ಆಗಸ್ಟ್ 29.... ನಮ್ಮ ನಾಡು ಕಂಡ ಓರ್ವ ಮೌಲ್ಯಾಧಾರಿತ ರಾಜಕೀಯ ಮುತ್ಸದ್ದಿಯ ನೂರನೇ ಜನುಮ ದಿನ.
ಹೌದು. ಶ್ರೀ ರಾಮಕೃಷ್ಣ_ಹೆಗಡೆ ಯವರ 100 ನೇ ವರ್ಷದ ಜನುಮದಿನದ ಆಚರಣೆಯ ದಿನ.
ನಾನು ಶ್ರೀ ರಾಮಕೃಷ್ಣ ಹೆಗಡೆಯವರನ್ನು ಮೊತ್ತಮೊದಲು ಕಂಡದ್ದು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ 1975ರ ನವೆಂಬರ್ ತಿಂಗಳಲ್ಲಿ. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅವರನ್ನು ಬಂಧಿಸಿ ಒಳ ತರುವ ಮುನ್ನವೇ ನಾನು ಅಲ್ಲಿ MISA ಬಂಧಿಯಾಗಿದ್ದೆ.
ಆ ದಿನಗಳಲ್ಲಿ ನನಗೆ ಸಿಕ್ಕ ಸಹವಾಸ ಎಂತೆಂತಹ ಮಹನೀಯರದ್ದು! ಶ್ರೀ ಎಲ್ ಕೆ ಅಡ್ವಾಣಿ, ಮಧು ದಂಡವತೆ, ಶಾಮನಂದನ ಮಿಶ್ರ, ರಾಮಕೃಷ್ಣ ಹೆಗಡೆ, ದೇವೇಗೌಡರು, ಜೆ ಹೆಚ್ ಪಟೇಲ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಇಂದಿನ ಮಾನ್ಯ ಸರಸಹಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸ ಬಾಳೆ ಯವರು ಸೇರಿದಂತೆ ಅನೇಕ ಶ್ರೇಷ್ಠ ನಾಯಕರು, ಎಬಿವಿಪಿ ಧುರೀಣರು, ವಿವಿಧ ರಾಜಕೀಯ ಪಕ್ಷಗಳ ನೇತಾರರು...
ಇಂತಹ ವಾತಾವರಣದಲ್ಲಿ ಸುಮಾರು 15 ತಿಂಗಳ ಕಾಲ ನಾನು ನಿಜವಾದ ರಾಜಕೀಯ ಶಿಕ್ಷಣ ಪಡೆದೆ.
ಆ ದಿನಗಳಲ್ಲಿಯೇ ಅವರದು ದೊಡ್ಡ ಹೆಸರಾಗಿತ್ತು. ಉತ್ತಮ ಹಣಕಾಸು ಸಚಿವರೆಂದೇ ಅವರು ಪ್ರಸಿದ್ಧ ರಾಗಿದ್ದರು. ಶ್ರೀ ವೀರೇಂದ್ರ ಪಾಟೀಲ್ ಮತ್ತು ಶ್ರೀ ರಾಮಕೃಷ್ಣ ಹೆಗಡೆಯವರನ್ನು ಲವ-ಕುಶ ಎಂದೇ ಗುರುತಿಸಲಾಗುತ್ತಿತ್ತು.
ಹೆಗಡೆ ಅವರ ವ್ಯಕ್ತಿತ್ವ, ಮಾತನಾಡುವ ಶೈಲಿ... ಗಳಿಂದ ಮೊದಲನೆಯ ಭೇಟಿಯಲ್ಲಿಯೇ ನಾನು ಆಕರ್ಷಿತನಾಗಿದ್ದೆ. ಜೈಲಿನಲ್ಲಿ ಅವರಿಂದ ಹಲವಾರು ವಿಷಯಗಳ ಕುರಿತು ಉಪನ್ಯಾಸಗಳನ್ನು ಆಲಿಸುವ ಅದೃಷ್ಟ ನನ್ನದಾಗಿತ್ತು.
1978 ರ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ಸ್ಪರ್ಧಿಸಿದಾಗ, ಶ್ರೀ ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡಿಸ್ ರಂತಹ ದಿಗ್ಗಜರ ಜೊತೆಗೂಡಿ ನಾವೆಲ್ಲ ಶ್ರೀ ವೀರೇಂದ್ರ ಪಾಟೀಲರ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ದಿನಗಳು ಮನಸ್ಸಿನಲ್ಲಿ ಹಸಿರಾಗಿಯೇ ಉಳಿದಿವೆ.
1983 ರಲ್ಲಿ ಶ್ರೀರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಐತಿಹಾಸಿಕ ವಿದ್ಯಮಾನದ ಹಿಂದುಗಡೆ ನಮ್ಮ ಬಿಜೆಪಿ ಪಕ್ಷದ 18 ಶಾಸಕರ ಬಾಹ್ಯ ಬೆಂಬಲವೂ ಕಾರಣ ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ.
ಅಂದು ನಮ್ಮ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಕರ್ನಾಟಕ ರಾಜ್ಯದ ಮೊಟ್ಟಮೊದಲ ಕಾಂಗ್ರೆಸ್ಸೇತರ ಸರ್ಕಾರ ಬರುವುದಕ್ಕೆ ಬಿಜೆಪಿ ಭೇಷರತ್ ಬೆಂಬಲ ಕೊಡುತ್ತದೆ ಎಂದು ಘೋಷಿಸಿ ಅದನ್ನು ಸಾಧ್ಯವಾಗಿಸಿದ್ದರು.
ನಾನು ಇಂದು ಶ್ರೀ ರಾಮಕೃಷ್ಣ ಹೆಗಡೆಯವರ ಕುರಿತು ಬಹಳ ಗೌರವದ ಭಾವನೆಗಳಿಂದ ಬರೆಯುವುದಕ್ಕೆ ಮತ್ತೊಂದು ಮಹತ್ವದ ಕಾರಣವಿದೆ.
1983 ರಲ್ಲಿ ಶ್ರೀ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಆಗಿ ಜವಾಬ್ದಾರಿ ಸ್ವೀಕರಿಸಿದ ತಕ್ಷಣ ಕೈಗೊಂಡ ಪ್ರಮುಖ ನಿರ್ಧಾರವೆಂದರೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವುದಾಗಿ ಘೋಷಿಸಿದ್ದು.
ತತ್ಪರಿಣಾಮವಾಗಿ ಬೆಂಗಳೂರು ನಗರಸಭೆಯ ಚುನಾವಣೆಗಳು 1983ರ ಆಗಸ್ಟ್ ತಿಂಗಳಲ್ಲಿ ನಡೆದವು.
ನಮ್ಮ ಪಕ್ಷದಿಂದ ನನ್ನನ್ನು ಅಂದಿನ ಶ್ರೀರಾಮಪುರ ವಿಭಾಗದಿಂದ ಅಭ್ಯರ್ಥಿಯೆಂದು ಘೋಷಿಸಲಾಗಿತ್ತು. ನಮ್ಮ ಬಾಹ್ಯ ಬೆಂಬಲದಿಂದ ಇಲ್ಲಿನ ಸರ್ಕಾರ ರಚಿತವಾಗಿದ್ದರೂ ಸಹ, ಅಂದಿನ ಜನತಾ ಪಾರ್ಟಿ ಜೊತೆ ಮೈತ್ರಿಕೂಟದಲ್ಲಿದ್ದ ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ಅಭ್ಯರ್ಥಿ ನನ್ನ ಎದುರಾಳಿಯಾಗಿದ್ದರು.
ಜನತಾ ಸರ್ಕಾರದ ಘಟಾನುಘಟಿ ಮಂತ್ರಿಗಳೆಲ್ಲ ಬಂದು ನನ್ನ ವಿರೋಧಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದರು. ಆದರೆ ನಮ್ಮ ಕಾರ್ಯಕರ್ತರ ಪರಿಶ್ರಮದ ಕಾರಣ ಆ ಚುನಾವಣೆಯಲ್ಲಿ ನಾನು ವಿಜೇತನಾದೆ.
ಒಂದೊಮ್ಮೆ ಶ್ರೀ ರಾಮಕೃಷ್ಣ ಹೆಗಡೆಯವರು 1983 ರ ಆ ಚುನಾವಣೆ ಘೋಷಿಸದಿರದಿದ್ದರೆ ನಾನು ಇಂದು ಈ ಪೋಸ್ಟ್ ಬರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ನಾನು ಇಂದಿನ ನಾನಾಗಲು ಸಾಧ್ಯವೇ ಆಗುತ್ತಿರಲಿಲ್ಲ.
ನಾನು ನಗರಸಭಾ ಸದಸ್ಯನಾಗಿದ್ದಾಗ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರದ ವೈಖರಿಯನ್ನು ಗಮನಿಸುತ್ತಾ ಬಂದಿದ್ದೆ. ಇಡೀ ದೇಶದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ಒಂದು ಸ್ವರೂಪ ಕೊಟ್ಟ ಹೆಗ್ಗಳಿಕೆ ಶ್ರೀ ರಾಮಕೃಷ್ಣ ಹೆಗಡೆ ಮತ್ತು ಅವರ ಆತ್ಮೀಯರಾಗಿದ್ದ ಮತ್ತೋರ್ವ ಶ್ರೇಷ್ಠ ನಾಯಕ ದಿವಂಗತ ನಜೀರ್ ಸಾಬ್ ರವರದ್ದು.
ಒಮ್ಮೆ ಕುಡಿಯುವ ನೀರಿಗಾಗಿ ಬೆಂಗಳೂರಿನಲ್ಲಿ ತೀವ್ರ ತೊಂದರೆ ಉಂಟಾದಾಗ, ನಾನು ನನ್ನ ಕ್ಷೇತ್ರದ ನಾಗರಿಕರನ್ನು ಕರೆದುಕೊಂಡು ಶ್ರೀ ಹೆಗಡೆಯವರ ನಿವಾಸದ ಮುಂದೆ ಹೋಗಿ ಕುಡಿಯುವ ನೀರಿಗಾಗಿ ಆಗ್ರಹ ಪತ್ರವನ್ನು ಕೊಟ್ಟ ಪರಿಣಾಮವಾಗಿ ಮಾರನೇ ದಿನವೇ ಅಂದಿನ ನಗರಾಭಿವೃದ್ಧಿ ಸಚಿವ ಶ್ರೀ ಲಕ್ಷ್ಮಿಸಾಗರ್ ಅವರು ನನ್ನ ಕ್ಷೇತ್ರಕ್ಕೆ ಬಂದು ನನ್ನೊಡನೆ ನಮ್ಮ ವಿಭಾಗದ ಎಲ್ಲ ರಸ್ತೆಗಳಲ್ಲಿ ಓಡಾಡಿದ್ದು ಒಂದು ದೊಡ್ಡ ಸುದ್ದಿಯೇ ಆಗಿತ್ತು.
ಒಮ್ಮೆ ಬೆಂಗಳೂರಿನಲ್ಲಿ ಸರ್ಕಾರ ನಡೆಸಿದ ಕಾರ್ಯಕ್ರಮ ಒಂದರಲ್ಲಿ ಬೆಂಗಳೂರಿನ ಮೇಯರ್ ಆಗಿದ್ದ ಶ್ರೀ ಎಂ.ಎಲ್ ಸುಬ್ಬರಾಜುರವರನ್ನು ಕಡೆಗಾಣಿಸಿದ್ದನ್ನು ನಾನು ತೀವ್ರವಾಗಿ ಪ್ರತಿಭಟಿಸಿದ್ದೆ. ನನ್ನ ವಿರೋಧವನ್ನು ಬಹಳ ಸಹಜವಾಗಿ ಮತ್ತು ಅತ್ಯಂತ ಆರೋಗ್ಯಕರವಾಗಿ ಸ್ವೀಕರಿಸಿದ ವೈಖರಿ ಶ್ರೀ ಹೆಗಡೆ ಯವರದಾಗಿತ್ತು. ಅವರು ನಿಜಕ್ಕೂ ಸಹಜ ಪ್ರಜಾತಂತ್ರ ಪ್ರೇಮಿಯಾಗಿದ್ದರು.
ತನ್ನ ಪದವಿ ಶಿಕ್ಷಣ ಪಡೆದ ನಂತರ, ಸ್ವಂತ ವಿನೋಬಾ ಭಾವೆ ಅವರ ಆಶ್ರಮದಲ್ಲಿ ಶ್ರೀ ಹೆಗಡೆಯವರಿಗೆ ದೊರಕಿದ ಶಿಕ್ಷಣ ನಿಜಕ್ಕೂ ಅನನ್ಯ.
ಎಂದಿಗೂ ಸಹ ಜಾತಿ ರಾಜಕಾರಣ ಮಾಡದೆ, ತಮ್ಮ ಕುಟುಂಬದವರನ್ನು ರಾಜಕೀಯ ವಲಯದಲ್ಲಿ ಬರದಂತೆ ನೋಡಿಕೊಂಡ, ಎಲ್ಲರನ್ನೂ ಬಹುವಚನದಲ್ಲಿ ಗೌರವದಿಂದ ಸಂಬೋಧಿಸುವುದನ್ನು ತಮ್ಮ ಪ್ರವೃತ್ತಿಯನ್ನಾಗಿ ಮಾಡಿಕೊಂಡ ಶ್ರೀ ರಾಮಕೃಷ್ಣ ಹೆಗಡೆಯವರ ವ್ಯಕ್ತಿತ್ವ ಇಂದಿನ ದಿನಗಳ ಕಲುಷಿತ ರಾಜಕೀಯ ಮಾನಸಿಕತೆಯ ಹಿನ್ನೆಲೆಯಲ್ಲಿ ನೋಡಿದಾಗ ನಿಜಕ್ಕೂ ಅವರದ್ದು ಅಪರೂಪದಲ್ಲಿ ಅಪರೂಪವೆಂದೇ ಘಂಟಾಘೋಷವಾಗಿ ಹೇಳಬಹುದು.
ಅವರು ಮುಖ್ಯಮಂತ್ರಿಗಳಾಗಿದ್ದಾಗ ಸದನದಲ್ಲಿ ಅವರಾಡಿರುವ ಮಾತುಗಳ ಬಗ್ಗೆ ಅಧ್ಯಯನ ಮಾಡಲು ಪುಟಗಳನ್ನು ತಿರುಗಿಸಿದಾಗ ನಿಜಕ್ಕೂ ಅತ್ಯಂತ ಪ್ರೇರಣಾದಾಯಿ ಘಟನೆಗಳು ಲಭ್ಯವಾಗುತ್ತವೆ.
ರಾಜಕಾರಣಕ್ಕೆ ಎಲ್ಲಾ ರೀತಿಯಿಂದ ಸದ್ಭಾವನೆ ಬರುವಂತಹ ರೀತಿಯಲ್ಲಿ, ಅತ್ಯಂತ ಸದುದ್ದೇಶದಿಂದ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ನಾಡು ಕಂಡ ಎತ್ತರದ ನಾಯಕ ಶ್ರೀ ರಾಮಕೃಷ್ಣ ಹೆಗಡೆಯವರಿಗೆ ನನ್ನ ಹೃದಯಪೂರ್ವಕ ನಮನಗಳು.
ಅವರು ನಾಡಿನ ಆದರ್ಶ ನಾಯಕರಲ್ಲಿ ಒಬ್ಬರು.