ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟ ಭೇದಿಸಿದ ಪೊಲೀಸರು: 11 ಜಾನುವಾರುಗಳ ರಕ್ಷಣೆ, ನಾಲ್ವರ ವಿರುದ್ಧ ಪ್ರಕರಣ

Jul 22, 2026 - 10:20
 0  77
ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟ ಭೇದಿಸಿದ ಪೊಲೀಸರು: 11 ಜಾನುವಾರುಗಳ ರಕ್ಷಣೆ, ನಾಲ್ವರ ವಿರುದ್ಧ ಪ್ರಕರಣ

ಆಪ್ತ ನ್ಯೂಸ್ ಭಟ್ಕಳ:

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಚೆಕ್‌ಪೋಸ್ಟ್ ಸಮೀಪ ಭಟ್ಕಳ ಗ್ರಾಮೀಣ ಪೊಲೀಸರು ನಡೆಸಿದ ವಾಹನ ತಪಾಸಣೆ ವೇಳೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದು, 11 ಜಾನುವಾರುಗಳನ್ನು ರಕ್ಷಿಸಿರುವ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ.

ಜುಲೈ 20ರಂದು ರಾತ್ರಿ ಸುಮಾರು 9.30 ಗಂಟೆ ವೇಳೆಗೆ ರಾಷ್ಟ್ರೀಯ ಹೆದ್ದಾರಿ-66ರ ಶಿರಾಲಿ ಚೆಕ್‌ಪೋಸ್ಟ್ ಬಳಿ ಭಟ್ಕಳ ಗ್ರಾಮೀಣ ಪೊಲೀಸರು ನಿಯಮಿತ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಗುಜರಾತ್ ನೋಂದಣಿಯ ಇಚರ್ ಲಾರಿಯನ್ನು ಅನುಮಾನಾಸ್ಪದವಾಗಿ ಕಂಡು ತಡೆದು ಪರಿಶೀಲಿಸಿದಾಗ, ಅದರೊಳಗೆ 11 ಜಾನುವಾರುಗಳನ್ನು ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.

ಪೊಲೀಸರ ಪರಿಶೀಲನೆಯಲ್ಲಿ ಜಾನುವಾರುಗಳಿಗೆ ಪ್ರಯಾಣದ ವೇಳೆ ಅಗತ್ಯವಾದ ನೀರು ಹಾಗೂ ಮೇವು ಒದಗಿಸದೇ, ಅಮಾನವೀಯವಾಗಿ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ, ಯಾವುದೇ ಕಾನೂನುಬದ್ಧ ಅನುಮತಿ ಪಡೆಯದೇ ಜಾನುವಾರುಗಳನ್ನು ವಧೆ ಮಾಡುವ ಉದ್ದೇಶದಿಂದ ಮುರುಡೇಶ್ವರ ಕಡೆಯಿಂದ ಭಟ್ಕಳದತ್ತ ಸಾಗಿಸಲಾಗುತ್ತಿತ್ತು ಎಂಬ ಆರೋಪವೂ ಪ್ರಾಥಮಿಕ ತನಿಖೆಯಲ್ಲಿ ಹೊರಬಿದ್ದಿದೆ.

ಈ ಸಂಬಂಧ ಭಟ್ಕಳದ ಕೋಕ್ತಿ ನಗರದ ನಿವಾಸಿ ಮೊಹಮ್ಮದ್ ಔಫ್, ಗುಜರಾತ್ ರಾಜ್ಯದ ಬೋಟಾದ ನಿವಾಸಿಗಳಾದ ವಿಜಯಬಾಯ್ ಮಕ್ಕಾನ, ತೇಜಾಬಾಯ್ ಶಿಯಾಲಿಯಾ ಹಾಗೂ ದಿಲೀಪ್‌ಬಾಯ್ ರಾಠೋಡ್ ವಿರುದ್ಧ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಯಾಚರಣೆಯ ವೇಳೆ ಪೊಲೀಸರು ಸುಮಾರು ₹4.60 ಲಕ್ಷ ಮೌಲ್ಯದ 11 ಜಾನುವಾರುಗಳನ್ನು, ₹8 ಲಕ್ಷ ಮೌಲ್ಯದ ಇಚರ್ ಲಾರಿಯನ್ನು ಹಾಗೂ ಜಾನುವಾರುಗಳನ್ನು ಕಟ್ಟಲು ಬಳಸಿದ್ದ ಹಗ್ಗಗಳನ್ನು ವಶಪಡಿಸಿಕೊಂಡಿದ್ದಾರೆ. ರಕ್ಷಿಸಲ್ಪಟ್ಟ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರ ನೇತೃತ್ವದಲ್ಲಿ ನಡೆಸಲಾಗಿದ್ದು, ಪೊಲೀಸ್ ಸಿಬ್ಬಂದಿಗಳಾದ ವಿನೋದ ಕುಮಾರ, ಸಂತೋಷ ನಾಯ್ಕ, ಕಿರಣ ತಿಳಗಂಜಿ ಹಾಗೂ ಮಂಜುನಾಥ ಖಾರ್ವಿ ಭಾಗವಹಿಸಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದರು.

ಪ್ರಕರಣವು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪಿಎಸ್‌ಐ ಭರಮಪ್ಪ ಬೆಳಗಲಿ ಅವರ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ. ಅಕ್ರಮ ಜಾನುವಾರು ಸಾಗಾಟದ ಜಾಲ ಹಾಗೂ ಇದರಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0