ಮುರುಡೇಶ್ವರದಲ್ಲಿ ಜಗಳ ಬಿಡಿಸಲು ಹೋದ ಇಬ್ಬರು ಪೊಲೀಸರಿಗೆ ಚಾಕು ಇರಿತ
ಆಪ್ತ ನ್ಯೂಸ್ ಮುರುಡೇಶ್ವರ:
ಕ್ಷುಲ್ಲಕ ಕಾರಣಕ್ಕೆ ರೌಡಿ ಶೀಟರ್‌ಗಳ ಗುಂಪಿನ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ತೆರಳಿದ್ದ ಇಬ್ಬರು ಪೊಲೀಸರ ಮೇಲೆಯೇ ಚಾಕು ದಾಳಿ ನಡೆದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಹವಾಲ್ದಾರ್ ಹಾಗೂ ಕಾನ್ಸ್‌ಟೇಬಲ್ ಚಾಕು ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮುರುಡೇಶ್ವರದ ಕಮಾನಿನ ಸಮೀಪ ಶನಿವಾರ ತಡರಾತ್ರಿ ರೌಡಿ ಶೀಟರ್ ರಾಜು ಹಾಗೂ ಆತನ ಗುಂಪು ಮನೋಜ್ ಎಂಬ ಯುವಕನೊಂದಿಗೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಜಗಳ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ತೆರಳಿದ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ ಶಟ್ಟಿ, ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು, ರಾಜು ಹಾಗೂ ಆತನ ಗುಂಪಿನವರು ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸರಿಗೂ ಚಾಕು ಇರಿತ
ಜಗಳ ನಿಯಂತ್ರಿಸಲು ಮುಂದಾದ ಹವಾಲ್ದಾರ್ ಸಂಗಪ್ಪ ಮತ್ತು ಕಾನ್ಸ್‌ಟೇಬಲ್ ವಿನಾಯಕ ಶಟ್ಟಿ ಅವರ ಮೇಲೆ ಚಾಕುವಿನಿಂದ ಇರಿಯಲಾಗಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಜಗಳದಲ್ಲಿ ಭಾಗಿಯಾಗಿದ್ದ ಮನೋಜ್ ಎಂಬಾತನಿಗೂ ಚಾಕು ಇರಿತವಾಗಿದ್ದು, ಆತ ಗಾಯಗೊಂಡಿದ್ದಾನೆ.
ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಮನೋಜ್‌ನನ್ನು ಮುರುಡೇಶ್ವರ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆತನಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಹವಾಲ್ದಾರ್ ಸಂಗಪ್ಪ ಹಾಗೂ ಕಾನ್ಸ್‌ಟೇಬಲ್ ವಿನಾಯಕ ಶಟ್ಟಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ.
ಐವರ ವಿರುದ್ಧ ಪ್ರಕರಣ ದಾಖಲು
ಪೊಲೀಸರ ಮೇಲೆಯೇ ಚಾಕು ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುರುಡೇಶ್ವರ ಪೊಲೀಸರು, ರಾಜು, ರಿತೀಕ್, ಮದನ್ ನಾಯ್ಕ, ಯೋಗೇಶ್ ಹಾಗೂ ದರ್ಶನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ರಾಜು ಹಾಗೂ ಮನೋಜ್ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೂ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕರ್ತವ್ಯದಲ್ಲಿದ್ದ ಪೊಲೀಸರೇ ಜಗಳ ಬಿಡಿಸುವ ವೇಳೆ ಚಾಕು ಇರಿತಕ್ಕೊಳಗಾದ ಘಟನೆ ಮುರುಡೇಶ್ವರದಲ್ಲಿ ತಡರಾತ್ರಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು. ಪ್ರಕರಣದ ತನಿಖೆ ಮುಂದುವರಿದಿದ್ದು, ದಾಳಿಗೆ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ಹಿನ್ನೆಲೆ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
What's Your Reaction?
Like
0
Dislike
0
Love
0
Funny
1
Angry
0
Sad
0
Wow
0



