.

‘ನದಿ ಉಳಿದರೆ ನಾಡು ಉಳಿಯುತ್ತದೆ’

“ನದಿ ನಮ್ಮ ಜೀವ, ನಿಸರ್ಗ ನಮ್ಮ ಹೆಮ್ಮೆ”, “ಗಂಗಾವಳಿ ಉಳಿಸಿರಿ, ಕರಾವಳಿ ಬೆಳೆಸಿರಿ” ಎಂಬ ಸಂದೇಶದೊಂದಿಗೆ ನಡೆಯಲಿರುವ ಜಾಥಾದಲ್ಲಿ ನದಿ ಸಂರಕ್ಷಣೆಯ ಘೋಷಣೆಗಳು ಮೊಳಗಲಿವೆ.

“ಬೇಡ್ತಿ ನೀರನ್ನು ಬಿಡೆವು ಬಿಡೆವು, ಅಘನಾಶಿನಿ ನೀರನ್ನು ಕೊಡೆವು ಕೊಡೆವು”
“ನದಿಗಳು ಉಳಿದರೆ ಉಳಿವುದು ನಾಡು, ನದಿಗಳು ಅಳಿದರೆ ಅಳಿವುದು ನಾಡು”
“ನದಿ ಉಳಿಸಿ–ನಾಡು ಉಳಿಸಿ, ಮುಂದಿನ ಪೀಳಿಗೆಗೆ ಬದುಕು ಉಳಿಸಿ”
“ಪರಿಸರ ಉಳಿಯಲಿ–ಪರಂಪರೆ ಬೆಳೆಯಲಿ”

ಎಂಬ ಘೋಷಣೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.

ಜಿಲ್ಲೆಯ ಪರಿಸರ, ನದಿಗಳು ಹಾಗೂ ಕರಾವಳಿಯ ಸಂರಕ್ಷಣೆಯ ಹಿತದೃಷ್ಟಿಯಿಂದ ಸೆಪ್ಟೆಂಬರ್ 3ರಂದು ಹೆಚ್ಚಿನ ಸಂಖ್ಯೆಯಲ್ಲಿ ಜಾಥಾದಲ್ಲಿ ಪಾಲ್ಗೊಂಡು ಬೆಂಬಲ ನೀಡಬೇಕು ಎಂದು ಸಾರ್ವಜನಿಕರಲ್ಲಿ ಆಯೋಜಕರು ಮನವಿ ಮಾಡಿದ್ದಾರೆ.

“ಇಂದು ನಾವು ಮೌನವಾದರೆ, ನಾಳೆ ಉಸಿರಾಡಲೂ ಕಷ್ಟ; ಎಚ್ಚೆತ್ತುಕೊಳ್ಳಿ ಕನ್ನಡಿಗರೇ” ಎಂಬ ಸಂದೇಶದೊಂದಿಗೆ ‘ಗಂಗಾವಳಿ–ಕರಾವಳಿ ಉಳಿಸಿ’ ಜಾಗೃತಿ ಜಾಥಾ ಜಿಲ್ಲೆಯ ಗಮನ ಸೆಳೆಯಲು ಸಜ್ಜಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0