ಕಸ್ತೂರಿ ರಂಗನ್ ವರದಿ ಕೈಬಿಡಲು ಸರ್ಕಾರದ ಅಭಯ: ಶಿರಸಿ–ಸಿದ್ದಾಪುರ ಜನರ ಹಿತರಕ್ಷಣೆಗೆ ಭೀಮಣ್ಣ ನಾಯ್ಕ ಒತ್ತಾಯ
ಆಪ್ತ ನ್ಯೂಸ್ ಶಿರಸಿ:
ಪಶ್ಚಿಮ ಘಟ್ಟಗಳ ಸಂರಕ್ಷಣೆ ಹೆಸರಿನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕಸ್ತೂರಿ ರಂಗನ್ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಶಿರಸಿ–ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ, ವರದಿಯಿಂದ ಉತ್ತರ ಕನ್ನಡ ಜಿಲ್ಲೆಯ ರೈತರು, ಅರಣ್ಯವಾಸಿಗಳು, ಬುಡಕಟ್ಟು ಜನಾಂಗ ಹಾಗೂ ಸಾಮಾನ್ಯ ಜನರ ಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದಾರೆ.
ಈ ಸಂಬಂಧ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿಯಾದ ಶಾಸಕ ಭೀಮಣ್ಣ ನಾಯ್ಕ, ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಸುದೀರ್ಘವಾಗಿ ಚರ್ಚಿಸಿ ಮನವಿ ಸಲ್ಲಿಸಿದ್ದಾರೆ.
604 ಗ್ರಾಮಗಳ ಸೇರ್ಪಡೆಗೆ ವಿರೋಧ
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಪಶ್ಚಿಮ ಘಟ್ಟದ 59,949 ಚದರ ಕಿಲೋಮೀಟರ್ ಪ್ರದೇಶವನ್ನು ಇಕೋ ಸೆನ್ಸಿಟಿವ್ ಏರಿಯಾ (ESA) ವ್ಯಾಪ್ತಿಗೆ ತರಲಾಗುತ್ತದೆ. ಇದರಿಂದ ಸ್ಥಳೀಯ ಜನರ ದೈನಂದಿನ ಜೀವನ, ಕೃಷಿ ಚಟುವಟಿಕೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುವ ಆತಂಕವಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.
ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ 604 ಗ್ರಾಮಗಳು ಪ್ರಸ್ತಾವಿತ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿದ್ದು, ಶಿರಸಿ ತಾಲೂಕಿನ 125 ಹಾಗೂ ಸಿದ್ದಾಪುರ ತಾಲೂಕಿನ 103 ಗ್ರಾಮಗಳು ಇದರಲ್ಲಿ ಸೇರಿವೆ ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿಗೂ ನಿರ್ಬಂಧದ ಆತಂಕ
ವರದಿಯಲ್ಲಿರುವ ಪರಿಸರ ನಿರ್ಬಂಧಗಳು ಸ್ಥಳೀಯರ ಅಭಿವೃದ್ಧಿಗೆ ಅಡ್ಡಿಯಾಗಬಹುದು. 20,000 ಚದರ ಮೀಟರ್‌ಗಿಂತ ದೊಡ್ಡ ಕಟ್ಟಡಗಳ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಚಟುವಟಿಕೆಗಳ ಮೇಲೆ ನಿರ್ಬಂಧಗಳು ಎದುರಾಗುವ ಸಾಧ್ಯತೆಯಿದ್ದು, ಇದರಿಂದ ಜನರ ಆರ್ಥಿಕ ಚಟುವಟಿಕೆಗಳು ಮತ್ತು ಭವಿಷ್ಯದ ಅಭಿವೃದ್ಧಿಗೆ ಧಕ್ಕೆಯಾಗಬಹುದು ಎಂದು ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಕೇವಲ ವೈಮಾನಿಕ (Aerial) ದತ್ತಾಂಶವನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದ್ದು, ಸ್ಥಳೀಯ ಜನರ ಅಭಿಪ್ರಾಯ ಮತ್ತು ನೆಲಮಟ್ಟದ ವಾಸ್ತವ ಸ್ಥಿತಿಯನ್ನು ಸಮರ್ಪಕವಾಗಿ ಪರಿಗಣಿಸಲಾಗಿಲ್ಲ ಎಂಬ ಆಕ್ಷೇಪವನ್ನೂ ಸಚಿವರ ಮುಂದಿಟ್ಟಿದ್ದಾರೆ.
“ಮಲೆನಾಡು ಜನರ ಹಿತರಕ್ಷಣೆ ಮುಖ್ಯ” ಎಂದ ಸಚಿವರು
ಶಾಸಕರ ಮನವಿ ಹಾಗೂ ಸ್ಥಳೀಯ ಜನರ ಸಮಸ್ಯೆಗಳ ಕುರಿತು ವಿವರವಾಗಿ ಆಲಿಸಿದ ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಮಲೆನಾಡು ಭಾಗದ ಜನರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
“ಜನಜೀವನಕ್ಕೆ ಮಾರಕವಾಗುವ ಹಾಗೂ ಅಭಿವೃದ್ಧಿಗೆ ತೊಡಕಾಗುವ ಕಸ್ತೂರಿ ರಂಗನ್ ವರದಿಯನ್ನು ಕೈಬಿಡಲಾಗುವುದು” ಎಂದು ಸಚಿವರು ಸ್ಪಷ್ಟ ಭರವಸೆ ನೀಡಿದ್ದಾರೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದ್ದಾರೆ.
ರೈತರು, ಅರಣ್ಯವಾಸಿಗಳು, ಬುಡಕಟ್ಟು ಜನಾಂಗ ಹಾಗೂ ಸ್ಥಳೀಯರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ಶಿರಸಿ–ಸಿದ್ದಾಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ.
“ನಮ್ಮ ಜನರ ಹಕ್ಕುಗಳಿಗಾಗಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತು ರೈತರ ಹಿತಕ್ಕಾಗಿ ನನ್ನ ಹೋರಾಟ ನಿರಂತರ” ಎಂದು ಅವರು ತಿಳಿಸಿದ್ದಾರೆ.
What's Your Reaction?
Like
0
Dislike
0
Love
0
Funny
0
Angry
0
Sad
0
Wow
0



